
ಮುಂಬೈ (ಏ.2): ಭಾರತೀಯ ಕಲಾ ಇತಿಹಾಸದಲ್ಲೇ ಅತಿದೊಡಗಡ ಕಲಾಕೃತಿ ಖರೀದಿಯ ಸುದ್ದಿ ಹೊರಬಿದ್ದಿದೆ. ಪ್ರಸಿದ್ಧ ಕಲಾವಿದ ರಾಜಾ ರವಿವರ್ಮ ಅವರು 1890ರ ದಶಕದಲ್ಲಿ ರಚಿಸಿದ ಅತ್ಯಂತ ಅಪರೂಪದ ತೈಲ ವರ್ಣಚಿತ್ರ 'ಯಶೋದಾ ಮತ್ತು ಕೃಷ್ಣ' (Yashoda and Krishna), ಮುಂಬೈನಲ್ಲಿ ನಡೆದ ಸ್ಯಾಫ್ರನ್ ಆರ್ಟ್‌ನ (Saffronart) ಸ್ಪ್ರಿಂಗ್ ಲೈವ್ ಹರಾಜಿನಲ್ಲಿ ಭಾರಿ ಬೆಲೆಗೆ ಮಾರಾಟವಾಗಿದೆ.
ಕೇವಲ ಏಳು ನಿಮಿಷಗಳ ಬಿರುಸಿನ ಬಿಡ್ಡಿಂಗ್ ಪ್ರಕ್ರಿಯೆಯ ನಂತರ, ಈ ಕಲಾಕೃತಿಯು ಬರೋಬ್ಬರಿ 167.2 ಕೋಟಿ ರೂಪಾಯಿಗೆ (ಸುಮಾರು 18 ಮಿಲಿಯನ್ ಡಾಲರ್) ಮಾರಾಟವಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕ ಮತ್ತು ಖ್ಯಾತ ಕೈಗಾರಿಕೋದ್ಯಮಿ ಸೈರಸ್ ಎಸ್. ಪೂನಾವಾಲಾ ಅವರು ಈ ಅಮೂಲ್ಯ ಕೃತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರಂಭದಲ್ಲಿ ಈ ಕೃತಿಯ ಬೆಲೆ 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು, ಆದರೆ ಹರಾಜಿನಲ್ಲಿ ಆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿರುವುದು ಅಚ್ಚರಿ ಮೂಡಿಸಿದೆ.
ಶ್ರೀಮದ್ ಭಾಗವತದ ದೃಶ್ಯವೊಂದನ್ನು ಆಧರಿಸಿದ ಈ ಚಿತ್ರದಲ್ಲಿ, ಯಶೋದೆಯು ಹಸುವಿನ ಹಾಲು ಕರೆಯುತ್ತಿದ್ದರೆ, ಬಾಲಕೃಷ್ಣ ಹಾಲಿಗಾಗಿ ಕೈ ಚಾಚುವ ದೃಶ್ಯವನ್ನು ರವಿವರ್ಮ ಅದ್ಭುತವಾಗಿ ಚಿತ್ರಿಸಿದ್ದಾರೆ. ಸಾಂಪ್ರದಾಯಿಕ ಭಾರತೀಯ ಪೌರಾಣಿಕ ವಿಷಯಗಳನ್ನು ಯುರೋಪಿಯನ್ ತಂತ್ರಗಾರಿಕೆಯಾದ 'ಕಿಯಾರೊಸ್ಕುರೊ' (Chiaroscuro) ಜೊತೆಗೆ ಬೆರೆಸುವಲ್ಲಿ ರವಿವರ್ಮ ಸಿದ್ಧಹಸ್ತರಾಗಿದ್ದರು. ತಜ್ಞರು ಈ ಕಲಾಕೃತಿಯನ್ನು ಭಾರತೀಯ ಕಲೆಯ 'ಮೋನಾ ಲೀಸಾ' ಎಂದು ಬಣ್ಣಿಸಿದ್ದಾರೆ. ಇದು ಕೇವಲ ಚಿತ್ರವಲ್ಲ, ಒಂದು ಪವಿತ್ರ ಅನುಭವ ಎಂದು ಪರಿಗಣಿಸಲಾಗಿದೆ.
ರಾಜಾ ರವಿವರ್ಮ ವಿರಚಿತ ಯಶೋದಾ-ಕೃಷ್ಣ ಕಲಾಕೃತಿ
ಈ ಕಲಾಕೃತಿಯನ್ನು ಖರೀದಿಸಿರುವುದು ತಮಗೆ ದೊರೆತ "ಸೌಭಾಗ್ಯ ಮತ್ತು ಜವಾಬ್ದಾರಿ" ಎಂದು ಸೈರಸ್ ಪೂನಾವಾಲಾ ಹೇಳಿದ್ದಾರೆ. ಅಲ್ಲದೆ, ಈ ಅಪರೂಪದ ಚಿತ್ರವನ್ನು ಸಾರ್ವಜನಿಕರಿಗೆ ನಿಯಮಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಸ್ಯಾಫ್ರನ್ ಆರ್ಟ್‌ನ ಸಹ-ಸಂಸ್ಥಾಪಕಿ ಮಿನಾಲ್ ವಜಿರಾನಿ ಅವರ ಪ್ರಕಾರ, ಕಳೆದ ವರ್ಷ ಎಂ.ಎಫ್. ಹುಸೇನ್ ಅವರ ಕಲಾಕೃತಿಯು 118 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು, ಆದರೆ ಇದೀಗ ರಾಜಾ ರವಿವರ್ಮ ಅವರ ಈ ಕೃತಿ ಆ ದಾಖಲೆಯನ್ನು ಅಳಿಸಿಹಾಕಿ, ಭಾರತೀಯ ಕಲೆಯ ಜಾಗತಿಕ ಮೌಲ್ಯವನ್ನು ಎತ್ತಿ ತೋರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ