
ಈಶಾನ್ಯ ಭಾರತದಲ್ಲಿ ಮಳೆಯ ರೌದ್ರನರ್ತನಕ್ಕೆ ಅಕ್ಷರಶ ಜನ ತತ್ತರಿಸಿ ಹೋಗಿದ್ದಾರೆ. ಮಳೆಯಿಂದಾಗಿ ಭಯಾನಕ ಪ್ರವಾಹ ಉಂಟಾಗಿದ್ದು, ನೋಡು ನೋಡುತ್ತಿದ್ದಂತೆ ಮನೆಯೊಂದು ಕೊಚ್ಚಿ ಹೋಗಿದೆ. ಇದರ ಜೊತೆ ಪ್ರವಾಹದ ಭಯಾನಕ ಚಿತ್ರಣ ಸಾರುವ ಹಲವು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರವಾಹದ ರೌದ್ರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಮೇ ತಿಂಗಳ ಮಳೆಯ ಅವಾಂತರಕ್ಕೆ ಈಶಾನ್ಯ ರಾಜ್ಯಗಳು ಅಕ್ಷರಶಃ ದೃತಿಗೆಟ್ಟಿವೆ. ಬೇಸಿಗೆಯ ಮಾರಕ ಬಿಸಿಲಿನ ಶಾಖವನ್ನು ತಡೆದುಕೊಳ್ಳಲು ಯೋಜನೆ ರೂಪಿಸಿದ್ದ ಜನರಿಗೆ ಈ ಬಾರಿಯ ಮೇ ಮಳೆ ದೊಡ್ಡ ಆಘಾತವನ್ನೇ ನೀಡಿದೆ. ಈಶಾನ್ಯ ಭಾರತ, ಉತ್ತರ ಅಸ್ಸಾಂ, ಮಣಿಪುರ, ಮತ್ತುಅರುಣಾಚಲ ಪ್ರದೇಶಲ್ಲಿ ಮೇ 30 ರಿಂದ ಸುರಿದ ತೀವ್ರ ಮಳೆ, ಭಾರಿ ಪ್ರವಾಹ ಹಾಗೂ ಭೂಕುಸಿತಕ್ಕೆ ಕಾರಣವಾಗಿದ್ದು, ಕೇವಲ 24 ಗಂಟೆಯಲ್ಲಿ ಮಳೆಯಿಂದಾಗಿ ಈ ಭಾಗದಲ್ಲಿ ಒಟ್ಟು 32 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 4 ಲಕ್ಷಕ್ಕೂ ಹೆಚ್ಚು ಜನ ಅತಂತ್ರ ಸ್ಥಿತಿಯಲ್ಲಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಪ್ರವಾಹದಿಂದ ಪಾರಾಗಿ ಜೀವ ಉಳಿಸಿಕೊಂಡಿರುವವರ ರಕ್ಷಣೆಗೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು. ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ಈ ಮಧ್ಯೆ ಪ್ರವಾಹದ ನಡುವೆಯೂ ನೀರಿನ ಮಧ್ಯದಲ್ಲಿ ಸಿಲುಕಿ ಸುರಕ್ಷಿತ ಸ್ಥಳಕ್ಕೆ ಹೋದಂತಹ ಅಲ್ಲಿನ ಕೆಲ ವೀಡಿಯೋಗಳು ಈಗ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅದೇ ರೀತಿ ಈಗ ಮಣಿಪುರದಲ್ಲಿನ ವೀಡಿಯೋವೊಂದರಲ್ಲಿ ನೋಡು ನೋಡುತ್ತಿದ್ದಂತೆ ಮನೆಯೊಂದು ಜಲಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಕೊಚ್ಚಿ ಹೋಗಿದೆ. ಈ ವೀಡಿಯೋವನ್ನು @NiteshDabadi ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ಮಣಿಪುರದ ಹೃದಯವಿದ್ರಾವಕ ದೃಶ್ಯಗಳು,- ಪ್ರಬಲವಾದ ಪ್ರವಾಹದಿಂದ ಮನೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ವಿನಾಶವು ಊಹಿಸಲೂ ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಮತ್ತೊಬ್ಬರು ಅಲ್ಲಿನ ಪ್ರವಾಹ ಚಿತ್ರಣಗಳ ವೀಡಿಯೋ ಪೋಸ್ಟ್ ಮಾಡಿದ್ದು, 'ಪ್ರಿಯ ಭಾರತೀಯರೇ. ದಯವಿಟ್ಟು ಈಶಾನ್ಯ ಭಾರತಕ್ಕಾಗಿ ಪ್ರಾರ್ಥಿಸಿ' ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡ ಪೋಟೊಗಳಲ್ಲಿ ಮಳೆಯ ರೌದ್ರತೆಯ ಹಲವು ಚಿತ್ರಗಳಿವೆ.
ಅಸ್ಸಾಂನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಳಲುತ್ತಿದ್ದಾರೆ; ಮಣಿಪುರದಲ್ಲಿ 19,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಅರುಣಾಚಲದಲ್ಲಿ ಭೂಕುಸಿತದಿಂದ ಅನೇಕರು ತತ್ತರಿಸಿದ್ದಾರೆ., ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ಮೇಘಾಲಯದಲ್ಲಿಯೂ ಸಹ ಪ್ರವಾಹ ಉಕ್ಕಿ ಹರಿಯುತ್ತಿದೆ. ಆದರೆ ನೋಯ್ಡಾದಲ್ಲಿ ಡ್ರೈನ್ ಪೈಪ್ ಒಡೆದರೆ, ಅದೇ ದೊಡ್ಡ ಬ್ರೇಕಿಂಗ್ ನ್ಯೂಸ್. ಆದರೆ ಈಶಾನ್ಯದ ಈ ದುರಂತ ಸುದ್ದಿಗಳು ಕೂಡ ಮಾಧ್ಯಮಗಳ ಗಮನಕ್ಕೆ ಬರಲಿ, ದೂರ ಇದೆ ಎಂದು ಈ ವಿಚಾರ ನಿರ್ಲಕ್ಷ್ಯಕ್ಕೆ ಒಳಗಾಗದೇ ಇರಲಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಹಾಗೆಯೇ @WeatherMonitors ಎಂಬುವವರು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಯುವಕನೋರ್ವ ತುಂಬಿ ಹರಿಯುತ್ತಿರುವ ನದಿಯನ್ನು ದಾಟುವ ದೃಶ್ಯವಿದೆ. ಇಂದು ಭಾರತದ ಅರುಣಾಚಲ ಪ್ರದೇಶದ ಮಾಲಿನಿಯಲ್ಲಿ ತುಂಬಿ ಹರಿಯುತ್ತಿರುವ ಪ್ರವಾಹವನ್ನು ಗ್ರಾಮಸ್ಥರು ದಾಟಬೇಕಾಯಿತು. ಈಶಾನ್ಯ ಭಾರತದಲ್ಲಿ ಪ್ರವಾಹಕ್ಕೆ24 ಗಂಟೆಗಳಲ್ಲಿ 32 ಜನ ಬಲಿಯಾಗಿದ್ದಾರೆ. ಅರುಣಾಚಲ ಪ್ರದೇಶಲ್ಲಿ 9 ಜನ ಸಾವನ್ನಪ್ಪಿದ್ದರೆ, ಅಸ್ಸಾಂನಲ್ಲಿ 11 ಸಾವನ್ನಪ್ಪಿ ದ್ದು, 175 ಗ್ರಾಮಗಳು ಜಲಾವೃತ,ವಾಗಿವೆ. 78,000ಕ್ಕೂ ಹೆಚ್ಚು ಜನ ಪ್ರವಾಹ ಪೀಡಿತರಾಗಿದ್ದಾರೆ. ಮೇಘಾಲಯದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಮೀಜೋರಾಂನಲ್ಲಿ 6 ಮಂದಿ ಹಾಗೂ ನಾಗಲ್ಯಾಂಡ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ