
ಕನೌಜ್(ಡಿ.27): ಕನೌಜ್‌ನಲ್ಲಿರುವ ಪಿಯೂಷ್ ಜೈನ್ ನಿವಾಸದ ಮೇಲೆ ಡಿಜಿಜಿಐ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಕಾರ್ಖಾನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಟ್ಯಾಂಕ್ ಪತ್ತೆಯಾಗಿದೆ. ಮುಚ್ಚಿದ ಈ ತೊಟ್ಟಿಯಲ್ಲಿ 17 ಕೋಟಿ ನಗದು, 23 ಕೆಜಿ ಚಿನ್ನ ಹಾಗೂ 600 ಕೆಜಿ ಗಂಧ ಪತ್ತೆಯಾಗಿದೆ. ಚಿನ್ನದ ಮೇಲೆ ಅಂತರಾಷ್ಟ್ರೀಯ ಗುರುತೂ ಕಂಡು ಬಂದಿದೆ. ದಾಳಿ ವೇಳೆ ಇಡೀ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದ್ದು, ಬಳಿಕ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ, ಪಿಯೂಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಎಲ್ಲಾ ನಿವಾಸಗಳು ಮತ್ತು ಗೋಡೌನ್‌ಗಳ ಮೇಲೆ ಆದಾಯ ತೆರಿಗೆ ದಾಳಿಯ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕೋಟಿಗಟ್ಟಲೆ ನಗದಿನ ಜತೆಗೆ ಕೆಜಿಗಟ್ಟಲೆ ಚಿನ್ನಾಭರಣ ಕಂಡು ಅಧಿಕಾರಿಗಳು ನಿದ್ದೆ ಕಳೆದುಕೊಂಡಿದ್ದಾರೆ. ಇದರಿಂದಾಗಿ ಯುಪಿಯ ರಾಜಕೀಯದಲ್ಲೂ ಭಾರೀ ಕಾವೇರಿದೆ.
ಲೆಕ್ಕಕ್ಕೆ ಸಿಗದ ಸಂಪತ್ತು ಪತ್ತೆ
ಐಟಿ ಮತ್ತು ಜಿಎಸ್‌ಟಿ ಇಲಾಖೆ ಕೈಗೊಂಡ ದಾಳಿಯಲ್ಲಿ 187 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ನಗದು ಪತ್ತೆಯಾಗಿದೆ. ಅಲ್ಲದೇ ಲೆಕ್ಕಕ್ಕೆ ಸಿಗದ ಕಚ್ಚಾ ಮತ್ತು ಸಿದ್ಧಪಡಿಸಿದ ಸರಕುಗಳನ್ನು ವಶಪಡಿಸಿಕೊಂಡ ನಂತರ ಅವರನ್ನು CGST ಕಾಯಿದೆಯ ಸೆಕ್ಷನ್ 67 ರ ಅಡಿಯಲ್ಲಿ ಬಂಧಿಸಲಾಗಿದೆ.
ವಿಚಾರ ಬಹಿರಂಗಪಡಿಸಿದ ಪಿಯೂಷ್
ಬಂಧನದ ಬಗ್ಗೆ ಮಾಹಿತಿ ನೀಡಿದ ಡಿಜಿಜಿಐ ನಿವಾಸದಿಂದ ವಶಪಡಿಸಿಕೊಂಡ ನಗದು ಜಿಎಸ್‌ಟಿ ಪಾವತಿಯಿಲ್ಲದೆ ಸರಕುಗಳ ಮಾರಾಟಕ್ಕೆ ಸಂಬಂಧಿಸಿದೆ ಎಂದು ಪಿಯೂಷ್ ಜೈನ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ದೊಡ್ಡ ಪ್ರಮಾಣದ GST ವಂಚನೆಯನ್ನು ಕನೌಜ್‌ನ ಓಡೋಕೆಮ್ ಇಂಡಸ್ಟ್ರೀಸ್ ಸೂಚಿಸುತ್ತದೆ. ದಾಖಲೆಯಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ.
ಪಿಯೂಷ್ ಜೈನ್ ಯಾರು?
ವಾಸ್ತವವಾಗಿ, ಪಿಯೂಷ್ ಜೈನ್ ಕನೌಜ್ ಮತ್ತು ಕಾನ್ಪುರದ ದೊಡ್ಡ ಸುಗಂಧ ದ್ರವ್ಯ ವ್ಯಾಪಾರಿ. ಪಿಯೂಷ್ ಕನೌಜ್‌ನಲ್ಲಿ ಜನಿಸಿ, ಅಲ್ಲಿಯೂ ಮನೆ ಹೊಂದಿದ್ದಾರೆ. ಜೈನ್ 40 ಕ್ಕೂ ಹೆಚ್ಚು ಕಂಪನಿಗಳ ಮಾಲೀಕರಾಗಿದ್ದು, ಆಶ್ಚರ್ಯಕರ ವಿಷಯವೆಂದರೆ ಅದರ ಎರಡು ಕಂಪನಿಗಳು ಮಧ್ಯಪ್ರಾಚ್ಯದಲ್ಲಿಯೂ ಇವೆ. ಕನ್ನೌಜ್‌ನಲ್ಲಿ ಜೈನ್‌ನ ಸುಗಂಧ ದ್ರವ್ಯ ಕಾರ್ಖಾನೆಯೊಂದಿಗೆ ಕೋಲ್ಡ್ ಸ್ಟೋರೇಜ್ ಮತ್ತು ಪೆಟ್ರೋಲ್ ಪಂಪ್‌ಗಳೂ ಇವೆ. ಪಿಯೂಷ್ ಮುಂಬೈನಲ್ಲಿ ತಮ್ಮ ಕಂಪನಿಗಳ ಮುಖ್ಯ ಕಚೇರಿಯನ್ನು ಮಾಡಿಕೊಂಡಿದ್ದಾರೆ ಮತ್ತು ಇಲ್ಲಿಂದ ಅವರ ಕಂಪನಿಯ ಸುಗಂಧ ದ್ರವ್ಯವನ್ನು ವಿದೇಶಕ್ಕೆ ರಫ್ತು ಮಾಡುತ್ತಾರೆ. ಮಾಹಿತಿ ಪ್ರಕಾರ ಪಿಯೂಷ್ ಮುಂಬೈನಲ್ಲಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆನ್ನಲಾಗಿದೆ.
ಹಾಸಿಗೆಯಲ್ಲಿ ತುಂಬಿದ್ದ ನೋಟುಗಳು
ಆದಾಯ ತೆರಿಗೆ ಇಲಾಖೆ ಮತ್ತು ಡಿಜಿಜಿಐ ತಂಡ ಜೈನ್ ಅವರ ಮನೆ ಮೇಲೆ ದಾಳಿ ನಡೆಸಿದೆ. ಸುಮಾರು 36 ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ ಅಧಿಕಾರಿಗಳು ಸುಮಾರು 180 ಕೋಟಿ ರೂ. ನಗದು ಪತ್ತೆ ಹಚ್ಚಿದ್ದಾರೆ. ಗೋಡೆ, ಕಪಾಟು ಮಾತ್ರವಲ್ಲದೇ ನೋಟುಗಳ ಬಂಡಲ್ ಗಳು ಹಾಸಿಗೆಯಲ್ಲೂ ತುಂಬಿಸಿಡಲಾಗಿತ್ತೆನ್ನಲಾಗಿದೆ. ಇಷ್ಟು ಹಣ ಸಾಗಿಸಲು ಅಧಿಕಾರಿಗಳೂ ಕಷ್ಟಪಡಬೇಕಾಗಿದ್ದು, ಇದಕ್ಕಾಗಿ 80 ಬಾಕ್ಸ್‌ಗಳಿಗೆ ಆರ್ಡರ್ ಮಾಡಲಾಗಿದೆ. ದಾಳಿಯ ವೇಳೆ ಮನೆಯ ಒಳಗೆ ಮತ್ತು ಹೊರಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ