2019ರಲ್ಲೇ ನಿಧನರಾದ ಜೇಟ್ಲಿ 20ರಲ್ಲಿ ಬೆದರಿಸಿದ್ದರೆಂದು ರಾಹುಲ್‌ ಮತ್ತೊಂದು ಅವಾಂತರ

Kannadaprabha News   | Kannada Prabha
Published : Aug 03, 2025, 06:00 AM IST
Rahul Gandhi

ಸಾರಾಂಶ

ನಾನು ಕೃಷಿ ಕಾನೂನುಗಳ (2020ರಲ್ಲಿ ಜಾರಿ ಆಗಿದ್ದ ಕಾನೂನು) ವಿರುದ್ಧ ಹೋರಾಡುತ್ತಿದ್ದಾಗ, ಅರುಣ್ ಜೇಟ್ಲಿ ಅವರನ್ನು ನನಗೆ ಬೆದರಿಕೆ ಹಾಕಲು ಕಳುಹಿಸಲಾಗಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಫೋಟಕ ಆರೋಪ ಮಾಡಿದ್ದಾರೆ.

ನವದೆಹಲಿ : ನಾನು ಕೃಷಿ ಕಾನೂನುಗಳ (2020ರಲ್ಲಿ ಜಾರಿ ಆಗಿದ್ದ ಕಾನೂನು) ವಿರುದ್ಧ ಹೋರಾಡುತ್ತಿದ್ದಾಗ, ಅರುಣ್ ಜೇಟ್ಲಿ ಅವರನ್ನು ನನಗೆ ಬೆದರಿಕೆ ಹಾಕಲು ಕಳುಹಿಸಲಾಗಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಫೋಟಕ ಆರೋಪ ಮಾಡಿದ್ದಾರೆ. ಆದರೆ ‘ಇದು ಸುಳ್ಳು ಆರೋಪ. 2019ರಲ್ಲೇ ಜೇಟ್ಲಿ ನಿಧನರಾಗಿದ್ದರು. 2020ರಲ್ಲಿ ಅವರು ಹೇಗೆ ಬೆದರಿಸಲು ಸಾಧ್ಯ?’ ಎಂದು ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಹಾಗೂ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಕಾಂಗ್ರೆಸ್‌ನ ವಾರ್ಷಿಕ ಕಾನೂನು ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಾನು ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾಗ, ಅರುಣ್ ಜೇಟ್ಲಿ ಅವರನ್ನು ನನಗೆ ಬೆದರಿಕೆ ಹಾಕಲು ಕಳುಹಿಸಲಾಗಿತ್ತು ಎಂದು ನನಗೆ ನೆನಪಿದೆ. ಅವರು, ‘ನೀವು ಸರ್ಕಾರವನ್ನು ವಿರೋಧಿಸುವುದನ್ನು ಮುಂದುವರಿಸಿದರೆ, ಕೃಷಿ ಕಾನೂನುಗಳ ವಿರುದ್ಧ ಹೋರಾಡಿದರೆ, ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ನನಗೆ ಹೇಳಿದರು. ನಾನು ಅವರನ್ನು ನೋಡಿ ‘ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ನಿಮಗೆ ಗೊತ್ತಿಲ್ಲ ಎನ್ನಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಕಾಂಗ್ರೆಸ್ ಜನರು, ಮತ್ತು ನಾವು ಹೇಡಿಗಳಲ್ಲ. ನಾವು ಎಂದಿಗೂ ಬಾಗುವುದಿಲ್ಲ. ಬ್ರಿಟಿಷರೇ ನಮ್ಮನ್ನು ಬಗ್ಗಿಸಲು ಆಗಲಿಲ್ಲ’ ಎಂದು ಹೇಳಿ ಕಳಿಸಿದೆ’ ಎಂದರು.

ಸುಳ್ಳು ಆರೋಪ- ಜೇಟ್ಲಿ ಪುತ್ರ:

ಜೇಟ್ಲಿ ಪುತ್ರ ರೋಹನ್‌ ಇದಕ್ಕೆ ಪ್ರತಿಕ್ರಿಯಿಸಿ, ‘ಕೃಷಿ ಕಾನೂನುಗಳನ್ನು 2020 ರಲ್ಲಿ ಪರಿಚಯಿಸಲಾಯಿತು. ಹೋರಾಟ ಆಗ ನಡೆದಿತ್ತು. ಆದರೆ ನನ್ನ ತಂದೆ ತೀರಿಕೊಂಡಿದ್ದು 2019ರಲ್ಲಿ. ಹೀಗಿದ್ದಾಗ ಅವರು ಹೇಗೆ ರಾಹುಲ್‌ಗೆ 1 ವರ್ಷ ಮೊದಲೇ ಬೆದರಿಕೆ ಹಾಕಲು ಸಾಧ್ಯ. ಮೃತರ ಬಗ್ಗೆ ಮಾತನಾಡುವಾಗ ರಾಹುಲ್‌ ಎಚ್ಚರಿಕೆ ವಹಿಸಬೇಕು’ ಎಂದಿದ್ದಾರೆ.

ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ಕೂಡ ಇದೇ ನುಡಿಗಳನ್ನು ಆಡಿದ್ದು, ‘ರಾಹುಲ್‌ ಆರೋಪ ಫೇಕ್‌ ನ್ಯೂಸ್’ ಎಂದಿದ್ದಾರೆ.

ನಾನು ರಾಜ ಆಗಲು ಬಯಸಲ್ಲ: ಮೋದಿಗೆ ರಾಗಾ ಟಾಂಗ್‌

‘ನಾನು ರಾಜನಾಗಲು ಬಯಸುವುದಿಲ್ಲ ಮತ್ತು ಅದರ ಪರಿಕಲ್ಪನೆಯನ್ನೇ ವಿರೋಧಿಸುತ್ತೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಈ ಮೂಲಕ ತಮ್ಮನ್ನು ಈ ಹಿಂದೆ ರಾಜ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್‌ ನೀಡಿದ್ದಾರೆ.

‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನಗಳು ಮತ್ತು ಮಾರ್ಗಗಳು’ ಎಂಬ ಸಮಾವೇಶದಲ್ಲಿ ಅವರು ಮಾತನಾಡುವ ವೇಳೆ ಸಭಿಕರು ‘ಇಸ್ ದೇಶ್ ಕಾ ರಾಜಾ ಕೈಸಾ ಹೋ, ರಾಹುಲ್ ಗಾಂಧಿ ಜೈಸಾ ಹೋ’ ಎಂಬ ಘೋಷಣೆ ಕೂಗಲಾರಂಭಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಾಂಧಿ, ‘ಇಲ್ಲ ಬಾಸ್, ಮೈ ರಾಜಾ ನಹೀಂ ಹುಂ. ರಾಜಾ ಬನಾನಾ ಭೀ ನಹಿಂ ಚಾಹತಾ ಹೂಂ. ಮೈ ರಾಜಾ ಕೇ ವಿರುದ್ಧ ಹೂಂ.. ಕಾನ್ಸೆಪ್ಟ್ ಕೆ ಭೀ ವಿರುದ್ಧ ಹೂಂ..’ (ಇಲ್ಲ ಬಾಸ್, ನಾನು ರಾಜನಲ್ಲ. ನಾನು ರಾಜನಾಗಲು ಬಯಸುವುದಿಲ್ಲ. ನಾನು ರಾಜನ ವಿರುದ್ಧ, ನಾನು ಪರಿಕಲ್ಪನೆಗೆ ವಿರುದ್ಧವಾಗಿದ್ದೇನೆ) ಎಂದು ಪ್ರತಿಕ್ರಿಯಿಸಿದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾಜ’ ಎಂದು ಟೀಕಿಸಿದ್ದ ರಾಹುಲ್, ‘ಅವರು ಜನರ ಧ್ವನಿಯನ್ನು ಕೇಳುತ್ತಿಲ್ಲ’ ಎಂದು ಆರೋಪಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ
ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!