ಲೋಕಸಭಾ ಚುನಾವಣೆಯಲ್ಲಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಮೀಸಲು ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಆರ್‌ಎಸ್‌ಎಸ್ ಎಂದಿಗೂ ಮೀಸಲು ವಿರೋಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿದ, ಈ ಹಿಂದೆ ಆರ್‌ಎಸ್‌ಎಸ್ ಮೀಸಲಿಗೆ ವಿರೋಧ ವ್ಯಕ್ತಪಡಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.
ದಮನ್ (ಏ.29): ‘ಆರ್‌ಎಸ್‌ಎಸ್ ಈಗ ತಾನು ಮೀಸಲಾತಿಯ ವಿರುದ್ಧ ಅಲ್ಲ ಎಂದು ಹೇಳುತ್ತಿದ್ದರೂ, ಅದರ ನಾಯಕರು ಈ ಹಿಂದೆ ಮೀಸಲು ವಿರೋಧಿಸುವ ಬಗ್ಗೆ ಮಾತನಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ನಾಯಕರನ್ನು ದೇಶದ ‘ರಾಜ’ರನ್ನಾಗಿ (ಏಕಚಕ್ರಾಧಿಪತ್ಯ) ಮಾಡಲು ಸಂವಿಧಾನ ಮತ್ತು ವಿವಿಧ ಸಂಸ್ಥೆಗಳನ್ನು ನಾಶಮಾಡಲು ಪ್ರಯತ್ನಿಸುತ್ತಿವೆ’ ಎಂದು ಆರೋಪಿಸಿದರು.
ಪಟಿಯಾಲಾದಲ್ಲಿ ಬಿಜೆಪಿಯಿಂದ ಅಮರೀಂದರ್ ಪತ್ನಿ vs ಕಾಂಗ್ರೆಸ್ vs ಆಪ್ ಬಿಗ್ ಫೈಟ್
ಗಮನಾರ್ಹವಾಗಿ, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದೇ ದಿನ ಹೈದರಾಬಾದ್‌ನಲ್ಲಿ ಮಾತನಾಡಿ, ‘ಸಂಘಟನೆಯು ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಯಾವಾಗಲೂ ಬೆಂಬಲಿಸುತ್ತದೆ. ಎಂದೂ ಅದನ್ನು ವಿರೋಧಿಸಿರಲಿಲ್ಲ’ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿದ ರಾಹುಲ್, ‘ಇಂದು ಆರೆಸ್ಸೆಸ್ ಇಂದು ಮೀಸಲಾತಿಗೆ ವಿರುದ್ಧವಾಗಿಲ್ಲ ಎಂದು ಹೇಳುತ್ತಿದೆ. ಆದರೆ ಈ ಮೊದಲು ಅವರು ಮೀಸಲಾತಿಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದರು. ತಳಹದಿಯ ಮಟ್ಟದಲ್ಲಿ, ನಮ್ಮ ಹಾಗೂ ಆರೆಸ್ಸೆಸ್ ಸಿದ್ಧಾಂತಗಳ ನಡುವಿನ ವ್ಯತ್ಯಾಸವೆಂದರೆ ನಾವು ಸಂವಿಧಾನವನ್ನು ಮತ್ತು ಅದು ದೇಶಕ್ಕೆ ನೀಡಿರುವ ಎಲ್ಲವನ್ನೂ ರಕ್ಷಿಸುತ್ತಿದ್ದೇವೆ. ಮತ್ತೊಂದೆಡೆ, ಆರೆಸ್ಸೆಸ್ ಮತ್ತು ಬಿಜೆಪಿಯ ಗುರಿ ಸಂವಿಧಾನವನ್ನು ಹೇಗಾದರೂ ನಾಶಪಡಿಸುವುದು’ ಎಂದು ಟೀಕಿಸಿದರು.
‘ಸಂವಿಧಾನವು ದೇಶದ ಅಡಿಪಾಯವಾಗಿ ಕಾರ್ಯನಿರ್ವಹಿಸಿದೆ. ಅದರ ಬೀಜಗಳಿಂದ ಇಂದು ಸಾಂವಿಧಾನಿಕ ಸಂಸ್ಥೆಗಳು ಬೆಳೆದು ನಿಂತಿವೆ. ಆದರೆ ಅವರು (ಬಿಜೆಪಿ-ಆರೆಸ್ಸೆಸ್) ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಮತ್ತು ವಿವಿಧ ಸಂಸ್ಥೆಗಳನ್ನು ನಾಶಮಾಡಲು ಬಯಸುತ್ತಾರೆ ಮತ್ತು ತಮ್ಮ ನಾಯಕರನ್ನು ರಾಜರನ್ನಾಗಿ ಮಾಡಲು ಬಯಸುತ್ತಾರೆ’ ಎಂದು ಕಿಡಿಕಾರಿದರು.
Hassan Sex Scandal: HD ರೇವಣ್ಣ ಎ1 , ಪ್ರಜ್ವಲ್ ಎ2 ಆರೋಪಿ, ಪಿನ್ ಟು ಪಿನ್ ಕಥೆ ಹೇಳಿದ ಸಂತ್ರಸ್ಥೆ!
ಆರ್‌ಎಸ್‌ಎಸ್ ಎಂದಿಗೂ ಮೀಸಲು ವಿರೋಧಿಸಿಲ್ಲ: ಲೋಕಸಭಾ ಚುನಾವಣೆಯಲ್ಲಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಮೀಸಲು ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಆರ್‌ಎಸ್‌ಎಸ್ ಎಂದಿಗೂ ಮೀಸಲು ವಿರೋಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿದ, ಈ ಹಿಂದೆ ಆರ್‌ಎಸ್‌ಎಸ್ ಮೀಸಲಿಗೆ ವಿರೋಧ ವ್ಯಕ್ತಪಡಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.
ಮೀಸಲಾತಿಯನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರೋಧಿಸುತ್ತವೆ ಎಂದು ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಿರುವಾಗಲೇ, ಸಂವಿಧಾನಬದ್ಧವಾಗಿ ಮೀಸಲಾತಿಯನ್ನು ಆರ್‌ಎಸ್‌ಎಸ್ ಎಂದಿಗೂ ಬೆಂಬಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, ಆರ್‌ಎಸ್‌ಎಸ್ ಮೀಸಲಾತಿ ವ್ಯವಸ್ಥೆಗೆ ವಿರುದ್ಧವಿದೆ ಎಂಬ ವಿಡಿಯೋವೊಂದು ಹರಿದಾಡುತ್ತಿದೆ. ಅದು ಸುಳ್ಳು. ಮೀಸಲಾತಿ ಆರಂಭವಾದಾಗಿನಿಂದಲೂ ಸಂವಿಧಾನಬದ್ಧವಾಗಿ ಅದನ್ನು ಆರ್‌ಎಸ್‌ಎಸ್ ಬೆಂಬಲಿಸಿಕೊಂಡು ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮೀಸಲಾತಿ ಸಂಬಂಧ ವಾಕ್ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಭಾಗವತ್ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹ. ಶನಿವಾರವಷ್ಟೇ ಮಾತನಾಡಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ಆರ್‌ಎಸ್‌ಎಸ್- ಬಿಜೆಪಿ ಮೀಸಲಾತಿಯನ್ನು ವಿರೋಧಿಸುತ್ತವೆ ಎಂದು ಟೀಕಿಸಿದ್ದರು.
ತಾರತಮ್ಯ ಮೇಲ್ನೋಟಕ್ಕೆ ಕಾಣದೇ ಇದ್ದರೂ ಅದು ಇದೆ. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ನಾಗಪುರದಲ್ಲಿ ಕಳೆದ ವರ್ಷವೇ ಭಾಗವತ್ ಅವರು ಸ್ಪಷ್ಟಪಡಿಸಿದ್ದರು.
ಬಿಜೆಪಿ ಎಸ್ಸಿ, ಎಸ್ಟಿ, ಒಬಿಸಿ ಮೀಸಲು ತೆಗೆಯಲ್ಲ: ಶಾ
ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಾತಿ ಮೀಸಲಾತಿ ಜಟಾಪಟಿ ಜೋರಾಗಿದೆ. ಈ ವಿಚಾರದಲ್ಲಿ ನಾಯಕರ ವಾಕ್ಸಮರ ಭಾನುವಾರವೂ ಮುಂದುವರೆದಿದೆ. ‘ ಬಿಜೆಪಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಮೀಸಲಾತಿ ತೆಗೆದು ಹಾಕುವುದಿಲ್ಲ. ಅಲ್ಲದೇ ಈ ರೀತಿ ಮಾಡುವವರಿಗೆ ಅವಕಾಶವನ್ನು ನೀಡುವುದಿಲ್ಲ. ಇದು ಮೋದಿ ಗ್ಯಾರಂಟಿ ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತದೆ ಎನ್ನುವ ವಿಪಕ್ಷಗಳ ಆರೋಪಕ್ಕೂ ಶಾ ತಿರುಗೇಟು ಕೊಟ್ಟಿದ್ದಾರೆ. ‘ ಬಿಜೆಪಿ 400 ಸೀಟ್ ಗೆದ್ದರೆ ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ . ಆದರೆ ನಾವು ಎರಡು ಅವಧಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದೆವು. ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ, ಆ ರೀತಿ ಮಾಡುವುದಕ್ಕೆ ಅವಕಾಶವೂ ನೀಡಲ್ಲ ’ ಎಂದು ತಿರುಗೇಟು ಕೊಟ್ಟಿದ್ದಾರೆ.