ಕೇಂದ್ರದ ‘ಹಿಂದಿ ಹೇರಿಕೆ’ಗೆ ರಾಹುಲ್‌ ತೀವ್ರ ವಿರೋಧ

By Kannadaprabha NewsFirst Published Dec 20, 2022, 7:59 AM IST
Highlights

ಬಿಜೆಪಿ ಇಂಗ್ಲಿಷ್‌ ಭಾಷೆ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿದ್ದು, ಶಾಲೆಯಲ್ಲಿ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ.

ಅಳ್ವರ್‌ (ರಾಜಸ್ಥಾನ): ‘ಬಿಜೆಪಿ ಇಂಗ್ಲಿಷ್‌ ಭಾಷೆ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿದ್ದು, ಶಾಲೆಯಲ್ಲಿ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ. ಈ ಮೂಲಕ ಹಿಂದಿ ಪರ ಕೇಂದ್ರ ಸರ್ಕಾರದ ನಿಲುವನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ರಾಜಸ್ಥಾನದ ಅಳ್ವರ್‌ನಲ್ಲಿ ಭಾರತ ಜೋಡೋ ಯಾತ್ರೆಯನ್ನು ನಡೆಸುತ್ತಿರುವ ರಾಹುಲ್‌ ಗಾಂಧಿ, ‘ಹಿಂದಿ ಪರ ಮಾತನಾಡುವ ನಾಯಕರ ಮಕ್ಕಳು ಇಂಗ್ಲಿಷ್‌ ಶಾಲೆಗಳಲ್ಲಿ ಕಲಿಯುತ್ತಾರೆ. ಆದರೆ ಬಡವರು ಹಾಗೂ ಕಾರ್ಮಿಕರ ಮಕ್ಕಳು ಇಂಗ್ಲಿಷ್‌ ಕಲಿತು ದೊಡ್ಡ ಕನಸು ಕಾಣುವುದು ಸರ್ಕಾರಕ್ಕೆ ಬೇಡವಾಗಿದೆ’ ಎಂದು ಕಿಡಿಕಾರಿದರು. ‘ಬೇರೆ ದೇಶದ ಜನರೊಂದಿಗೆ ಮಾತನಾಡಬೇಕಾದರೆ ಹಿಂದಿ ಭಾಷೆ ಬಳಕೆ ಸಾಧ್ಯವಾಗುವುದಿಲ್ಲ. ಆದರೆ ನಾವು ಬಡವರು, ಕಾರ್ಮಿಕರ ಮಕ್ಕಳು ಕೂಡಾ ಇಂಗ್ಲಿಷ್‌ ಕಲಿತು ಅಮೆರಿಕಕ್ಕೆ ಹೋಗಿ ಅಲ್ಲಿಯವರೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂಬ ಆಸೆ ಹೊಂದಿದ್ದೇವೆ. ರಾಜಸ್ಥಾನದಲ್ಲಿ 1700 ಇಂಗ್ಲೀಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು ಸಂತೋಷ ತಂದಿದೆ’ ಎಂದರು.

ವಯನಾಡು ಬದಲು ಅಮೇಥಿಯಿಂದ ರಾಹುಲ್ ಸ್ಪರ್ಧೆ, ಗೆಲುವು ಪಕ್ಕಾ ಎಂದ ಕಾಂಗ್ರೆಸ್ ನಾಯಕ! 

ಬಿಜೆಪಿ ಸರ್ಕಾರ ವಿದೇಶದಲ್ಲಿ ಸಿಂಹ, ದೇಶದಲ್ಲಿ ಇಲಿ

ಅಳ್ವರ್‌: ದೇಶದ ಹೊರಗಡೆ ಸಿಂಹದಂತೆ ಮಾತನಾಡುವ ಬಿಜೆಪಿ ಸರ್ಕಾರ, ಗಡಿ ಭಾಗದಲ್ಲಿ ನಡೆಯುತ್ತಿರುವ ಚೀನಾದ ಬಿಕ್ಕಟ್ಟಿನ ಬಗ್ಗೆ ಮಾತೆತ್ತಿದರೆ ಇಲಿಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಭಾರತ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಖರ್ಗೆ, ‘ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ನಿಭಾಯಿಸಲು ಬಿಜೆಪಿ ಸರ್ಕಾರ ಅಸಮರ್ಥವಾಗಿದ್ದು, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಮುಂದಾದಾಗ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ಗಲ್ವಾನ್‌ ಗಡಿಯಲ್ಲಿ 20 ಯೋಧರು ಪ್ರಾಣ ತೆತ್ತಾಗಿಯೂ ಮೋದಿ, ಚೀನಾ ಅಧ್ಯಕ್ಷರ ಜತೆ 18 ಬಾರಿ ಸಭೆ ನಡೆಸಿದರು. ಇದೆಲ್ಲ ನಡೆದರೂ ಚೀನಾ ಗಡಿಯಲ್ಲಿ ಬಿಕ್ಕಟ್ಟು ನಿಂತಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ನಾವು ನೋಟಿಸ್‌ ನೀಡಿದ್ದೇವೆ. ಆದರೂ ಸರ್ಕಾರ ಚರ್ಚೆಗೆ ಸಿದ್ಧವಿಲ್ಲ’ ಎಂದರು. ಈ ಹಿಂದೆ ಖರ್ಗೆ ಪ್ರಧಾನಿ ಮೋದಿಯವರನ್ನು ರಾವಣ ಎಂದಿದ್ದು ಕೂಡಾ ವಿವಾದ ಸೃಷ್ಟಿಸಿತ್ತು.

ಭಾರತ್ ಜೋಡೋನಲ್ಲಿ ಕರ್ನಾಟಕ ಮಾಜಿ ಸಚಿವರ ಪತ್ನಿ ಕೈಹಿಡಿದು ನಡೆದ ರಾಹುಲ್‌ ಗಾಂಧಿ

click me!