
ಕಾಂಗ್ರೆಸ್ ನಾಯಕ(Congress leader) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ(Rahul gandhi) ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. NEET-UG ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿಗ್ರಾಂ(Telegram) ಮೇಲೆ ನಿರ್ಬಂಧ ಹೇರಿರುವುದನ್ನು ಅವರು ಖಂಡಿಸಿದ್ದಾರೆ. 'ಪೇಪರ್ ಲೀಕ್ ಮಾಫಿಯಾ'ವನ್ನು ಮಟ್ಟಹಾಕುವ ಬದಲು ಸರ್ಕಾರ ವಿದ್ಯಾರ್ಥಿಗಳನ್ನೇ ಗುರಿಯಾಗಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಂಗಳವಾರ ಈ ಕ್ರಮ ಕೈಗೊಂಡಿತ್ತು. NEET (UG) 2026ರ ಮರುಪರೀಕ್ಷೆ ಮತ್ತು ಅದರ ನಂತರದ ದಿನಗಳನ್ನು ಗಮನದಲ್ಲಿಟ್ಟುಕೊಂಡು, ಜೂನ್ 22, 2026ರವರೆಗೆ ಭಾರತದಲ್ಲಿ ಟೆಲಿಗ್ರಾಂ ಪ್ಲಾಟ್‌ಫಾರ್ಮ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಟೆಲಿಗ್ರಾಂ ಬ್ಯಾನ್' ಪೇಪರ್ ಲೀಕ್‌ಗಳನ್ನು ತಡೆಯಲು ಮೋದಿ ಸರ್ಕಾರದ ಹೊಸ ತಂತ್ರ. ಅಂದರೆ, ಕಳ್ಳನನ್ನು ಹಿಡಿಯುವ ಬದಲು, ಸಂತ್ರಸ್ತರ ಮನೆಗೆ ಬೀಗ ಹಾಕಿದಂತೆ ಎಂದು ವ್ಯಂಗ್ಯವಾಡಿದ್ದಾರೆ.
ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಟೆಲಿಗ್ರಾಂನಲ್ಲಿ ನೋಟ್ಸ್, ಟೆಸ್ಟ್ ಸೀರೀಸ್, ಚರ್ಚೆಗಳು ಮತ್ತು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಈ ಸೌಲಭ್ಯವನ್ನು ಕಸಿದುಕೊಳ್ಳುವುದು ಪೇಪರ್ ಲೀಕ್‌ಗೆ ಪರಿಹಾರವಾಗುತ್ತದೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಈ ಕ್ರಮದಿಂದ ಏನೂ ಪ್ರಯೋಜನವಿಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಗೊತ್ತು, ಪೇಪರ್ ಲೀಕ್ ಮಾಫಿಯಾಕ್ಕೂ ಇದು ತಿಳಿದಿದೆ. ಹಾಗಾದರೆ, ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.
ಪರೀಕ್ಷೆಯ ದಿನ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗುತ್ತದೆ. ಕತ್ತರಿಯಿಂದ ಅವರ ಜೇಬುಗಳನ್ನು ಕತ್ತರಿಸಲಾಗುತ್ತದೆ. ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಇಂತಹ ನಾಟಕಗಳಿಗೆ ಏನೂ ಕಮ್ಮಿ ಇಲ್ಲ. ಆದರೆ ರೋಗದ ಮೂಲಕ್ಕೆ ಮಾತ್ರ ಯಾವುದೇ ಚಿಕಿತ್ಸೆ ಇಲ್ಲ. ಏಕೆಂದರೆ ಈ ಸರ್ಕಾರದ ಕಣ್ಗಾವಲಿನಲ್ಲೇ ಪೇಪರ್ ಲೀಕ್ ಮಾಫಿಯಾ ಹುಲುಸಾಗಿ ಬೆಳೆಯುತ್ತಿದೆ ಮತ್ತು ಯುವಕರ ಕಣ್ಣಲ್ಲಿ ರಕ್ತ ಬರುವಂತೆ ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಮೋದಿಜೀ, ಈ ನಾಟಕಗಳನ್ನು ಬಿಟ್ಟುಬಿಡಿ. ಮಾಫಿಯಾಳನ್ನ ಮಟ್ಠಹಾಕಿ. ವಿದ್ಯಾರ್ಥಿಗಳಿಗೆ ಮತ್ತಷ್ಟು ತೊಂದರೆ ಕೊಡೋದಲ್ಲ.'ವಿದ್ಯಾರ್ಥಿಗಳ ಧ್ವನಿ'ಯನ್ನು ಕೇಳಿ, ಇಲ್ಲದಿದ್ದರೆ ದೇಶದ ಯುವಕರಿಗೆ ತಮ್ಮ ಹಕ್ಕುಗಳನ್ನು ಹೇಗೆ ಪಡೆಯಬೇಕೆಂದು ತಿಳಿದಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಜೂನ್ 21ರಂದು ನಡೆಯಲಿರುವ NEET-UG 2026ರ ಮರುಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ವಂಚಿಸಲು ಮತ್ತು ದಾರಿ ತಪ್ಪಿಸಲು ಸಂಘಟಿತ ವಂಚನೆ ಜಾಲಗಳು ಟೆಲಿಗ್ರಾಂ ಅನ್ನು ಬಳಸುತ್ತಿವೆ ಎಂದು NTA ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಲಿಗ್ರಾಂ ಅನ್ನು ಬ್ಲಾಕ್ ಮಾಡಲು ಆದೇಶಿಸಿತ್ತು.
ಈ ಮಧ್ಯೆ, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಜೂನ್ 22ರವರೆಗೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದನ್ನು ಕಂಪನಿ ವಿರೋಧಿಸಿದೆ. ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ರಜಾಕಾಲದ ಪೀಠದ ಮುಂದೆ ವಕೀಲ ಮಾಧವ್ ಖೋಸ್ಲಾ ಅವರು ಈ ವಿಷಯವನ್ನು ತುರ್ತು ವಿಚಾರಣೆಗೆ ಪ್ರಸ್ತಾಪಿಸಿದರು. ನಂತರದ ದಿನದಲ್ಲಿ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿದೆ. (ANI)
(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ವಿವರಗಳನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ