National Herald Case: ರಾಹುಲ್ ಗಾಂಧಿ ವಿಚಾರಣೆ ಅಂತ್ಯ, ದೇಶಾದ್ಯಂತ ಮುಂದುವರೆದ ಪ್ರತಿಭಟನೆ

Published : Jun 13, 2022, 11:55 AM ISTUpdated : Jun 13, 2022, 12:34 PM IST
National Herald Case: ರಾಹುಲ್ ಗಾಂಧಿ ವಿಚಾರಣೆ ಅಂತ್ಯ, ದೇಶಾದ್ಯಂತ ಮುಂದುವರೆದ ಪ್ರತಿಭಟನೆ

ಸಾರಾಂಶ

* ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣ * ವಿಚಾರಣೆಗೆ ಇಡಿ ಕಚೇರಿಗೆ ತೆರಳಿದ ರಾಹುಲ್ * ಗಾಂಧಿಗಳ ವಿರುದ್ಧ ಅಧಿಕಾರ ದುರ್ಬಳಕೆ: ಕಾಂಗ್ರೆಸ್‌ ಗರಂ * ಪಕ್ಷದ ಕೇಂದ್ರ ಕಚೇರಿಗೆ ಬರಲು ಸಂಸದರು, ನಾಯಕರಿಗೆ ಸೂಚನೆ

ನವದೆಹಲಿ(ಜೂ.13): ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಜಾರಿ ನಿರ್ದೇಶನಾಲಯ (ಇ.ಡಿ.) ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಹೀಗಿರುವಾಗ ಇತ್ತ ಕಾಂಗ್ರೆಸ್‌ ಪಕ್ಷವು ರಾಹುಲ್‌ ವಿಚಾರಣೆಯನ್ನು ಖಂಡಿಸಿ ದಿಲ್ಲಿಯ ಇ.ಡಿ. ಮುಖ್ಯ ಕಚೇರಿ ಹಾಗೂ ದೇಶದ ವಿವಿಧ 25 ಇ.ಡಿ. ಕಚೇರಿಗಳ ಮುಂದೆ ಬಲಪ್ರದರ್ಶನ ಆರಂಭಿಸಿದೆ. ಸುಮಾರು ಒಂದು ಗಂಟೆಯ ವಿಚಾರಣೆ ಬಳಿಕ ರಾಹುಲ್‌ ಗಾಂಧಿ ವಾಪಸಾಗಿದ್ದಾರೆ. ಜಾರಿ ನಿರ್ದೇಶನಾಲಯ ಮುಂದಿನ ವಿಚಾರಣೆಯ ದಿನಾಂಕವನ್ನು ಸೂಚಿಸಿಲ್ಲ. ಆದರೆ ಮತ್ತೆ ವಿಚಾರಣೆಯನ್ನು ಮುಂದುವರೆಸಲಾಗುವುದು ಎಂಬ ಮಾಹಿತಿ ಮೂಲಗಳಿಂದ ಬಂದಿದೆ. 

ಕೇಂದ್ರವು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಗಾಂಧಿಗಳ ವಿರುದ್ಧ ಇ.ಡಿ.ಯನ್ನು ಛೂ ಬಿಟ್ಟಿದೆ ಎಂಬುದು ಕಾಂಗ್ರೆಸ್ಸಿಗರ ಆರೋಪ. ಅದಕ್ಕೆಂದೇ ಕಾಂಗ್ರೆಸ್‌ ಪಕ್ಷದ ಎಲ್ಲಾ ರಾಜ್ಯಸಭಾ ಮತ್ತು ಲೋಕಸಭಾ ಸಂಸದರು, ಹಿರಿಯ ನಾಯಕರಿಗೆ ಸೋಮವಾರ ಮುಂಜಾನೆ ಅಕ್ಬರ್‌ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಅಲ್ಲಿಂದ ರಾಹುಲ್‌ ಗಾಂಧಿ ಅವರ ಜತೆಗೇ ಮೆರವಣಿಗೆ ಹೊರಡಲಿರುವ ನಾಯಕರು, ಅಬ್ದುಲ್‌ ಕಲಾಂ ರಸ್ತೆಯ ಇ.ಡಿ. ಕಚೇರಿಗೆ ತೆರಳಲಿದ್ದಾರೆ. ರಾಹುಲ್‌ ಗಾಂಧಿ ವಿಚಾರಣೆಗೆ ಒಳಹೋದ ವೇಳೆ ಹೊರಗೆ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ಇದೇ ವೇಳೆ, ದೇಶದ ವಿವಿಧ ಭಾಗಗಳಲ್ಲಿ ಇರುವ 25 ಇ.ಡಿ. ಕಚೇರಿಗಳ ಮುಂದೆ ಪ್ರದೇಶ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಮಾಣಿಕ್ಯಂ ಟ್ಯಾಗೋರ್‌ ಹೇಳಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಸಿಬಿಐ ಹಾಗೂ ಇ.ಡಿ.ಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದೇ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಜೂ.23ರಂದು ಹಾಜರಾಗಲು ಇ.ಡಿ. ಸಮನ್ಸ್‌ ಜಾರಿ ಮಾಡಿದೆ.

ರಾಹುಲ್‌ ಗಾಂಧಿ ಅವರಿಗೆ ಜೂ.2ರಂದೇ ಇ.ಡಿ. ಬುಲಾವ್‌ ನೀಡಿತ್ತು. ಆದರೆ ಅವರು ವಿದೇಶದಲ್ಲಿದ್ದ ಕಾರಣ ಮತ್ತೆ ವಿಚಾರಣಾ ದಿನಾಂಕ ಜೂ.13ಕ್ಕೆ ನಿಗದಿಯಾಗಿತ್ತು.

ನಕಲಿ ಗಾಂಧಿಗಳ ನಕಲಿ ಸತ್ಯಾಗ್ರಹ:

ಕಾಂಗ್ರೆಸ್‌ ಧರಣಿ ವಿರೋಧಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ಇದು ನಕಲಿ ಗಾಂಧಿಗಳ ನಕಲಿ ಸತ್ಯಾಗ್ರಹ. ಕಾಂಗ್ರೆಸ್ಸಿಗರು ಕೇವಲ ನಾಟಕ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಏನಿದು ಪ್ರಕರಣ?

ಕಾಂಗ್ರೆಸ್‌ ಪಕ್ಷದ ಮುಖವಾಣಿಯಾಗಿರುವ ದಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌) ಎಂಬ ಸಂಸ್ಥೆ ಪ್ರಕಟಿಸುತ್ತದೆ. ಈ ಸಂಸ್ಥೆಯ ಮಾಲೀಕತ್ವವನ್ನು ಯಂಗ್‌ ಇಂಡಿಯನ್‌ ಪ್ರೈ.ಲಿ. ಹೊಂದಿದೆ. ಯಂಗ್‌ ಇಂಡಿಯನ್‌ ಕಂಪನಿಯ ಮಾಲಿಕತ್ವ ಕಾಂಗ್ರೆಸ್‌ ಪಕ್ಷದ ಬಳಿಯಿದೆ. ಈ ಸಂಸ್ಥೆಗಳ ನಡುವೆ ನಡೆದ 90 ಕೋಟಿ ರು. ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಸಂಬಂಧ ಇ.ಡಿ. ಕಳೆದ ವರ್ಷ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಅದಕ್ಕೂ ಮೊದಲೇ 2013ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೂಡ ನ್ಯಾಷನಲ್‌ ಹೆರಾಲ್ಡ್‌ ಆಸ್ತಿ ಮಾರಾಟದಲ್ಲಿ ಅವ್ಯವಹಾರ ನಡೆದಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ದೂರು ನೀಡಿದ್ದರು. ಅವೆಲ್ಲ ಆರೋಪಗಳ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಸೋನಿಯಾ ಮತ್ತು ರಾಹುಲ್‌ಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?