* ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಭಾರಿ ಬಲ
* 100 ಯುದ್ಧವಿಮಾನ ಭಾರತದಲ್ಲೇ ತಯಾರಿಸಲು ನಿರ್ಧಾರ
* ಜಾಗತಿಕ ಯುದ್ಧವಿಮಾನ ನಿರ್ಮಾಣ ಕಂಪನಿಗಳ ಜತೆ ಚರ್ಚೆ
ನವದೆಹಲಿ(ಜೂ.13): ಇದೇ ಮೊದಲ ಬಾರಿ ಭಾರತದಲ್ಲೇ ಸುಮಾರು 100 ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ನೀತಿಗೆ ಒತ್ತು ನೀಡಬೇಕೆಂಬ ಭಾರತ ಸರ್ಕಾರದ ಉದ್ದೇಶಕ್ಕೆ ಇದು ಭಾರಿ ಬಲ ನೀಡಿದಂತಾಗಿದೆ.
ಭಾರತದಲ್ಲಿ ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸುವ ಕಾರ್ಖಾನೆಗಳು ಸದ್ಯ ಇಲ್ಲ. ಹೀಗಾಗಿ ಇಲ್ಲಿ ಯುದ್ಧವಿಮಾನಗಳನ್ನು ತಯಾರಿಸಲು ಜಾಗತಿಕ ಮಟ್ಟದ ಪ್ರಸಿದ್ಧ ಯುದ್ಧವಿಮಾನ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ಕರೆನ್ಸಿಯಲ್ಲೇ ಪಾವತಿ:
ಯುದ್ಧ ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರು.ಗಳನ್ನು ಡಾಲರ್‌ನಲ್ಲಿ ಪಾವತಿ ಮಾಡುತ್ತದೆ. ಇದರಿಂದ ಸಾಕಷ್ಟುವಿದೇಶಿ ವಿನಿಮಯ ನಷ್ಟವಾಗುತ್ತದೆ. ಆದರೆ ಇದೇ ಮೊದಲ ಬಾರಿ 40 ಯುದ್ಧವಿಮಾನಗಳಿಗೆ ಭಾಗಶಃ ಡಾಲರ್ ಮತ್ತು ರುಪಾಯಿಯಲ್ಲಿ ಪಾವತಿ ಮಾಡಲು ಹಾಗೂ 60 ವಿಮಾನಗಳಿಗೆ ಸಂಪೂರ್ಣ ಭಾರತೀಯ ರುಪಾಯಿಯಲ್ಲೇ ಪಾವತಿ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ ಯುದ್ಧವಿಮಾನ ಖರೀದಿಗೆ ಶೇ.70ರಷ್ಟುಹಣವನ್ನು ರುಪಾಯಿಯಲ್ಲೇ ಪಾವತಿಸಲಾಗುತ್ತದೆ. ಇಲ್ಲೂ ಕೂಡ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
3 ವರ್ಷಗಳಲ್ಲಿ ವಿಮಾನ ಖರೀದಿ:
ಭಾರತೀಯ ವಾಯುಪಡೆಯು ಒಟ್ಟು ಮೂರು ವರ್ಷಗಳ ಅವಧಿಯಲ್ಲಿ 100 ಯುದ್ಧವಿಮಾನಗಳನ್ನು ದೇಶದಲ್ಲೇ ತಯಾರಿಸಿ ಖರೀದಿಸಲು ಮುಂದಾಗಿದೆ. ಅವೆಲ್ಲವೂ ಅತ್ಯಾಧುನಿಕ ಯುದ್ಧವಿಮಾನಗಳಾಗಿದ್ದು, ಸದ್ಯ ವಾಯುಪಡೆಯಲ್ಲಿರುವ ಹಳೆಯ ಮಿಗ್ ವಿಮಾನಗಳನ್ನು ಬದಿಗೆ ಸರಿಸಲಿವೆ. ಮೊದಲ 18 ಯುದ್ಧ ವಿಮಾನಗಳನ್ನು ಭಾರತದಲ್ಲಿ ಯುದ್ಧವಿಮಾನ ನಿರ್ಮಾಣ ಮಾಡುವ ಕಂಪನಿಗಳಿಂದ ಸೀಮಿತ ಟ್ರಯಲ್ ನಡೆಸಿ ಖರೀದಿಸಲಾಗುತ್ತದೆ. ನಂತರದ ಯುದ್ಧವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲು ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಮಿಗ್, ದಸಾಲ್ಟ್ ಹಾಗೂ ಸಾಬ್ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ.