ಸಂಸತ್ ಕಲಾಪದ ವೇಳೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಹುಲ್ ಗಾಂಧಿ ನಡುವೆ ವಾಗ್ವಾದ ನಡೆದಿದೆ. ಸ್ಪೀಕರ್ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಆರೋಪಿಸಿದರೆ, ನಿಯಮ ಪಾಲಿಸುವಂತೆ ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡಿಸಿದೆ.
ನವದೆಹಲಿ: ಸಂಸತ್ ಕಲಾಪದ ವೇಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ಬುಧವಾರ ಭರ್ಜರಿ ವಾಗ್ವಾದ ನಡೆದಿದೆ. ಬಿರ್ಲಾ ಒಂದು ಹಂತದಲ್ಲಿ ರಾಹುಲ್ ಮೇಲೆ ಕೋಪಗೊಂಡು ಸದನದ ನಿಯಮಗಳನ್ನು ನೀವು ಪಾಲಿಸುತ್ತಿಲ್ಲ. ಹೀಗಾಗ ಕೂಡದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ನನಗೆ ಸ್ಪೀಕರ್ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಸತ್ ಕಲಾಪದ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರು ಸಂಸತ್ತಿನ ಘನತೆಯನ್ನುಎತ್ತಿಹಿಡಿಯುವ ರೀತಿಯಲ್ಲಿ ವರ್ತಿಸಬೇಕು. ಆದರೆ ಈ ರೀತಿ ನಡೆದುಕೊಳ್ಳದ ಹಲವು ನಿದರ್ಶನಗಳು ಗಮನಕ್ಕೆ ಬಂದಿದೆ. ಸದನದಲ್ಲಿ ತಂದೆ ಮತ್ತು ಮಗಳು, ತಾಯಿ ಮತ್ತು ಮಗಳು, ಗಂಡ ಹೆಂಡತಿ ಸದಸ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರು ನಿಯಮಗಳನ್ನು ಪಾಲಿಸಬೇಕು. ವಿಶೇಷವಾಗಿ ವಿರೋಧ ಪಕ್ಷದ ನಾಯಕರು ನಿಯಮಗಳ ಪ್ರಕಾರ ವರ್ತಿಸಬೇಕು ಎಂದರು. ಆದರೆ ತಾನೇಕೆ ಈ ಸೂಚನೆ ನೀಡಿದೆ ಎಂಬುದನ್ನು ಹೇಳಲಿಲ್ಲ. ಬಳಿಕ ತಮ್ಮ ಸ್ಥಾನದಿಂದ ಸ್ಪೀಕರ್ ಎದ್ದು ಹೋದರು.
ಆಗ ಸಿಡಿದೆದ್ದ ರಾಹುಲ್.ಸ್ಪೀಕರ್ ಎದ್ದು ಹೋದರು. ನನಗೆ ಒಂದೂ ಮಾತನಾಡಲು ಬಿಟ್ಟಿಲ್ಲ. ಅವರು ನನ್ನ ಬಗ್ಗೆ ಮಾತನಾಡಿದರು. ಆದರೆ ಏನು ಹೇಳಿದರು ತಿಳಿಯಲಿಲ್ಲ. ಎಲ್ಲವೂ ಅಧಾರರಹಿತ. ನೀವು ನನ್ನ ಬಗ್ಗೆ ಮಾತನಾಡಿದಂತೆ ನನಗೂ ಮಾತನಾಡಲು ಅವಕಾಶ ನೀಡಿ ಎಂದೆ. ಆದರೆ ಒಂದೂ ಪದವನ್ನು ಹೇಳದೇ ಹೊರಟು ಹೋದರು ಎಂದರು. ಬಳಿಕ ಸಂಸತ್ ಆವರಣದಲ್ಲಿ ಮಾತನಾಡಿದ ರಾಹುಲ್, ನಮಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡುತ್ತಿಲ್ಲ. ಕಳೆದ 7-8 ದಿನಗಳಲ್ಲಿ ಏನನ್ನೂ ಮಾತನಾಡದೆ ಸುಮ್ಮನೆ ಕುಳಿತಿದ್ದೇನೆ. ಕುಂಭಮೇಳ ನಡೆದಿದ್ದು ಒಳ್ಳೆಯದು ಎಂದು ಹೇಳಲು ಬಯಸಿದ್ದೆ. ನಿರುದ್ಯೋಗದ ಬಗ್ಗೆ ಮಾತನಾಡಲು ಬಯಸಿದ್ದೆ. ಆದರೆ ಅವಕಾಶ ನೀಡಲಿಲ್ಲ. ಸ್ಪೀಕರ್‌ಗೆ ಯಾವ ಚಿಂತನೆಯಿದೆ ತಿಳಿಯುತ್ತಿಲ್ಲ. ಆದರೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸದನ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಸ್ಪೀಕರ್ ಸೂಚನೆ ಏಕೆ?
ಸದನದಲ್ಲಿ ರಾಹುಲ್ ಅವರು ತಮ್ಮ ಸೋದರಿಯಾದ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯನ್ನು ಅಣ್ಣ ಎಂಬ ಸಲುಗೆಯಿಂದ ಮುಟ್ಟಿದರು. ಇದನ್ನು ಗಮನಿಸಿದ ಸ್ಪೀಕರ್, ಸದನದ ನಡಾವಳಿ ಪ್ರಕಾರ ನಡೆಯಿರಿ ಎಂದು ರಾಹುಲ್‌ಗೆ ಸೂಚಿಸಿದರು ಎನ್ನಲಾಗಿದೆ.
ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ
ನವದೆಹಲಿ: ಸೋನಿಯಾ ಗಾಂಧಿಯವರ ವಿರುದ್ಧ ಆಧಾರರಹಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಬುಧವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನಿರ್ಣಯದ ನೋಟಿಸ್ ನೀಡಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯನ್ನು ಕಾಂಗ್ರೆಸ್ ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು ಮತ್ತು ಪಿಎಂ ಕೇರ್ಸ್ ನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು. ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇವಲ ಒಂದು ಕುಟುಂಬ ಮಾತ್ರ ದೇಶವನ್ನು ನಿಯಂತ್ರಿಸುತ್ತಿತ್ತು. ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನ ಮಂತ್ರಿ ಪರಿಹಾರ ನಿಧಿಯ ಭಾಗವಾಗಿದ್ದರು ಎಂದು ಶಾ ಸದನದಲ್ಲಿ ಹೇಳಿದ್ದರು. ಇದಕ್ಕೆ ಕಿಡಿಕಾರಿರುವ ಜೈರಾಂ, ಸೋನಿಯಾ ಗಾಂಧಿಯವರ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಹಕ್ಕುಚ್ಯುತಿ ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.
ಉಗ್ರವಾದ ಆರೋಪಿ ಸಂಸದ ಸದನಕ್ಕೆ: ದೆಹಲಿ ಹೈಕೋರ್ಟ್ ಅನುಮತಿ
ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜೈಲಿನಲ್ಲಿರುವ ಜಮ್ಮು-ಕಾಶ್ಮೀರದ ಸಂಸದ ಅಬ್ದುಲ್ ರಶೀದ್ ಶೇಖ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ಸಂಸತ್ ಅಧಿವೇಶನಕ್ಕೆ ಹಾಜರಾಗಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮಾ.26ರಿಂದ ಏ.4 ರವರೆಗೆ, ಅಧಿವೇಶನದ ಎಲ್ಲಾ ದಿನಗಳಲ್ಲಿ ಪೊಲೀಸರೇ ರಶೀದ್ ಅವರನ್ನು ಸಂಸತ್ತಿಗೆ ಕರೆದೊಯ್ದು, ಜೈಲಿಗೆ ವಾಪಸ್ ಕರೆತರುತ್ತಾರೆ ಎಂದು ನ್ಯಾ। ಚಂದ್ರ ಧಾರಿ ಸಿಂಗ್ ಮತ್ತು ಅನೂಪ್ ಜೈರಾಂ ಭಂಭಾನಿ ಅವರ ಪೀಠ ಹೇಳಿದೆ. ಜಮ್ಮು-ಕಾಶ್ಮೀರದಲ್ಲಿ 2017ರಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಹಣ ನೀಡಿದ ಆರೋಪ ಹೊತ್ತಿರುವ ರಶೀದ್, 2019ರಿಂದಲೂ ದಿಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ.