
ನವದೆಹಲಿ(ಫೆ.26) ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಲೋಕಸಭಾ ಚುನಾವಣೆಗೆ ಭರ್ಜರಿ ತಾಲೀಮು ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆಗಳು ಈಗಾಗಲೇ ಶುರುವಾಗಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಅಮೇಥಿ ಹಾಗೂ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ ರಾಹುಲ್ ಗಾಂಧಿ ಈ ಬಾರಿ ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ವರದಿಗಳು. ವಯನಾಡು ಕ್ಷೇತ್ರದ ಬದಲು ಕರ್ನಾಟಕದಿಂದ ತಪ್ಪಿದರೆ ತೆಲಂಗಾಣದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಕಳೆದ ಬಾರಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ರಾಹುಲ್ ಗಾಂಧಿಗೆ ಸಂಸದ ಸ್ಥಾನ ನೀಡಿದ್ದು ವಯನಾಡು ಕ್ಷೇತ್ರ. ಆದರೆ ಈ ಬಾರಿ ಇಂಡಿಯಾ ಒಕ್ಕೂಟದ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಮುಂದಾಳತ್ವ ವಹಿಸಿಕೊಂಡಿದೆ. ವಯನಾಡು ಕ್ಷೇತ್ರವನ್ನು ಕಾಂಗ್ರೆಸ್ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ಗೆ ಬಿಟ್ಟುಕೊಡುವಂತೆ ಮನವಿ ಮಾಡಿದೆ. 2 ಕ್ಷೇತ್ರದ ಬದಲು ಮೂರು ಕ್ಷೇತ್ರದ ಟಿಕೆಟ್ ನೀಡಲು ಮುಸ್ಲಿಮ್ ಲೀಗ್ ಮನವಿ ಮಾಡಿದೆ. ವಯನಾಡು ಮುಸ್ಲಿಮ್ ಸಂಖ್ಯಾ ಬಲ ಹೆಚ್ಚಿರುವ ಕಾರಣ ಹೊಸ ಕ್ಷೇತ್ರವಾಗಿ ವಯನಾಡು ನೀಡಲು ಮುಸ್ಲಿಮ್ ಲೀಗ್ ಮನವಿ ಮಾಡಿದೆ.
ಕಾಂಗ್ರೆಸ್‌ನಲ್ಲಿ ಯಾರು ಉಳಿಯುತ್ತಾರೆ ಅನ್ನೋ ಭರವಸೆ ನಾಯಕರಿಗಿಲ್ಲ, ಬಿರುಕು ಹೆಚ್ಚಿಸಿದ ಕೇರಳ ಸಿಎಂ ಮಾತು!
ಮೈತ್ರಿ ಬಲಗೊಳಿಸಲು ರಾಹುಲ್ ಗಾಂಧಿಯ ವಯನಾಡು ಕ್ಷೇತ್ರವನ್ನು ಮುಸ್ಲಿಮ್ ಲೀಗ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಹೀಗಾದಲ್ಲಿ ರಾಹುಲ್ ಗಾಂಧಿ ಕರ್ನಾಟಕದ ಒಂದು ಕ್ಷೇತ್ರ ಅಥವಾ ತೆಲಂಗಾಣದ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕುತೂಹಲ ಕರ್ನಾಟಕದತ್ತ ಮನೆ ಮಾಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರ ರಚನೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ. ಹೀಗಾಗಿ ವಿರೋಧಿ ಅಲೆಗಳೂ ಇಲ್ಲ. ರಾಹುಲ್ ಗಾಂಧಿ ಸ್ಪರ್ಧೆಯಿಂದ ಕರ್ನಾಟಕ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಲಾಭವಾಗಲಿದೆ. ಬಿಜೆಪಿ ಅಭೂತಪೂರ್ವ ಗೆಲುವಿನ ನಾಗಾಲೋಟ ತಪ್ಪಿಸಲು ನೆರವಾಗಲಿದೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 2019ರ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ತಲಾ ಒಂದೊಂದು ಸ್ಥಾನ ಗೆದ್ದುಕೊಂಡಿತ್ತು. ಇನ್ನು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದರು. ಇದೀಗ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ ಯಾವ ಕ್ಷೇತ್ರ ಅನ್ನೋ ಚರ್ಚೆಗಳು ಜೋರಾಗುತ್ತಿದೆ.
2018ರ ಮಾನನಷ್ಟ ಮೊಕದ್ದಮೆ ಪ್ರಕರಣ; ಕೋರ್ಟ್‌ಗೆ ಶರಣಾದ ರಾಹುಲ್ ಗಾಂಧಿಗೆ ಬಿಗ್ ರಿಲೀಫ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ