
ನವದೆಹಲಿ (ಡಿ.24): ಹಲವು ಬಾರಿ ವಿವಿಧ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತಗಳವು ಮಾಡಿದೆ ಎಂದು ಆರೋಪಿಸುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಈ ರಾಗವನ್ನು ಜರ್ಮನಿಯಲ್ಲೂ ಹಾಡಿದ್ದಾರೆ. 5 ದಿನಗಳ ಜರ್ಮನಿ ಪ್ರವಾಸದ ವೇಳೆ ಹರ್ಟಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ‘2024ರಲ್ಲಿ ನಡೆದ ಹರ್ಯಾಣ ಚುನಾವಣೆ ವೇಳೆ, ಬಿಜೆಪಿಗೆ ಅನುಕೂಲವಾಗುವಂತೆ (ಕೆಲ ಹೆಸರುಗಳನ್ನು ಅಕ್ರಮವಾಗಿ ಸೇರಿಸುವ ಮತ್ತು ತೆಗೆದುಹಾಕುವ ಮೂಲಕ) ಮತಚೋರಿ ಮಾಡಲಾಗಿತ್ತು.
ಈ ಬಗ್ಗೆ ನಾನು ಭಾರತದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರವಾಗಿ ಮಾಹಿತಿ ನೀಡಿದ್ದೆ. ಅದರಲ್ಲಿ ಬ್ರೆಜಿಲ್ ಮಹಿಳೆಯೊಬ್ಬಳು 22 ಬಾರಿ ಮತದಾನ ಮಾಡಿದ್ದಕ್ಕೂ ಸಾಕ್ಷಿ ನೀಡಿದ್ದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಹೀಗೇ ಬಿಜೆಪಿಗೆ ಗೆಲುವಾಗಿತ್ತು. ಈ ಬಗ್ಗೆ ನಾವು ನಿರಂತರವಾಗಿ ಧ್ವನಿ ಎತ್ತುತ್ತಲೇ ಇದ್ದೇವೆ. ಆದರೆ ಈವರೆಗೂ ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣ ಬಂದಿಲ್ಲ’ ಎಂದಿದ್ದಾರೆ. ಇದೇ ವೇಳೆ, ‘ಕರ್ನಾಟದ ಗೆಲುವು ಸಾಧಿಸಿರುವ ಕಾಂಗ್ರೆಸ್, ಅಲ್ಲಿ ಅನುಸರಿಸಿದ ತಂತ್ರವನ್ನೇ ಬೇರೆಡೆ ಯಾಕೆ ಬಳಸಲಿಲ್ಲ?’ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ನಾವು ಕರ್ನಾಟಕದ ತಂತ್ರದಿಂದಲೇ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆದ್ದಿದ್ದೇವೆ’ ಎಂದರು.
ತನಿಖಾ ಸಂಸ್ಥೆಗಳ ದುರ್ಬಳಕೆ: ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿರುವ ರಾಹುಲ್, ‘ಬಿಜೆಪಿಯವರು ಹಾಗೂ ಮಿತ್ರಪಕ್ಷಗಳ ವಿರುದ್ಧ ಯಾವುದೇ ಕೇಸ್ ಇರುವುದಿಲ್ಲ. ಆದರೆ ಅವರು ಇ.ಡಿ., ಸಿ.ಬಿ.ಐ.ನಂತಹ ಸಂಸ್ಥೆಗಳನ್ನು ಶಸ್ತ್ರವಾಗಿ ಬಳಸಿಕೊಂಡು ತಮ್ಮ ಎದುರಾಳಿಗಳನ್ನು ಮಟ್ಟಹಾಕುತ್ತಾರೆ’ ಎಂದಿದ್ದಾರೆ. ಜತೆಗೆ, ಉದ್ಯಮಿಗಳೂ ಬಿಜೆಪಿಯನ್ನು ಬೆಂಬಲಿಸುತ್ತಾರೆ ಹೊರತು ಕಾಂಗ್ರೆಸ್ ಪರ ಇರುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಬಣ ಬಡಿದಾಟ: ಪ್ರಧಾನಿ ಮೋದಿ ಸರ್ಕಾರ ಆರ್ಥಿಕ ನೀತಿಯನ್ನು ನಿಷ್ಪ್ರಯೋಜಕ ಎಂದು ಕರೆದಿರುವ ರಾಹುಲ್, ‘ಮೋದಿಯವರನ್ನು ಅನೇಕರು ಬೆಂಬಲಿಸುತ್ತಾರಾದರೂ, ಅವರ ನೀತಿಗಳನ್ನು ಬಹುತೇಕ ಭಾರತೀಯರು ಒಪ್ಪುವುದಿಲ್ಲ. ಇದು ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಲಿದೆ. ಹೀಗೆ 2 ವಿಭಿನ್ನ ನೀತಿಗಳನ್ನು ಅನುಸರಿಸುವ ಜನ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ವಿದೇಶದಲ್ಲಿ ರಾಹುಲ್ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಸ್ವಪಕ್ಷೀಯರು ಮತ್ತು ಪರಿವಾರದವರೇ ತಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಎಂಬ ಕಾರಣದಿಂದ ಅವರು ಅನ್ಯ ದೇಶಗಳಿಗೆ ಹೋಗಿ ಭಾರತದ ವಿರುದ್ಧ ಮಾತನಾಡುತ್ತಾರೆ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ 95 ಚುನಾವಣೆಗಳನ್ನು ಸೋತಿದ್ದು, ಜನರಿಗೆ ಅವರ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ’ ಎಂದು ತಿರುಗೇಟು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ