ಉದ್ವಿಗ್ನ ಜಗತ್ತಿಗೆ ಯೋಗದಿಂದ ಶಾಂತಿ ಮಾರ್ಗ : ಪ್ರಧಾನಿ ಮೋದಿ

Published : Jun 22, 2025, 05:42 AM IST
Modi Yoga Event 2025

ಸಾರಾಂಶ

ಉದ್ವಿಗ್ನ ಜಗತ್ತಿಗೆ ಯೋಗದಿಂದ ಶಾಂತಿ ಮಾರ್ಗ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಜಗತ್ತಿನಲ್ಲಿ ನಡೆದಿರುವ ಯುದ್ಧಗಳ ಪರೋಕ್ಷ ಪ್ರಸ್ತಾಪವನ್ನು ಅವರು ಮಾಡಿದ್ದಾರೆ.

ವಿಶಾಖಪಟ್ಟಣಂ : ಉದ್ವಿಗ್ನ ಜಗತ್ತಿಗೆ ಯೋಗದಿಂದ ಶಾಂತಿ ಮಾರ್ಗ ಲಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಜಗತ್ತಿನಲ್ಲಿ ನಡೆದಿರುವ ಯುದ್ಧಗಳ ಪರೋಕ್ಷ ಪ್ರಸ್ತಾಪವನ್ನು ಅವರು ಮಾಡಿದ್ದಾರೆ.

ವಿಶಾಖಪಟ್ಟಣದ ಆರ್‌.ಕೆ. ಕಡಲತೀರದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಂದು ಇಡೀ ಜಗತ್ತು ಉದ್ವಿಗ್ನವಾಗಿದೆ. ಅನೇಕ ಪ್ರದೇಶಗಳಲ್ಲಿ, ಅಶಾಂತಿ ಮತ್ತು ಅಸ್ಥಿರತೆ ಹೆಚ್ಚುತ್ತಿದೆ. ಹೀಗಿರುವಾಗ, ಯೋಗವು ನಮಗೆ ಶಾಂತಿಯ ದಿಕ್ಕನ್ನು ತೋರಿಸಿ, ಮಾನವೀಯತೆಯು ಉಸಿರಾಡಲು, ಸಮತೋಲನಗೊಳಿಸಲು, ಮತ್ತೆ ಪೂರ್ಣಗೊಳ್ಳಲು ಅಗತ್ಯವಿರುವ ವಿರಾಮದ ಮಾರ್ಗವಾಗಿದೆ’ ಎಂದರು.

ಜತೆಗೆ, ಈ ದಿನ ಮಾನವೀಯತೆಗಾಗಿ ಯೋಗದ 2.0 ಶುರುವಾಗಲಿ ಹಾಗೂ ಆಂತರಿಕ ಶಾಂತಿಯು ಜಾಗತಿಕ ನೀತಿಯಾಗಲಿ ಎಂದು ಹಾರೈಸಿದ ಅವರು, ಯೋಗಾಂಧ್ರ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್‌ ಕಲ್ಯಾಣ್‌, ಸಚಿವ ನಾರಾ ಲೋಕೇಶ್‌ ಅವರನ್ನು ಅಭಿನಂದಿಸಿದರು. ಈ ಬಾರಿಯ ಯೋಗದಿನದ ವಿಷಯವಾದ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ದ ಬಗ್ಗೆ ಮಾತನಾಡುತ್ತ, ‘ಯೋಗವು ಗಡಿ, ಹಿನ್ನೆಲೆ, ವಯಸ್ಸಿ, ಸಾಮರ್ಥ್ಯಗಳನ್ನು ಮೀರಿದ್ದಾಗಿದೆ. ಇದು ಇಂದು ವಿಶ್ವವನ್ನು ಒಗ್ಗೂಡಿಸಿದೆ’ ಎಂದು ಮೋದಿ ಹೇಳಿದರು. ವಿಕಲಚೇತನರು ಬ್ರೈಲಿ ಲಿಪಿ ಬಳಸಿ ಯೋಗಕ್ಕೆ ಬಂದಂಧಿಸಿದ ವಿಷಯಗಳನ್ನು ಓದುವ ಮತ್ತು ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಯೋಗವನ್ನು ಅಭ್ಯಾಸ ಮಾಡುವುದನ್ನು ಉಲ್ಲೇಖಿಸಿ ಶ್ಲಾಘಿಸಿದರು. ‘ಯೋಗವು ಪರಸ್ಪರ ಸಂಬಂಧಗಳ ಕಡೆಗೆ ನಮ್ಮನ್ನು ಜಾಗೃತಗೊಳಿಸುತ್ತದೆ. ಅದು ನಮ್ಮನ್ನು ನಾನು ಎಂಬುದರಿಂದ ನಾವು ಎಂಬುವತ್ತ ಕರೆದೊಯ್ಯುತ್ತದೆ. ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಅಂಗೀಕಾರದ ಬಳಿಕ ಯೋಗವು ವಿಶ್ವದ ಕೋಟ್ಯಂತರ ಜನರ ಜೀವನದ ಭಾಗವಾಗಿದೆ’ ಎಂದ ಮೋದಿ, ಎಲ್ಲರಿಗೂ ಯೋಗವನ್ನು ಜೀವನಶೈಲಿಯಾಗಿಸಿಕೊಳ್ಳುವಂತೆ ಕರೆ ನೀಡಿದರು.

ಇ-ಆಯುಷ್‌ ವೀಸಾ ಘೋಷಣೆ:

ಭಾರತದ ಸ್ವಸ್ಥ ಪರಿಸರ ವ್ಯವಸ್ಥೆಯಿಂದ ಜಾಗತಿಕ ಸಮುದಾಯವು ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇ-ಆಯುಷ್‌ ವೀಸಾಗಳನ್ನು ಒದಗಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದು, ಆಯುಷ್ ವೈದ್ಯಕೀಯ ಪದ್ಧತಿಯನ್ನು ಬಳಸಿಕೊಂಡು ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಬಯಸುವ ವಿದೇಶಿಯರಿಗೆ ನೀಡಲಾಗುವ ವಿಶೇಷ ರೀತಿಯ ವೀಸಾ ಆಗಿದೆ.

ಯೋಗ ದಿನ: 2 ವಿಶ್ವದಾಖಲೆ ಸೃಷ್ಟಿ

ವಿಶಾಖಪಟ್ಟಣ: ಇಲ್ಲಿನ ಆರ್‌.ಕೆ. ಕಡಲತೀರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದಲ್ಲಿ 2 ವಿಶ್ವ ದಾಖಲೆಗಳು ನಿರ್ಮಾಣವಾಗಿವೆ.ಕಡಲತೀರದಲ್ಲಿ ನಡೆದ ಸಮಾರಂಭದಲ್ಲಿ 3.03 ಲಕ್ಷ ಜನ ಭಾಗವಹಿಸಿದ್ದರು. ಒಂದೇ ಸ್ಥಳದಲ್ಲಿ ಈ ಪ್ರಮಾಣದಲ್ಲಿ ಜನ ಸೇರಿ ಯೋಗಾಭ್ಯಾಸ ಮಾಡಿದ್ದು ಒಂದು ವಿಶ್ವದಾಖಲೆ.ಇವರೊಂದಿಗೆ, 22,000 ಬುಡಕಟ್ಟು ವಿದ್ಯಾರ್ಥಿಗಳಿಂದ ಒಟ್ಟಿಗೆ 108 ನಿಮಿಷದಲ್ಲಿ 108 ಬಾರಿ ಸೂರ್ಯನಮಸ್ಕಾರ ಮಾಡಿದ್ದು ಸಹ ದಾಖಲೆ ಆಗಿದೆ.

ಈ ಮೊದಲು 2023ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ 1.47 ಲಕ್ಷ ಮಂದಿ ಭಾಗವಹಿಸಿದ್ದರು. ಆ ದಾಖಲೆ ಈಗ ಮುರಿದಿದೆ.ಈ ಬಗ್ಗೆ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ‘11ನೇ ಅಂತಾರಾಷ್ಟ್ರೀಯ ಯೋಗ ದಿನವು ಅದ್ಧೂರಿಯಾಗಿ ನಡೆಯಿತು. ಈ ಅಭೂತಪೂರ್ವ ಕಾರ್ಯಕ್ರಮದೊಂದಿಗೆ ನಾವು ಇತಿಹಾಸ ನಿರ್ಮಿಸಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದರು.

ದೇಶ-ವಿದೇಶಗಳಲ್ಲಿ 11ನೇ ಯೋಗ ದಿನ ಯಶಸ್ವಿ

ನವದೆಹಲಿ: 11ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ದೇಶ ಹಾಗೂ ವಿದೇಶಗಳ ವಿವಿಧೆಡೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಖ್ಯಾತ ವೈದ್ಯ, ಲೇಖಕ ದೀಪಕ್ ಚೋಪ್ರಾ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ವಿಶ್ವದ 191 ಕಡೆ ಭಾರತದ ವತಿಯಿಂದ ಯೋಗ ದಿನಾಚರಣೆ ಆಯೋಜಿಸಲಾಗಿತ್ತು

ವಿಶಾಖಪಟ್ಟಣಂನ ರಾಮಕೃಷ್ಣ ಕಡಲತೀರದಲ್ಲಿ ಯೋಗ ಪ್ರದರ್ಶಿಸಿ ಮಾತನಾಡಿದ ಮೋದಿ, ‘ಮಾನವಕುಲವು ಉಸಿರಾಡಲು, ಸಮತೋಲನ ಸಾಧಿಸಲು, ಮತ್ತೆ ಪರಿಪೂರ್ಣಗೊಳ್ಳಲು ಅಗತ್ಯವಿರುವ ವಿರಾಮ ಗುಂಡಿಯೇ ಯೋಗ. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’. ಇದು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಆರೋಗ್ಯವು ಪರಸ್ಪರ ಸಂಬಂಧ ಹೊಂದಿದೆ ಎಂಬ ಸತ್ಯವನ್ನು ಪ್ರತಿಬಿಂಬಿಸುತ್ತದೆ’ ಎಂದರು.

ಡೆಹ್ರಾಡೂನ್‌ನಲ್ಲಿ ಯೋಗ ಪ್ರದರ್ಶಿಸಿ, ಆ ಬಳಿಕ ಮಾತನಾಡಿದ ರಾಷ್ಟ್ರಪತಿ ಮುರ್ಮು ‘ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸುವಂತೆ ಭಾರತವು ಸಲ್ಲಿಸಿದ ಪ್ರಸ್ತಾಪವನ್ನು ವಿಶ್ವಸಂಸ್ಥೆಯು 2015ರಲ್ಲಿ ಅಂಗೀಕರಿಸಿದ ನಂತರ, ವಿಶ್ವಾದ್ಯಂತ ಅನೇಕ ದೇಶಗಳು ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿವೆ. ಯೋಗವು ಇಡೀ ಮಾನವಕುಲಕ್ಕೆ ಹಂಚಿಕೆಯಾದ ಪರಂಪರೆಯಾಗಿದೆ’ ಎಂದರು.ಉಧಂಪುರದಲ್ಲಿ ಸೈನಿಕರೊಂದಿಗೆ ಯೋಗ ದಿನ ಆಚರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಯೋಗವು ಸೈನಿಕನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಪಡಿಸುತ್ತದೆ. ಅದರ ಪ್ರಯೋಜನಗಳನ್ನು ಯುದ್ಧಭೂಮಿಯಲ್ಲಿ ಕಾಣಬಹುದು’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇವು ಕೆರೆಯಲ್ಲಿ ಅರಳಿದ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್