ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾರ್ವತ್ರಿಕವಾಗಿ ಮುಖಾಮುಖಿ ಚರ್ಚೆ ನಡೆಸಬೇಕೆಂಬ ಸಲಹೆಯನ್ನು ರಾಹುಲ್ ಒಪ್ಪಿಕೊಂಡಿದ್ದಾರೆ.
ನವದೆಹಲಿ (ಮೇ.12): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾರ್ವತ್ರಿಕವಾಗಿ ಮುಖಾಮುಖಿ ಚರ್ಚೆ ನಡೆಸಬೇಕೆಂಬ ಸಲಹೆಯನ್ನು ರಾಹುಲ್ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಸಮ್ಮತಿಸಿದರೆ ಐತಿಹಾಸಿಕ ಘಟನೆಯೊಂದಕ್ಕೆ ದೇಶ ಸಾಕ್ಷಿಯಾಗಲಿದೆ. ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್, ‘ಈ ಉಪಕ್ರಮವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಮತ್ತು ಚರ್ಚೆಯ ಕುರಿತಾದ ಆಹ್ವಾನವನ್ನು ಸ್ವೀಕರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಚರ್ಚೆಯ ಆಹ್ವಾನ ಸ್ವೀಕರಿಸುತ್ತಾರೆ ಎಂದು ದೇಶ ಬಯಸುತ್ತದೆ’ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ.ಲೋಕೂರ್, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಿತ್ ಪಿ.ಶಾ ಮತ್ತು ಹಿಂದೂ ಪತ್ರಿಕೆಯ ನಿವೃತ್ತ ಸಂಪಾದಕ ಎನ್.ರಾಮ್, ಮೋದಿ ಮತ್ತು ರಾಹುಲ್ ಮುಖಾಮುಖಿ ಚರ್ಚೆಗೆ ಸಲಹೆ ನೀಡಿ ಪತ್ರ ಬರೆದಿದ್ದರು.
ಮೋದಿ ಮತ್ತೆ ಪಿಎಂ ಆಗೋಲ್ಲ: ‘ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸವಾಲು ಹಾಕಿದ್ದಾರೆ. ‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ವರ್ಧಿಸುತ್ತಿವೆ. ಇಲ್ಲಿ ಇಂಡಿಯಾ ಕೂಟದ ಬಿರುಗಾಳಿ ಬೀಸುತ್ತಿದೆ. ಈ ಗಾಳಿಗೆ ಸಿಲುಕಿ ಬಿಜೆಪಿ ಅತಿ ದೊಡ್ಡ ಸೋಲನ್ನು ಕಾಣಲಿದೆ. ಆದ್ದರಿಂದ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮೋದಿ ಆಯ್ಕೆಯಾಗುವುದಿಲ್ಲ. ಇದನ್ನು ಬೇಕಾದರೆ ಮತದಾರರು ಬರೆದಿಟ್ಟುಕೊಳ್ಳಿ’ ಎಂದರು.
ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವಾಗ್ದಾಳಿ
‘ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಕೂಟ ಸುಮಾರು 50 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು. ‘ಅದಾನಿ, ಅಂಬಾನಿ ಟೆಂಪೊದಲ್ಲಿ ಕಾಂಗ್ರೆಸ್‌ಗೆ ಹಣ ಕಳಿಸಿದ್ದಾರಾ?’ ಎಂಬ ಮೋದಿ ಟೀಕೆ ಬಗ್ಗೆ ಮಾತನಾಡಿದ ಅವರು, ‘ಇಂಡಿಯಾ ಕೂಟ ತನ್ನನ್ನು ಸುತ್ತುವರೆದಿದೆ. ತಾನು ಸೋಲಿನ ಭೀತಿಯಲ್ಲಿದ್ದೇನೆ ಎಂದು ಮೋದಿಗೆ ಅರಿವಾಗಿದೆ. ಹೀಗಾಗಿ ಅದಾನಿ, ಅಂಬಾನಿ ಅವರಿಗೆ ತನ್ನನ್ನು ಕಾಪಾಡುವಂತೆ ಮೋದಿ ಗೋಗರೆಯುತ್ತಿದ್ದಾರೆ’ ಎಂದು ರಾಹುಲ್ ಲೇವಡಿ ಮಾಡಿದರು. ‘ಮೋದಿ ಅವರಿಗೆ ಅದಾನಿ, ಅಂಬಾನಿ ಅವರ ಹಣದ ಟೆಂಪೊ ಬಗ್ಗೆ ತುಂಬಾ ವೈಯಕ್ತಿಕವಾಗಿ ಅನುಭವ ಇದೆ. ಅವರು ಇದುವರೆಗೂ ಅದೆಷ್ಟೋ ಹಣದ ಟೆಂಪೊಗಳನ್ನು ನೋಡಿದ್ದಾರೋ ನನಗೆ ಗೊತ್ತಿಲ್ಲ’ ಎಂದೂ ವ್ಯಂಗ್ಯವಾಡಿದರು.