ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲು ರದ್ದಾದರೆ ದಂಗೆ ಆಗುತ್ತೆ: ಕೇಂದ್ರದ ವಾದ

By Suvarna News  |  First Published Apr 2, 2022, 8:23 AM IST

* ಎಸ್ಸಿ, ಎಸ್ಟಿನೌಕರರ ವೇತನ, ಹುದ್ದೆಯೂ ಬದಲಾಗುತ್ತೆ

* ಬಡ್ತಿಯಲ್ಲಿ ಎಸ್ಸಿ, ಎಸ್ಟಿಮೀಸಲು ರದ್ದಾದರೆ ದಂಗೆ ಆಗುತ್ತೆ: ಕೇಂದ್ರ

* ಹಲವು ವಾಜ್ಯಗಳು ಸೃಷ್ಟಿಯಾಗುತ್ತವೆ: ಸುಪ್ರೀಂಗೆ ವಾದ


ನವದೆಹಲಿ(ಏ.02): ಸರ್ಕಾರಿ ಹುದ್ದೆಗಳ ಬಡ್ತಿ ವೇಳೆ ಪರಿಶಿಷ್ಟಜಾತಿ, ಪಂಗಡದ ನೌಕರರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸಿದರೆ ನೌಕರರು ದಂಗೆ ಏಳುವ ಹಾಗೂ ಹಲವು ವ್ಯಾಜ್ಯಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಎಸ್ಸಿ/ ಎಸ್ಟಿಸಮುದಾಯದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ನೀಡುವುದನ್ನು ರದ್ದು ಮಾಡಿ 2017ರಲ್ಲಿ ದೆಹಲಿ ಹೈಕೋರ್ಚ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಅಫಿಡವಿಟ್‌ ಸಲ್ಲಿಸಿದೆ. ಎಸ್ಸಿ/ಎಸ್ಟಿಸಮುದಾಯ ಸರ್ಕಾರಿ ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎನ್ನುವ ಯಾವುದೇ ದಾಖಲೆ ಇಲ್ಲದೇ ಈ ರೀತಿ ಮೀಸಲು ನೀಡಬಾರದು ಎಂದು ದೆಹಲಿ ಹೈಕೋರ್ಚ್‌ ಸ್ಪಷ್ಟಪಡಿಸಿತ್ತು.

Tap to resize

Latest Videos

ಈ ಬಗ್ಗೆ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಸರ್ಕಾರ, ‘ಬಡ್ತಿಯಲ್ಲಿ ಮೀಸಲು ರದ್ದುಗೊಳಿಸಿದರೆ ಎಸ್ಸಿ/ಎಸ್ಟಿನೌಕರರಿಗೆ ನೀಡಲಾಗಿರುವ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ. ಇದರಿಂದಾಗಿ ಅವರ ವೇತನ, ಪಿಂಚಣಿಯಲ್ಲಿ ಪರಿಷ್ಕರಣೆ ಮಾಡಬೇಕಾಗುತ್ತದೆ. ಈ ನಡುವೆ, ಹಲವು ನೌಕರರು ನಿವೃತ್ತರಾಗಿದ್ದಾರೆ. ಅವರಿಗೆ ಪಾವತಿಸಿರುವ ಹೆಚ್ಚುವರಿ ವೇತನ/ಪಿಂಚಣಿಯನ್ನು ವಸೂಲು ಮಾಡಬೇಕಾಗುತ್ತದೆ. ತನ್ಮೂಲಕ ಹಲವು ವ್ಯಾಜ್ಯಗಳು ಸೃಷ್ಟಿಯಾಗಿ, ನೌಕರರ ದಂಗೆಗೆ ಕಾರಣವಾಗುವ ಸಾಧ್ಯತೆ ಇದೆ’ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ

ಎಲ್‌.ನಾಗೇಶ್ವರರಾವ್‌ ಹಾಗೂ ನ್ಯಾ| ಬಿ.ಆರ್‌.ಗವಾಯಿ ಅವರ ಪೀಠಕ್ಕೆ ಕೇಂದ್ರ ಸರ್ಕಾರ ಪ್ರಮಾಣಪತ್ರವೊಂದನ್ನು ಸಲ್ಲಿಸಿದೆ.

ಇದೇ ವೇಳೆ ಮೀಸಲು ನೀತಿಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಸರ್ಕಾರಿ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿಪ್ರಾತಿನಿಧ್ಯ ಸೂಕ್ತವಾಗಿಲ್ಲ. ಮೀಸಲಾತಿ ನೀಡುವುದರಿಂದ ಆಡಳಿತ ನಿರ್ವಹಣೆಗೆ ಸಮಸ್ಯೆಯಾಗುವುದಿಲ್ಲ. ವಾರ್ಷಿಕ ಕಾರ್ಯನಿರ್ವಹಣೆ ವರದಿ ವ್ಯವಸ್ಥೆ ಆಧಾರದಲ್ಲಿ ಪ್ರತಿಯೊಬ್ಬ ಅಧಿಕಾರಿಯ ಕ್ಷಮತೆ ಪರೀಕ್ಷಿಸಿ ಆಡಳಿತಾತ್ಮಕ ಕ್ಷಮತೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರದ 75 ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ 27,55,430 ಹುದ್ದೆಗಳು ಇವೆ. ಆ ಪೈಕಿ 4,79,301 ಹುದ್ದೆಗಳಲ್ಲಿ ಎಸ್ಸಿ, 2,14,738 ಹುದ್ದೆಗಳಲ್ಲಿ ಎಸ್‌ಟಿ ಹಾಗೂ 4,57,148 ಹುದ್ದೆಗಳಲ್ಲಿ ಒಬಿಸಿ ನೌಕರರಿದ್ದಾರೆ ಎಂದು ಹೇಳಿದೆ.

click me!