* ಇಂದು ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಹೆದ್ದಾರಿ ಉದ್ಘಾಟನೆ
* ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಸೇನಾ ವಿಮಾನದಲ್ಲಿ ಮೋದಿ ಲ್ಯಾಂಡಿಂಗ್!
ನವದೆಹಲಿ(ನ.16): ಉತ್ತರ ಪ್ರದೇಶದಲ್ಲಿ 22,500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ 340 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ಘಾಟನೆಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿನೂತನ ರೀತಿಯಲ್ಲಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ಸೇನಾ ಸರಕು ವಿಮಾನದಲ್ಲಿ ಬಂದು ಹೆದ್ದಾರಿಯ ಮೇಲೆ ಲ್ಯಾಂಡ್ ಆಗಲಿದ್ದಾರೆ.
ಯುದ್ಧ ಮುಂತಾದ ತುರ್ತು ಸಂದರ್ಭಗಳಲ್ಲಿ ರಸ್ತೆಯ ಮೇಲೆ ಯುದ್ಧ ವಿಮಾನಗಳನ್ನು ಇಳಿಸಲು ದೇಶದ ಹಲವೆಡೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಅದರಂತೆ ಕೆಲ ತಿಂಗಳ ಹಿಂದೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜಸ್ಥಾನದ ಹೆದ್ದಾರಿ ಮೇಲೆ ನಿರ್ಮಿಸಿರುವ ಏರ್‌ಸ್ಟ್ರಿಪ್‌ನಲ್ಲಿ ಮೊದಲ ಬಾರಿ ಯುದ್ಧವಿಮಾನದಲ್ಲಿ ಇಳಿದಿದ್ದರು. ಇದೀಗ ಪ್ರಧಾನಿ ಮೋದಿ ಹಾಗೂ ರಾಜನಾಥ್ ಪೂರ್ವಾಂಚಲ ಹೆದ್ದಾರಿ ಮೇಲೆ ಸಿ-130ಜೆ ಸುಪರ್ ಹಕ್ರ್ಯುಲಸ್ ವಿಮಾನದಲ್ಲಿ ಬಂದಿಳಿದು, ನಂತರ ಹೆದ್ದಾರಿ ಉದ್ಘಾಟಿಸಲಿದ್ದಾರೆ.
undefined
ಮೋದಿ ಆಗಮನದ ನಂತರ ಸ್ಥಳದಲ್ಲಿ ಏರ್‌ಶೋ ನಡೆಯಲಿದೆ. ಮಿರಾಜ್ 2000, ಎಎನ್-32 ಟರ್ಬೋಪ್ರಾಪ್ ಹಾಗೂ ಸುಖೋಯ್-30 ಯುದ್ಧ ವಿಮಾನಗಳು ಹೆದ್ದಾರಿಯ ಮೇಲೆ ಬಂದಿಳಿಯಲಿವೆ. ನಂತರ ಕಿರಣ್ ಎಂಕೆ2 ವಿಮಾನಗಳು ಹಾಗೂ ಸುಖೋಯ್ ಜೆಟ್‌ಗಳು ಸ್ಥಳದ ಮೇಲೆ ಹಾರಿಹೋಗಲಿವೆ ಎಂದು ಮೂಲಗಳು ಹೇಳಿವೆ.
ಪೂರ್ವಾಂಚಲ ಎಕ್ಸಪ್ರೆಸ್ ವೇ 341 ಕಿಮೀ ಉದ್ದವಿದ್ದು 6 ಲೇನ್ ಅಗಲವಾಗಿದೆ. ಇದು ಉತ್ತರ ಪ್ರದೇಶದ ಲಖನೌ, ಬಾರಾಬಂಕಿ, ಅಮೇಠಿ, ಅಯೋಧ್ಯೆ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಆಜಂಘಡ, ಮೌ ಹಾಗೂ ಘಾಜಿಪುರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.