* ತುರ್ತುಸಭೆ ನಡೆಸಿ ಸಂಜೆಯೊಳಗೆ ನಿರ್ಧಾರ ತಿಳಿಸಲು ಸೂಚನೆ
* ದೆಹಲಿ ಮಾಲಿನ್ಯ ನಿಯಂತ್ರಿಸಲು ಸರ್ಕಾರಗಳಿಗೆ ಸುಪ್ರೀಂ ಗಡುವು
ನವದೆಹಲಿ(ನ.16): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Air Pollution In Delhi) ದಿನೇದಿನೇ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ (Supreme Court), ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಿ, ಮಂಗಳವಾರ ಸಂಜೆಯೊಳಗೆ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿ ಆದೇಶಿಸಿದೆ. ಅಲ್ಲದೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು (Union ANd Delhi Govt) ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ ಕೆಲ ಕಾಲ ಎಲ್ಲಾ ನೌಕರರಿಗೆ ವರ್ಕ್ ಫ್ರಂ ಹೋಂ (Work From Home) ಜಾರಿಗೊಳಿಸಲು ಪರಿಶೀಲನೆ ನಡೆಸುವಂತೆಯೂ ಸೂಚಿಸಿದೆ.
ಇದೇ ವೇಳೆ, ಇಷ್ಟುದಿನ ದೆಹಲಿ ಸುತ್ತಮುತ್ತಲಿನ ರಾಜ್ಯಗಳ ರೈತರು ತಮ್ಮ ಹೊಲದಲ್ಲಿ ಹುಲ್ಲು ಸುಡುವುದನ್ನೇ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣ ಎಂಬಂತೆ ‘ಗದ್ದಲ ಎಬ್ಬಿಸುತ್ತಿದ್ದ’ ಸರ್ಕಾರಗಳನ್ನು ತರಾಟೆ ತೆಗೆದುಕೊಂಡಿರುವ ನ್ಯಾಯಪೀಠ, ಬೆಳೆ ತ್ಯಾಜ್ಯ ಸುಡುವಿಕೆಯಿಂದ ಶೇ.4ರಿಂದ 10ರಷ್ಟುಮಾತ್ರ ಮಾಲಿನ್ಯ (Pollution) ಆಗುತ್ತಿದೆ. ರಾಜಧಾನಿಯ ಮಾಲಿನ್ಯಕ್ಕೆ ಮುಖ್ಯವಾದ ಮೂರು ಕಾರಣಗಳೆಂದರೆ ನಿರ್ಮಾಣ ಚಟುವಟಿಕೆಯ ಧೂಳು, ಉದ್ದಿಮೆಗಳು ಹಾಗೂ ವಾಹನಗಳು ಎಂದು ಹೇಳಿದೆ.
ಈ ಮಧ್ಯೆ, ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ, ‘ಅಗತ್ಯಬಿದ್ದರೆ ದೆಹಲಿಯಲ್ಲಿ ಸಂಪೂರ್ಣ ಲಾಕ್‌ಡೌನ್ (Lockdown) ಜಾರಿಗೊಳಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ, ನಾವೊಬ್ಬರೇ ಲಾಕ್‌ಡೌನ್ ಜಾರಿಗೊಳಿಸಿದರೆ ಸಾಲದು, ರಾಷ್ಟ್ರ ರಾಜಧಾನಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ತಮ್ಮ ಭಾಗಗಳಲ್ಲಿ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಸರ್ಕಾರಗಳೂ ಲಾಕ್‌ಡೌನ್ ಘೋಷಿಸಬೇಕು’ ಎಂದು ತಿಳಿಸಿದೆ.
ಕೂಡಲೇ ತುರ್ತು ಸಭೆ ಕರೆಯಿರಿ:
ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಹಾಗೂ ಸಂಬಂಧಪಟ್ಟರಾಜ್ಯ ಸರ್ಕಾರಗಳು ಅನಗತ್ಯ ಚಟುವಟಿಕೆಗಳನ್ನು ಸದ್ಯಕ್ಕೆ ನಿಲ್ಲಿಸುವುದು, ವರ್ಕ್ ಫ್ರಂ ಹೋಮ್ ಜಾರಿಗೊಳಿಸುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಂಗಳವಾರ ಸಂಜೆಯೊಳಗೆ ತುರ್ತು ಸಭೆ (Emergency Meeting) ನಡೆಸಿ ನಿರ್ಧಾರ ಕೈಗೊಂಡು ನಮಗೆ ತಿಳಿಸಬೇಕು. ಸಭೆಯಲ್ಲಿ ಕೇಂದ್ರ ಸರ್ಕಾರದ ಜೊತೆ ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೂ ಪಾಲ್ಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು.
ರೈತರ ಬಗ್ಗೆ ಅನಗತ್ಯ ಗದ್ದಲ:
ವಿಚಾರಣೆಯ ವೇಳೆ ಕೇಂದ್ರ ಸರ್ಕಾರವು ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಸುತ್ತಮುತ್ತಲ ರಾಜ್ಯಗಳ ರೈತರು ಹುಲ್ಲು ಸುಡುವುದು ಕೇವಲ ಶೇ.4ರಿಂದ ಶೇ.10ರಷ್ಟುಮಾತ್ರ ಕಾರಣ ಎಂದು ತಿಳಿಸಿತು. ಅದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ, ಹಾಗಿದ್ದರೆ ಇಷ್ಟುದಿನ ಏಕೆ ರೈತರ ಬಗ್ಗೆ ಅಷ್ಟೊಂದು ಗದ್ದಲ ಎಬ್ಬಿಸುತ್ತಿದ್ದಿರಿ? ವೈಜ್ಞಾನಿಕ ಅಥವಾ ವಾಸ್ತವಿಕ ಆಧಾರವಿಲ್ಲದೆ ಸುಮ್ಮನೆ ವಾದ ಮಾಡುತ್ತಿದ್ದಿರಾ? ಶೇ.75ರಷ್ಟುಮಾಲಿನ್ಯಕ್ಕೆ ಕಾರಣ ಉದ್ದಿಮೆಗಳು, ಧೂಳು ಹಾಗೂ ವಾಹನಗಳು ಎಂದು ಈಗ ಹೇಳುತ್ತಿದ್ದೀರಿ. ಹಾಗಿದ್ದರೆ ಇವುಗಳನ್ನು ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿತು.
++++
ಸುಪ್ರೀಂ ಸೂಚನೆಗಳು
- ಮಂಗಳವಾರದೊಳಗೆ ತುರ್ತು ಸಭೆ ನಡೆಸಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ತಿಳಿಸಬೇಕು
- ರೈತರು ಹುಲ್ಲು ಸುಡುತ್ತಾರೆಂದು ಸರ್ಕಾರ ಗದ್ದಲ ಎಬ್ಬಿಸುವುದು ಬಿಟ್ಟು ನಿಜವಾದ ಕಾರಣ ಪರಿಶೀಲಿಸಬೇಕು
- ಮಾಲಿನ್ಯಕ್ಕೆ 3 ಮುಖ್ಯ ಕಾರಣಗಳಾದ ಉದ್ದಿಮೆಗಳು, ಧೂಳು ಹಾಗೂ ವಾಹನಗಳನ್ನು ಸದ್ಯಕ್ಕೆ ನಿಯಂತ್ರಿಸಬೇಕು
- ವಾಹನ ದಟ್ಟಣೆ ಕಡಿಮೆ ಮಾಡಲು ವರ್ಕ್ ಫ್ರಂ ಹೋಂ ಜಾರಿಗೆ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು