ಬಿಜೆಪಿ, ಅಕಾಲಿ ದಳಕ್ಕೆ ಕಾಂಗ್ರೆಸ್‌ನಿಂದ ಶಾಕ್‌: ದಲಿತರಿಗೇ ಏಕೆ ಸಿಎಂ ಪಟ್ಟ?

By Suvarna News  |  First Published Sep 20, 2021, 7:27 AM IST

* ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ

* ಅಚ್ಚರಿಯ ರೀತಿಯಲ್ಲಿ ಚರಣಜಿತ್‌ ಚನ್ನಿ ಆಯ್ಕೆ

* ಇಂದು ಬೆಳಗ್ಗೆ 11ಕ್ಕೆ ಪ್ರಮಾಣವಚನ ಸ್ವೀಕಾರ

* ಬಿಜೆಪಿ, ಅಕಾಲಿ ದಳಕ್ಕೆ ಕಾಂಗ್ರೆಸ್‌ನಿಂದ ಶಾಕ್‌


ಚಂಡೀಗಢ(ಸೆ.20): ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ರಾಜೀನಾಮೆಯಿಂದ ತೆರವಾದ ಪಂಜಾಬ್‌ ಮುಖ್ಯಮಂತ್ರಿ ಹುದ್ದೆಗೆ ಅಚ್ಚರಿಯ ರೀತಿಯಲ್ಲಿ ದಲಿತ ಮುಖಂಡ ಚರಣ್‌ಜಿತ್‌ ಸಿಂಗ್‌ ಚನ್ನಿ ಆಯ್ಕೆ ಆಗಿದ್ದಾರೆ. ವಿಧಾನಸಭೆ ಚುನಾವಣೆಗೆ ಕೇವಲ 5 ತಿಂಗಳು ಮಾತ್ರವೇ ಬಾಕಿ ಇರುವಾಗ ದಲಿತ ಅಸ್ತ್ರವನ್ನು ಪ್ರಯೋಗಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷ​ದ​ಲ್ಲಿನ ಬಂಡು​ಕೋ​ರರು ಹಾಗೂ ಪ್ರತಿ​ಪ​ಕ್ಷ​ಗಳ ಬಾಯಿ ಮುಚ್ಚಿಸುವಲ್ಲಿಯೂ ಯಶಸ್ವಿಯಾಗಿದೆ. ಇದೇ ವೇಳೆ, ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಚನ್ನಿ ಪಾತ್ರರಾಗಲಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮುಖಂಡನನ್ನಾಗಿ ಭಾನು​ವಾರ ಸಂಜೆ ಚನ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಪಂಜಾಬ್‌ನ ನೂತನ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಿದರು.

Latest Videos

ಸಿಖ್‌ ಧರ್ಮ​ದ​ಲ್ಲಿ​ನ ದಲಿತ ಸಮುದಾಯಕ್ಕೆ ಸೇರಿದ 58 ವರ್ಷದ ಚರಣ್‌ಜಿತ್‌ ಸಿಂಗ್‌, ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರನ್ನು ಭೇಟಿ ಆಗಿರುವ ಚರಣ್‌ಜಿತ್‌ ಸಿಂಗ್‌ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಅಮ​ರೀಂದರ್‌ ವಿರೋ​ಧಿ​ಯಾ​ಗಿ​ರುವ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವ​ಜೋತ್‌ ಸಿಧು ಅವರ ಆಪ್ತ, ಹಿರಿಯ ಸಚಿವ ಸುಖಜಿಂದರ್‌ ಸಿಂಗ್‌ ಅವರ ಹೆಸರು ಸಂಜೆ​ಯ​ವ​ರೆ​ಗೂ ಮುಖ್ಯಮಂತ್ರಿ ಹುದ್ದೆಗೆ ಪ್ರಬ​ಲ​ವಾಗಿ ಕೇಳಿಬಂದಿತ್ತು. ಪಕ್ಷದ ಮಾಜಿ ರಾಜ್ಯಾ​ಧ್ಯಕ್ಷ ಸುನೀಲ್‌ ಜಾಖಡ್‌ ಹಾಗೂ ಸಿಧು ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿದ್ದರು. ಆದರೆ, ಸಂಜೆ ಅಚ್ಚರಿಯ ಆಯ್ಕೆ ಎಂಬಂತೆ ಚರಣ್‌ಜಿತ್‌ ಸಿಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ‘ಕಪ್ಪು ಕುದುರೆ’ಯಾಗಿ ಹೊರಹೊಮ್ಮುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಚನ್ನಿ ಅವ​ರಿಗೆ ನಿರ್ಗ​ಮಿತ ಮುಖ್ಯ​ಮಂತ್ರಿ ಅಮ​ರೀಂದರ್‌ ಸಿಂಗ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೊದ​ಲಾ​ದ​ವರು ಅಭಿ​ನಂದನೆ ಸಲ್ಲಿ​ಸಿ​ದ್ದಾ​ರೆ.

ದಲಿ​ತ​ರಿಗೇ ಏಕೆ ಸಿಎಂ ಪಟ್ಟ?

ಇತ್ತ ಬಿಜೆಪಿ ಕೂಡ ಮುಂದಿನ ಚುನಾವಣೆಯಲ್ಲಿ ದಲಿತ ಮುಖವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ದಲಿತ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಿಜೆಪಿ ಘೋಷಣೆ ಮಾಡಿದೆ. ಅದೇ ರೀತಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿರುವ ಶಿರೋಮಣಿ ಅಕಾಲಿದಳ ಉಪ ಮುಖ್ಯಮಂತ್ರಿ ಅಭ್ಯರ್ಥಿ ದಲಿತ ಸಮುದಾಯದವರೇ ಆಗಲಿದ್ದಾರೆ ಎಂದು ಹೇಳಿದೆ. ಪಂಜಾಬ್‌ನಲ್ಲಿ ದಲಿತ ಸಮುದಾಯದ ಮತಗಳು ಮೂರನೇ ಒಂದರಷ್ಟಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಚರಣ್‌ಜಿತ್‌ ಸಿಂಗ್‌ ಆಯ್ಕೆ ಮಹತ್ವ ಪಡೆದುಕೊಂಡಿದೆ.

ಚನ್ನಿ ಯಾರು?

- ಸಿಖ್‌ ದಲಿತ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ

- 58 ವರ್ಷದ ನಾಯಕ. 3 ಬಾರಿ ಶಾಸಕರಾಗಿದ್ದಾರೆ.

- 2015ರಿಂದ 2 ವರ್ಷ ಪ್ರತಿ​ಪಕ್ಷ ನಾಯಕರಾಗಿದ್ದರು

- ಅಮರೀಂದರ್‌ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು

- ಅಮ​ರೀಂದರ್‌ ನಾಯಕತ್ವದ ವಿರುದ್ಧ ದನಿ ಎತ್ತಿದ್ದರು

click me!