* ಪಂಜಾಬ್ ಚುನಾಔಣೆ ಗೆಲ್ಲಲು ಪಕ್ಷಗಳ ಪೈಪೋಟಿ
* ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರದಲ್ಲಿ ಬಿಜೆಪಿ ರಣತಂತ್ರ
* ಜಲಂಧರ್‌ನಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ರಣತಂತ್ರ, ಕೈ ತತ್ತರ
ಚಂಡೀಗಢ(ಜ.22): ಪಂಜಾಬ್ ವಿಧಾನಸಭಾ ಚುನಾವಣೆ 2022 ಸಮೀಪಿಸುತ್ತಿದ್ದಂತೆ, ರಾಜಕೀಯ ಆಟವೂ ಬದಲಾಗುತ್ತಿದೆ. ಅದೇನೇ ಇರಲಿ, ರಾಜಕೀಯದಲ್ಲಿ ಒಮ್ಮೊಮ್ಮೆ ಇಂಥ ಸಮೀಕರಣಗಳು ಏರ್ಪಟ್ಟು, ಬೇಡವೆಂದರೂ ಎದುರಾಳಿಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಜಲಂಧರ್‌ನ ಕ್ಯಾಂಟ್ ಸೀಟ್‌ನಲ್ಲೂ ಬಿಜೆಪಿಯ ಮುಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಾಣುತ್ತಿದೆ. ಅಕಾಲಿದಳದ ಮತಗಳಿಗೆ ಕತ್ತರಿ ಹಾಕದ ಅಭ್ಯರ್ಥಿಯನ್ನು ಬಿಜೆಪಿ ಇಲ್ಲಿಂದ ಹುಡುಕುತ್ತಿದೆ. ಏಕೆಂದರೆ ಇದೇ ವೇಳೆ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಕ್ರೀಡಾ ಸಚಿವ ಪರ್ಗತ್ ಸಿಂಗ್ ಗೆಲುವಿನ ಸಾಧ್ಯತೆ ಹೆಚ್ಚಲಿದೆ. ಈ ಕಾರಣಕ್ಕಾಗಿಯೇ ಜಲಂಧರ್ ಕ್ಯಾಂಟ್‌ನಲ್ಲಿ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಸಾಕಷ್ಟು ಚಿಂತನ ಮಂಥನ ನಡೆಸುತ್ತಿದೆ.
ಕಾಂಗ್ರೆಸ್ ನ ಪ್ರಬಲ ಸ್ಥಾನ ಜಲಂಧರ್ ಕ್ಯಾಂಟ್
ಈ ಕ್ಷೇತ್ರ ಕಾಂಗ್ರೆಸ್‌ನ ಪ್ರಬಲ ಕ್ಷೇತ್ರವಾಗಿದೆ. ಇಲ್ಲಿಂದ ಕಾಂಗ್ರೆಸ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯವೆದ್ದಿರುವ ಕ್ರೀಡಾ ಸಚಿವ ಪರ್ಗತ್ ಸಿಂಗ್ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಈ ಸ್ಥಾನವನ್ನು ಕಾಂಗ್ರೆಸ್‌ನಿಂದ ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಇಲ್ಲಿಂದ ಕಾಂಗ್ರೆಸ್ ತೊರೆದು ಅಕಾಲಿದಳ ಸೇರಿರುವ ಅಕಾಲಿದಳದ ಜಗಬೀರ್ ಸಿಂಗ್ ಬ್ರಾರ್ ಕೂಡ ಪ್ರಬಲ ಅಭ್ಯರ್ಥಿ. ಬ್ರಾರ್ ಅವರು ಅಕಾಲಿದಳ ತೊರೆದು ಜೂನ್‌ನಲ್ಲಿ ಕಾಂಗ್ರೆಸ್ ಸೇರಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಮನೆಗೆ ಮರಳಿದರು.
ಕಳೆದ ಬಾರಿ ಸೋಲನುಭವಿಸಿತ್ತು
ಕಳೆದ ಬಾರಿ ಇಲ್ಲಿ ಅಕಾಲಿದಳದ ಸ್ಥಾನಕ್ಕೆ ಸರಬ್ಜಿತ್ ಸಿಂಗ್ ಮಕ್ಕರ್ ಸ್ಪರ್ಧಿಸಿದ್ದು, ಪರ್ಗತ್ ಸಿಂಗ್ ವಿರುದ್ಧ 29 ಸಾವಿರ ಮತಗಳಿಂದ ಸೋತಿದ್ದರು. ಸರಬ್ಜಿತ್ ಮಕ್ಕರ್ ಬಿಜೆಪಿ ಸೇರಿದ್ದಾರೆ. ಹಾಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಬಹುದು. ಆಮ್ ಆದ್ಮಿ ಪಕ್ಷ (ಎಎಪಿ) ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಹಾಕಿ ಚಿನ್ನದ ಪದಕ ವಿಜೇತ ಸುರೇಂದ್ರ ಸಿಂಗ್ ಸೋಧಿ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕ್ಲೀನ್ ಇಮೇಜ್ ಮತ್ತು ದೊಡ್ಡ ಹೆಸರನ್ನು ಹೊಂದಿರುವ ಕಾರಣ, ಆಮ್ ಆದ್ಮಿ ಪಕ್ಷವೂ ಈ ಸ್ಥಾನದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಬಲಿಷ್ಠವಾದಷ್ಟೂ ಕಾಂಗ್ರೆಸ್ ದುರ್ಬಲವಾಗಿರುವುದು ಗಮನಿಸಬೇಕಾದ ಅಂಶ.
ಅಕಾಲಿದಳಕ್ಕೆ ಗೆಲುವಿನ ಅಗತ್ಯವಿದೆ
ಅದೇ ಸಮಯದಲ್ಲಿ ಅಕಾಲಿದಳ ಕೂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಕೂಡ ಅದೇ ತಂತ್ರಗಾರಿಕೆ ನಡೆಸುತ್ತಿದೆ. ಬಿಜೆಪಿಯೂ ಇಲ್ಲಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದರ ಲಾಭ ಕಾಂಗ್ರೆಸ್‌ಗೆ ಸಿಗಬಹುದು. ಏಕೆಂದರೆ ನೆಕ್ ಟು ನೆಕ್ ಪೈಪೋಟಿಯ ಲಾಭವನ್ನು ಕಾಂಗ್ರೆಸ್ ಪಡೆಯಬಹುದು. ಹಾಗಾಗಿಯೇ ಬಿಜೆಪಿ ಈ ಕ್ಷೇತ್ರದ ಬಗ್ಗೆ ಹೆಚ್ಚು ಚಿಂತನೆ ನಡೆಸಿದೆ. ಇದಲ್ಲದೆ, ಜಲಂಧರ್‌ನ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಆದರೆ ಈ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ತೀವ್ರ ಮಂಥನ ನಡೆಯುತ್ತಿದೆ. ಪರ್ಗತ್ ಸಿಂಗ್ ಅವರನ್ನು ನೇರವಾಗಿ ಸುತ್ತುವರಿಯುವುದು ಎಂದರೆ ನವಜೋತ್ ಸಿಂಗ್ ಸಿಧು ಅವರ ಮುತ್ತಿಗೆ ಎಂದರ್ಥ ಎಂದು ತಜ್ಞರು ಹೇಳುತ್ತಾರೆ. ಆದರೆ, ಈ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಳಂಬವಾಗಿದೆ.