ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮೇಲೆ ಆರೋಪ
ಅಕ್ರಮ ಮರಳು ಮಾಫಿಯಾದಲ್ಲಿ ಮುಖ್ಯಮಂತ್ರಿಯ ಪಾಲೂ ಇದೆ
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆರೋಪ
ಚಂಡೀಗಢ (ಜ. 22): ಪಂಜಾಬ್ ಚುನಾವಣೆಯಲ್ಲಿ (Punjab Election) ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಪಂಜಾಬ್ (Punjab )ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder singh), ಪಂಜಾಬ್ ಮುಖ್ಯಮಂತ್ರಿಯಾಗಿರುವ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದರು. ಈಗ ಪಂಜಾಬ್ ನಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವ ಅಕ್ರಮ ಮರಳು ಮಾಫಿಯಾ, ತಾವು ಮುಖ್ಯಮಂತ್ರಿಯಾಗಿದ್ದಾಗಲೂ ಇತ್ತು. ಈ ಕುರಿತಾಗಿ ನಾವು ತನಿಖೆಯನ್ನೂ ನಡೆಸಿದ್ದೆವು. ಸೋನಿಯಾ ಗಾಂಧಿ (Sonia Gandhi) ಕೂಡ ಈ ವಿಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಯಸಿದ್ದರು. ಪಂಜಾಬ್ ಸರ್ಕಾರದ ದೊಡ್ಡ ದೊಡ್ಡ ಸಚಿವರುಗಳೆಲ್ಲಾ ಇದರಲ್ಲಿಭಾಗವಾಗಿದ್ದಾರೆ. ಆದರೆ, ತನಿಖೆಯನ್ನು ನಡೆಸಿದ ನಾನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಧಾನ ಮಾಡಿದೆ. ತಕ್ಷಣವೇ ಕ್ರಮ ಕೈಗೊಂಡಿದ್ದರೆ ಈ ಮಾಫಿಯಾ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಅಕ್ರಮ ಮರಳು ಮಾಫಿಯಾ ವಿಚಾರವಿತ್ತು. ಒಮ್ಮೆ ಸಟ್ಲೇಜ್ (Sutlej) ನದಿಯ ಮಾರ್ಗವಾಗಿ ಹೆಲಿಕಾಪ್ಟರ್ ನಲ್ಲಿ ಹೋಗುವಾಗ, ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ಗಮನಿಸಿದ್ದೆ. ಈ ಕುರಿತಾಗಿ ನಾನು ತನಿಖೆಯನ್ನೂ ಮಾಡಿಸಿದ್ದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಕುರಿತಾಗಿ ವರದಿಯನ್ನೂ ಕೇಳಿದ್ದರು. ಮರಳು ಮಾಫಿಯಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೀವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದ್ದರು. ಆದರೆ, ಪಂಜಾಬ್ ಸರ್ಕಾರದ ದೊಡ್ಡ ಸಚಿವರಿಂದ ಹಿಡಿದು ಚಿಕ್ಕ-ಪುಟ್ಟ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದರು. ಆ ಕಾರಣದಿಂದಾಗಿ ನೀವು ಯಾವ ಕ್ರಮ ಕೈಗೊಳ್ಳಲು ಹೇಳುತ್ತೀರೋ ಆ ಕ್ರಮವನ್ನು ಕೈಗೊಳ್ಳಲಿದ್ದೇನೆ ಎಂದು ಹೇಳಿದ್ದೆ ಎಂದು ಅಮರೀಂದರ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಕ್ರಮ ಮರಳು ಮಾಫಿಯಾದಲ್ಲಿ (Illigal Sand Mafia) ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಹೆಸರುಗಳನ್ನು ಹೇಳುವಂತೆ ಸೋನಿಯಾ ಗಾಂಧಿ ಅವರು ಕೇಳಿದ್ದರು. ಆದರೆ, ಒಬ್ಬಿಬ್ಬರ ಹೆಸರನ್ನು ನಾನು ಹೇಳಿರಲಿಲ್ಲ. ಮೇಲಿನಿಂದ ಕೆಳಗಿನವರೆಗೂ ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದೆ. ಆದರೆ, ನಾನು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದ್ದೆ. ತನಿಖೆ ನಡೆಸಿದ್ದ ನಾನು ಆಗಲೇ ಕ್ರಮ ಕೈಗೊಂಡಿದ್ದರೆ ಇಂದು ಇಂಥ ದೊಡ್ಡ ಅಕ್ರಮಗಳು ಆಗುತ್ತಲೇ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅಕ್ರಮ ಮರಳು ಮಾಫಿಯಾದಲ್ಲಿ ಬೇರೆ ಯಾರಿಗೂ ಪ್ರಶ್ನೆ ಕೇಳಬೇಕಾದ ಅಗತ್ಯವಿಲ್ಲ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರಿಗೆ ಕೇಳಬೇಕು. ಅವರೇ ಇದರಲ್ಲಿ ಶಾಮೀಲಾಗಿದ್ದಾರೆ. ಪಂಜಾಬ್ ಸರ್ಕಾರದ ಹಿರಿಯ ಸಚಿವರು ಇದರಲ್ಲಿದ್ದಾರೆ. ಈ ಮಾಫಿಯಾ ಎಲ್ಲಿಯವರೆಗೂ ಇದೆ ಎಂದರೆ, ಪ್ರತಿ ಬಾರಿಯೂ ಇಲ್ಲಿನ ಸಚಿವರುಗಳಿಗೆ ಅಕ್ರಮ ಮರಳು ಮಾಫಿಯಾದ ಶೇರ್ ಹೋಗುತ್ತದೆ ಎಂದು ದೊಡ್ಡ ಆರೋಪ ಮಾಡಿದ್ದಾರೆ.
ಸಿಎಂ ಅಭ್ಯರ್ಥಿ ಘೋಷಣೆಗಾಗಿ ಎಎಪಿ ಹಾಸ್ಯಮಯ ವಿಡಿಯೋ... ಒಂದು ಗಂಟೆಯಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ
ಚರಂಜಿತ್ ಸಿಂಗ್ ಚನ್ನಿ ಮೇಲಿದೆ ಮೀ ಟೂ ಆರೋಪ: ಚರಂಜಿತ್ ಸಿಂಗ್ ಚನ್ನಿ ವಿರುದ್ಧ ಕೇಳಿ ಬಂದ ಮೀಟೂ (MeToo)ಆರೋಪದ ಬಗ್ಗೆಯೂ ಮಾತನಾಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್. ಒಮ್ಮೆ ನಾನು ದಿನದ ಕೆಲಸ ಮುಗಿಸಿ ಮನೆಗೆ ವಾಪಸಾಗಿದ್ದೆ. ಈ ವೇಳೆ ರೂಪನಗರದ ಮಹಿಳಾ ಎಸ್ ಡಿಎಂ ಒಬ್ಬರು ಅವರ ಪತಿಯೊಂದಿಗೆ ನನ್ನ ಭೇಟಿಯಾಗಲು ಬಂದಿದ್ದರು. ಚರಂಜಿತ್ ಸಿಂಗ್ ಚನ್ನಿ ರಾತ್ರಿಯಿಡಿ ಕರೆ ಮಾಡಿ ಪತ್ನಿಯನ್ನು ಪೀಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇಳೆ ಅಲ್ಲಿಂದಲೇ ಚನ್ನಿಗೆ ಕರೆ ಮಾಡಿದ ನಾನು ಶೀಘ್ರವಾಗಿ ಮನೆಗೆ ಬರುವಂತೆ ಸೂಚನೆ ನೀಡಿದ್ದೆ. ಮೊದಲಿಗೆ ತಾನು ತಪ್ಪೇ ಮಾಡಿಲ್ಲ ಎಂದು ಹೇಳಿದ್ದ ಚನ್ನಿ, ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲದೆ ದಂಪತಿಗಳಿಗೆ ಕ್ಷಮೆಯನ್ನೂ ಕೇಳಿದ್ದರು.
Punjab Elections: ಆಪ್ ಸಂಸದ ಭಗವಂತ್ ಮಾನ್ ಮುಂದಿನ ಸಿಎಂ ಅಭ್ಯರ್ಥಿ!
ಮೀ ಟೂ ವಿಚಾರವನ್ನು ಆ ಸಮಯದಲ್ಲಿ ಯಾಕೆ ಬಹಿರಂಗಪಡಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್, ತಪ್ಪು ಎಲ್ಲರೂ ಮಾಡುತ್ತಾರೆ. ಚನ್ನಿ ದಂಪತಿಗಳಿಗೆ ಕ್ಷಮೆ ಯಾಚಿಸಿದ್ದರಿಂದ ಈ ಸಮಸ್ಯೆ ಅಲ್ಲಿಗೆ ಮುಗಿದಿತ್ತು. ಮತ್ತೆ ಆ ವಿಚಾರ ಕೆದಕುವುದು ಸರಿಯಲ್ಲ ಎಂದು ಸುಮ್ಮನಾಗಿದ್ದೆ ಎಂದು ತಿಳಿಸಿದ್ದಾರೆ.