- ಪ್ರತಿ ಸಚಿವನಿಗೂ ಗುರಿ ನಿಗದಿಪಡಿಸಿದ ಮಾನ್
- ಗುರಿ ಸಾಧಿಸದಿದ್ದರೆ ವಜಾಗೆ ಜನ ಒತ್ತಾಯಿಸಬಹುದು
- ಹಳೆಯ ಸಚಿವರಿಗೆ ನೀಡಿದ ಭದ್ರತೆ ವಾಪಸ್
ಚಂಡೀಗಢ(ಮಾ.21): ‘ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಕ್ಯಾಬಿನೆಟ್‌ನಲ್ಲಿರುವ ಪ್ರತಿ ಸಚಿವರಿಗೂ ಗುರಿಗಳನ್ನು ನಿಗದಿಪಡಿಸಿದ್ದಾರೆ. ಸಚಿವರು ಆ ಗುರಿಯನ್ನು ಸಾಧಿಸುವಲ್ಲಿ ವಿಫಲವಾದರೆ ಜನರು ಸಚಿವರನ್ನು ಆ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಬಹುದಾಗಿದೆ’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಈ ಮೂಲಕ ಸಚಿವರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ
ಶನಿವಾರ 10 ಸಚಿವರು ಕ್ಯಾಬಿನೆಟ್‌ನಲ್ಲಿ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಾನ್ ಕಾರ್ಯನಿರ್ವಹಿಸುತ್ತಿರುವ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಜ್ರಿವಾಲ್ ‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನಗಳಲ್ಲಿ ಮಾನ್ ಬಹಳಷ್ಟುಕಾರ್ಯಗಳನ್ನು ಮಾಡುತ್ತಿದ್ದಾರೆ. ಹಳೆಯ ಸಚಿವರಿಗೆ ನೀಡಿದ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದುಕೊಂಡ ಮಾನ್ ಜನರಿಗೆ ಭದ್ರತೆ ನೀಡುತ್ತಿದ್ದಾರೆ. ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಿದ್ದಾರೆ. ಭ್ರಷ್ಟಾಚಾರ ತಡೆಗೆ ಸಹಾಯವಾಣಿ ಘೋಷಿಸಿದ್ದಾರೆ. 10,000 ಪೊಲೀಸ್ ಸೇರಿದಂತೆ 25,000 ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದಾರೆ’ ಎಂದರು.
ಪಂಜಾಬ್ ನಲ್ಲಿ ಭ್ರಷ್ಟಾಚಾರ ನಿಗ್ರಹ ಹೆಲ್ಪ್ ಲೈನ್, "ಇದೇ ನನ್ನ ವೈಯಕ್ತಿಕ ನಂಬರ್" ಎಂದ Bhagwant Mann!
‘ಪಂಜಾಬಿನ ಜನರು ವಜ್ರಗಳನ್ನು ಆಯ್ದುಕೊಂಡಿದ್ದಾರೆ. ಮಾನ್ ನೇತೃತ್ವದಲ್ಲಿ ಈ 92 ಶಾಸಕರ ತಂಡವು ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ನಾನು ಮಾನ್‌ನ ಹಿರಿಯ ಸಹೋದರನಿದ್ದಂತೆ’ ಎಂದು ಹೇಳಿದರು.
ಭಗವಂತ ಮಾನ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಒಬ್ಬ ಮಹಿಳೆ ಸೇರಿದಂತೆ 10 ಆಮ್ ಆದ್ಮಿ ಪಕ್ಷದ ಶಾಸಕರು ಶನಿವಾರ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಪಂಜಾಬ್ ಭವನದಲ್ಲಿ ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ 10 ಸಚಿವರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಎಲ್ಲ ಸಚಿವರು ಪಂಜಾಬಿಯಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಇಂದಿನಿಂದ ಆಪ್ ಕಾ ಪಂಜಾಬ್: ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ
ಹರ್ಪಾಲ್ ಸಿಂಗ್ ಚೀಮಾ, ಗುರ್ಮೀತ್ ಸಿಂಗ್ ಮೀತ್ ಹೈಯರ್ ಇಬ್ಬರನ್ನು ಹೊರತುಪಡಿಸಿ ಉಳಿದ 8 ಜನರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವರಾಗಿ ರಾಜ್ಯದ ಕ್ಯಾಬಿನೆಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ನಿರ್ಗಮಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಸೇರಿದಂತೆ ಘಟಾನುಘಟಿಗಳನ್ನು ಸೋಲಿಸಿದವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ.
25 ಸಾವಿರ ಸರ್ಕಾರಿ ಉದ್ಯೋಗಕ್ಕೆ ಮಾನ್ ಸಂಪುಟ ಅಸ್ತು
ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಗಳಲ್ಲಿ 10 ಸಾವಿರ ಹುದ್ದೆಗಳು ಖಾಲಿಯಿದ್ದು, ಇತರೆ ಇಲಾಖೆಗಳಲ್ಲಿ 15 ಸಾವಿರ ಹುದ್ದೆಗಳು ಖಾಲಿ ಇವೆ. ಒಟ್ಟು 25 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿದ್ದೇವೆ. ನಾವು ಚುನಾವಣೆ ಸಮಯದಲ್ಲಿ ಹೇಳಿದಂತೆ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವುದು ಎಎಪಿಯ ಗುರಿ’ ಎಂದರು.