ಪಂಜಾಬ್(ಮಾ.10): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಾರಿ ಮುನ್ನಡೆ ಸಾಧಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ಹೇಳಿದಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಾರ್ಟಿ ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆ ಏರುವ ಎಲ್ಲಾ ಸೂಚನೆ ನೀಡಿದೆ. ಆದರೆ ಆಮ್ ಆದ್ಮಿ ಅಬ್ಬರಕ್ಕೆ ಪಂಜಾಬ್‌ನ ಘಟಾನುಘಟಿ ನಾಯಕರು ತೀರ್ವ ಹಿನ್ನಡೆ ಅನುಭವಿಸಿದ್ದಾರೆ.
ಸದ್ಯದ ಪಂಜಾಬ್ ಚುನಾವಣೆ ಫಲಿತಾಂಶದಲ್ಲಿ ಆಮ್ ಆದ್ಮಿ ಪಾರ್ಟಿ 52 ಸ್ಥಾನಗಲ್ಲಿ ಮುನ್ನಡೆ ಪಡೆದಿದೆ. ಇನ್ನು ಕಾಂಗ್ರೆಸ್ 32 ಸ್ಥಾನಗಲ್ಲಿ ಮುನ್ನಡೆ ಪಡೆದುಕೊಂಡಿದೆ. ಇನ್ನು ಶಿರೋಮಣಿ ಅಕಾಲಿ ದಳ 18 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಇನ್ನು ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.ಇತರರು 2 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.
Assembly Elections 2022 Result: ಪಂಜಾಬ್‌ನಲ್ಲಿ ಆಪ್ ಭಾರೀ ಮುನ್ನಡೆ, ಗೋವಾದಲ್ಲಿ ಅತಂತ್ರ ಸ್ಥಿತಿ!
ಪಂಜಾಬ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್‌ನಲ್ಲಿ ಒಳಜಗಳ, ಕ್ಯಾಪ್ಟನ್ ಅಮರಿಂದರ್ ಸಿಂಗ್‌ರನ್ನು ಪಕ್ಷ ತೊರೆಯುವಂತೆ ಮಾಡಿದ ಹಾಗೂ ಸಿಎಂ ಚರಣಜಿತ್ ಸಿಂಗ್ ಚನಿ ವಿರುದ್ಧವೇ ಕತ್ತಿ ಮಸದ ಸಿಧು ಇದೀಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪೂರ್ವ ಅಮೃತಸರದಿಂದ ಸ್ಪರ್ಧಿಸಿರುವ ಸಿಧು, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಹಾಗೂ ಶಿರೋಮಣಿ ಅಕಾಲಿ ದಳ ಅಭ್ಯರ್ಥಿಗಿಂತ ಹಿಂದಿದ್ದಾರೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿಯ ರಾಜೇಶ್ ಕುಮಾರ್ ಹೊನಿ ವಿರುದ್ಧ 42,809 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗುರ್ಜಿತ್ ಸಿಂಗ್ ಔಜ್ಲಾ 99,626 ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ಹರ್ದಿಪ್ ಸಿಂಗ್ ಪುರಿ ವಿರುದ್ಧ ಗೆಲುವು ಸಾಧಿಸಿದ್ದರು. ಪೂರ್ವ ಅಮೃತಸರ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಆದರೆ ಈ ಬಾರಿ ಆಮ್ ಆದ್ಮಿ ಪಾರ್ಟಿಯತ್ತ ಜಾರಿದೆ.
ಇನ್ನು ಹಾಲಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನಿ ಕೂಡ ಹಿನ್ನಡೆ ಅನುಭವಸಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಪಂಜಾಬ್ ಮ್ಯಾಜಿಕ್ ನಂಬರ್:
ಪಂಜಾಬ್‌ನಲ್ಲಿ ಅಧಿಕಾರಕ್ಕೇರಲು 59 ಸ್ಥಾನ ಗೆಲ್ಲಬೇಕು. ಒಟ್ಟು 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಇದೀಗ ಆಮ್ ಆದ್ಮಿ ಪಾರ್ಟಿ ಅಧಿರಾಕ್ಕೇರುವ ಸೂಚನೆ ನೀಡಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ನೇತತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಈ ಮೂಲಕ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸಿತ್ತು.
ಪಂಜಾಬ್‌ನ ಘಟಾನುಘಟಿ ನಾಯಕರು ಸೋಲಿನ ರುಚಿ ಅನುಭವಿಸಿದ್ದಾರೆ.. ಎರಡು ಬಾರಿ ಮುಖ್ಯಮಂತ್ರಿಯಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಲು ಕಂಡಿದ್ದಾರೆ. ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ ಕ್ಯಾಪ್ಟನ್ ಪಟಿಯಾಲ ಕ್ಷೇತ್ರದಿಂದ ಸೋಲು ಕಂಡಿದ್ದಾರೆ. ಇನ್ನು ಪಂಜಾಬ್ ಲೋಕ ಕಾಂಗ್ರೆಸ್ ಕೂಡ ತೀವ್ರ ಹಿನ್ನಡೆ ಅನುಭವಿಸಿದೆ.ಪಂಜಾಬ್‌ನಲ್ಲಿ ಜನ ಆಮ್ ಆದ್ಮಿ ಪಾರ್ಟಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಸಂಪೂರ್ಣ ಲಾಭವನ್ನು ಅರವಿಂದ್ ಕೇಜ್ರಿವಾಲ್ ಪೆಡೆದುಕೊಂಡಿದ್ದರು. ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಗಳನ್ನು ಭೇಟಿಯಾಗಿ ಹೋರಾಟಕ್ಕೆ ಮತ್ತಷ್ಟು ಉತ್ಸಾಹ ತುಂಬಿದ್ದರು.