
ಪುಣೆ: ಯುವತಿಯನ್ನು ‘ದೀದಿ’ (ಅಕ್ಕ) ಎಂದು ಕರೆದ ಕಾಮುಕನೊಬ್ಬ ಆಕೆಯ ಮೇಲೆ ಬಸ್ಸಿನಲ್ಲೇ ಅತ್ಯಾ*ಚಾರ ಎಸಗಿರುವ ಘಟನೆ ಕಳೆದ ಮಂಗಳವಾರ ಪುಣೆಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದತ್ತಾತ್ರೇಯ ರಾಮದಾಸ್ ಗಾಡೆ (37) ಕೃತ್ಯ ನಡೆಸಿದಾತ. ಸ್ಥಳೀಯ ಪೊಲೀಸ್ ಠಾಣೆಯಿಂದ 100 ಮೀ ದೂರದಲ್ಲಿರುವ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿನಲ್ಲಿ ಯುವತಿ ಮೇಲೆ ಕೃತ್ಯ ನಡೆಸಿ ಈತ ಪರಾರಿಯಾಗಿದ್ದ. ಈಗ ಆತನನ್ನು ಬಂಧಿಸಲಾಗಿದೆ.
ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಕಬ್ಬಿನ ಗದ್ದೆಯಲ್ಲಿ ಅವಿತಿರಬಹುದು ಎಂಬ ಶಂಕೆಯಲ್ಲಿ ಆತನ ಪತ್ತೆಗೆ ಪೊಲೀಸರು 13 ತಂಡಗಳನ್ನು ರಚಿಸಿ ಡ್ರೋನ್ ಹಾಗೂ ಶ್ವಾನದಳದ ಸಹಾಯವನ್ನೂ ಪಡೆದಿದ್ದರು.
ಆರೋಪಿ ತನ್ನ ಊರಿನ ಕಬ್ಬಿನ ಹೊಲದಲ್ಲಿ ಅಡಗಿ ಕುಳಿತಿರಬಹುದು ಎನ್ನುವ ಅನುಮಾನದ ಮೇರೆಗೆ ಪೊಲೀಸರು ಸ್ನಿಫರ್ ನಾಯಿಗಳು ಮತ್ತು ಡ್ರೋನ್ ಬಳಸಿ ಶೋಧ ನಡೆಸಿದ್ದರು. ತನಿಖೆಗೆ ಅಪರಾಧ ವಿಭಾಗದ ಪೊಲೀಸರು 13 ವಿಶೇಷ ತಂಡಗಳನ್ನು ರಚಿಸಿದ್ದು, ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನವನ್ನೂ ಘೋಷಿಸಿದ್ದರು. ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಕಡೆಗೂ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪುಣೆಯ ಶಿರೂರ್ ತೆಹ್ಸಿಲ್ ಬಳಿ ಮಧ್ಯರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ನಿರ್ಭಯಾ (ದಿಲ್ಲಿ ಗ್ಯಾಂಗ್‌ರೇಪ್) ಘಟನೆಯನ್ನು ನೆನಪಿಸಿದೆ. ಆ ಘಟನೆ ಬಳಿಕ ಕಾನೂನು ಬಿಗಿ ಮಾಡಿದ್ದರೂ ಇಂಥ ಕೃತ್ಯ ನಿಂತಿಲ್ಲ ಎಂದು ಈ ಘಟನೆಗೆ ನಿವೃತ್ತ ಸಿಜೆಐ ನ್ಯಾ। ಡಿ.ವೈ. ಚಂದ್ರಚೂಡ ಬೇಸರಿಸಿದ್ದಾರೆ.
ಆಗಿದ್ದೇನು?
ಕಳೆದ ಮಂಗಳವಾರ ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಸುಕಿನ 6 ಗಂಟೆಗೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ತನ್ನ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಳು. ಆಗ ದೀದಿ (ಸಹೋದರಿ) ಎಂದು ಹೇಳುತ್ತ ಆಕೆಯನ್ನು ಗಾಡೆ ಮಾತನಾಡಿಸಿದ್ದಾನೆ ಹಾಗೂ ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ಆಗ ಆಕೆ 'ಸತಾರಾ ಎಂದು ಹೇಳಿದಾಗ ನಿಮ್ಮ ಬಸ್ಸು ಇಲ್ಲೇ ಇದೆ ಎಂದು ಹೇಳಿ ಖಾಲಿ ಬಸ್‌ಗೆ ಕರೆದುಕೊಂಡು ಹೋದ ಆತ ಬಸ್‌ನ ಬಾಗಿಲು ಲಾಕ್ ಮಾಡಿ, ಅತ್ಯಾ*ಚಾರ ನಡೆಸಿ ಪರಾರಿಯಾಗಿದ್ದ. ಅಲ್ಲಿನ ಪೊಲೀಸ್ ಠಾಣೆಯ ಕೇವಲ 100 ಮೀ. ಅಂತರದಲ್ಲಿ ಈ ಘಟನೆ ನಡೆದಿತ್ತು. ಯುವತಿ ಬಳಿಕ ಬೆಳಗ್ಗೆ 9 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ತಂಡ ರಚಿಸಿದರು.
ಅಪರಾಧದ ಹಿನ್ನೆಲೆ ಹೊಂದಿರುವ ದತ್ತಾತ್ರೇಯ ರಾಮದಾಸ್ ಗೇಡ್ ಮೇಲೆ ಕ್ರಿಮಿನಲ್ ದಾವೆಗಳಿದ್ದು, ಪುಣೆಯ ಮತ್ತು ನರೆಯ ಅಹಿಲ್ಯಾನಗರದಲ್ಲಿ ಕಳ್ಳತನ ಮತ್ತು ದರೋಡೆ, ಸರಗಳ್ಳತನ ಪ್ರಕರಣಗಳಿದ್ದು, 2019ರಿಂದ ಜಾಮೀನಿನ ಮೇಲೆ ಈತ ಹೊರಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ