ಸಕ್ಸಸ್‌ ಗ್ರೂಪ್ ಮಾಲೀಕ ಭಾವೀ ವರನನ್ನು ಲೋಹಗಡ ಕೋಟೆಯಲ್ಲಿ ಕೊಂದ 22 ವರ್ಷದ ಸಿಯಾ ಗೋಯಲ್ ಯಾರು?

Published : Jun 24, 2026, 05:44 PM IST
Who Is Siya Goyal

ಸಾರಾಂಶ

ಪುಣೆಯ ಕೋಟ್ಯಧಿಪತಿ ಉದ್ಯಮಿಯ ಮಗಳು ಸಿಯಾ ಗೋಯಲ್, ತನ್ನ ಪ್ರಿಯಕರನೊಂದಿಗೆ ಸೇರಿ ನಿಶ್ಚಿತ ವರ ಕೇತನ್ ಅಗರ್ವಾಲ್‌ನನ್ನು ಲೋಹಗಡ ಕೋಟೆಯ ಕಮರಿಗೆ ತಳ್ಳಿ ಕೊಂದಿದ್ದಾಳೆ. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿದ್ದ ಈ ಪ್ರಕರಣ, ಪೊಲೀಸ್ ತನಿಖೆಯ ನಂತರ ಪ್ರೇಮ, ವಂಚನೆ ಮತ್ತು ಕ್ರೂರ ಕೊಲೆಯ ಸಂಚಿನ ಕರಾಳ ಮುಖವನ್ನು ಬಯಲುಮಾಡಿದೆ.

ಇದು ಯಾವುದೇ ಸಿನಿಮೀಯ ಕಥೆಯಲ್ಲ. ನಂಬಿದ ನಿಶ್ಚಿತ ವರನನ್ನೇ ಅತ್ಯಂತ ಕ್ರೂರವಾಗಿ ಕಮರಿಗೆ ತಳ್ಳಿ ಕೊಂದ, ಕೋಟ್ಯಧಿಪತಿ ಉದ್ಯಮಿಯೊಬ್ಬರ ಮಗಳ ಭೀಕರ ಕೊಲೆ ಪಿತೂರಿಯ ನೈಜ ಘಟನೆ. ಪುಣೆಯ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಡ ಕೋಟೆಯಲ್ಲಿ ಜೂನ್ 18 ರಂದು ನಡೆದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿಂಬಿತವಾಗಿದ್ದ ಪ್ರಕರಣ, ಈಗ ತನಿಖೆಯ ನಂತರ ರೋಮಾಂಚನಕಾರಿ ಕೊಲೆ ಸಂಚಾಗಿ ಬಯಲಾಗಿದೆ.

ಯಾರು ಈ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್?

ಸಾವನ್ನಪ್ಪಿರುವ ಕೇತನ್ ಅಗರ್ವಾಲ್ (26) ಪುಣೆಯ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆ 'ಸಕ್ಸಸ್ ಗ್ರೂಪ್'ನ ನಿರ್ದೇಶಕ ಹಾಗೂ ಮುಖ್ಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದ. ತಂದೆ ವಿಶಾಲ್ ಅಗರ್ವಾಲ್. ಸಕ್ಸಸ್ ಗ್ರೂಪ್ ಅನ್ನು ಆತನ ಅಜ್ಜ 2008ರಲ್ಲಿ ಸ್ಥಾಪನೆ ಮಾಡಿದ್ದರು. ಅಗರ್ವಾಲ್ ಕುಟುಂಬದ ಒಟ್ಟು ಆಸ್ತಿ 600 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಭಾವೀ ಗಂಡನನ್ನು ಕೊಂದಿರುವಾಕೆ ಸಿಯಾ ಗೋಯಲ್ (20), ಪುಣೆಯ ಬಿಬ್ವೆವಾಡಿಯ ಶ್ರೀಮಂತ ಉದ್ಯಮಿ ಪ್ರವೀಣ್ ಕುಮಾರ್ ಗೋಯಲ್ ಅವರ ಪುತ್ರಿ. ಇವರ ಕುಟುಂಬವು ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ 'ಬಿಜಿ ಗೋಯಲ್ & ಕಂಪನಿ' ಎಂಬ ಹೆಸರಿನಲ್ಲಿ ಪ್ರಮುಖ ಒಣ ಹಣ್ಣುಗಳು (Dry Fruits) ಮತ್ತು ಮಸಾಲೆ ಪದಾರ್ಥಗಳ ದೊಡ್ಡ ವ್ಯಾಪಾರ ನಡೆಸುತ್ತಿದೆ. ಕೇತನ್ ಅವರ ಮಾವ ಇವರಿಬ್ಬರ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದರು. ಅದರಂತೆ ಈ ವರ್ಷದ ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿತ್ತು.

17 ಕೋಟಿಯ ಅರಮನೆ ವಿವಾಹಕ್ಕೆ ಸಿದ್ಧತೆ:

ಇದೇ ವರ್ಷದ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಬರೋಬ್ಬರಿ 17 ಕೋಟಿ ರೂಗೆ ಮದುವೆಯ ಅರಮನೆ ಬುಕಿಂಗ್‌ ಮಾಡಿದ್ದರು . ಅತಿಥಿಗಳನ್ನು ಕರೆದೊಯ್ಯಲು ಎರಡು ಖಾಸಗಿ ವಿಮಾನಗಳನ್ನು (Private Jets) ಸಹ ಬುಕ್ ಮಾಡಲಾಗಿತ್ತು. ಜೂನ್ 19 ರಂದು ಸಿಯಾ ಗೋಯಲ್ ಅವರ 20ನೇ ಹುಟ್ಟುಹಬ್ಬ ಇತ್ತು. ಇದಕ್ಕಾಗಿ ಕೇತನ್ ಕಳೆದ ಒಂದು ತಿಂಗಳಿನಿಂದ ಅದ್ದೂರಿ ಪಾರ್ಟಿಯೊಂದನ್ನು ಆಯೋಜಿಸಲು ವೀಡಿಯೊಗಳನ್ನು ಮಾಡುತ್ತಾ ಸಂಭ್ರಮದಿಂದ ತಯಾರಿ ನಡೆಸಿದ್ದ. ಬರ್ತಡೇ ಮಂತ್ ಫುಲ್ ಆಕೆಗೆ ಸಪ್ರೈಸ್‌ ನೀಡುತ್ತಿದ್ದ.

ರಹಸ್ಯ ಪ್ರೇಮ ಕಥೆ ಮತ್ತು ಕೊಲೆಯ ಮಾಸ್ಟರ್ ಪ್ಲಾನ್

ಕೇತನ್ ಜೊತೆ ನಿಶ್ಚಿತಾರ್ಥವಾಗಿದ್ದರೂ, ಸಿಯಾ ಗೋಯಲ್ ಈಗಾಗಲೇ ಚೇತನ್ ಚೌಧರಿ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಚೇತನ್ ಕುಟುಂಬವೂ ಸಹ ಗೋಯಲ್ ಕುಟುಂಬದ ಮಾದರಿಯಲ್ಲೇ ಪುಣೆಯಲ್ಲಿ ದೊಡ್ಡ ಉದ್ಯಮ ನಡೆಸುತ್ತಿತ್ತು. 2025ರ ನವೆಂಬರ್‌ನಲ್ಲಿ ಉದ್ಯಮಿಗಳ ದೀಪಾವಳಿ ಪಾರ್ಟಿಯೊಂದರಲ್ಲಿ ಸಿಯಾ ಮತ್ತು ಚೇತನ್ ಪರಿಚಯವಾಗಿ, ಪ್ರೇಮ ಅಂಕುರಿಸಿತ್ತು. ಹೀಗಾಗಿ ಫೆಬ್ರವರಿಯಲ್ಲಿ ನಿಶ್ಚಯವಾಗಿದ್ದ ಕೇತನ್ ಜೊತೆಗಿನ ಮದುವೆ ಇಷ್ಟವಿರಲಿಲ್ಲ ಆತನನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಅರಿತ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್, ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದರು.

2,004 ಕರೆಗಳು ಮತ್ತು 238 ಗಂಟೆಗಳ ಸಂಭಾಷಣೆ:

ಕಳೆದ ಏಳು ತಿಂಗಳಲ್ಲಿ ಸಿಯಾ ಮತ್ತು ಚೇತನ್ ರಹಸ್ಯವಾಗಿ 2,004 ಬಾರಿ ಫೋನ್ ಕರೆಗಳನ್ನು ಮಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಸುಮಾರು 238 ಗಂಟೆಗಳ ಕಾಲ ಕೇವಲ ಕೊಲೆಯ ಪಿತೂರಿ ಮತ್ತು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಮೊದಲ ಪ್ರಯತ್ನ ವಿಫಲ, ಎರಡನೇ ಬಾರಿ ಯಶಸ್ವಿ!

ಸಿಯಾ ಕೊಲೆ ಮಾಡಲು ಅತ್ಯಂತ ದುರ್ಗಮವಾದ ಜಾಗವನ್ನು ಆರಿಸಿಕೊಂಡಿದ್ದಳು. ಸಹ್ಯಾದ್ರಿ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 3,300 ಅಡಿ ಎತ್ತರದಲ್ಲಿರುವ ಲೋನಾವಾಲದ ಲೋಹಗಡ ಕೋಟೆಯೇ ಅವಳ ಸ್ಕೆಚ್ ಆಗಿತ್ತು.

ಮೇ 31ರಂದು ಸಿಯಾ ಮೊದಲು ಕೇತನ್‌ನನ್ನು ಲೋಹಗಡ ಕೋಟೆಯ ಚಾರಣಕ್ಕೆ ಕರೆದೊಯ್ದಿದ್ದಳು. ಎರಡನೇ ಬಾರಿಗೆ 4 ದಿನದಲ್ಲಿ ಮತ್ತೆ ಹೋಗಬೇಕೆಂದು ಹಠ ಹಿಡಿದಳು. ಆದರೆ ಕೇತನ್ ತಾಯಿ ಹೋಗಲು ಬಿಡಲಿಲ್ಲ. ಮತ್ತೆ ಪುನಃ ಜೂನ್ 14 ರಂದು ಆತನನ್ನು ಕಳೆದಿಕೊಂಡು ಕೋಟೆಗೆ ಹೋದಳು. ಅಲ್ಲಿ ಬೆಟ್ಟದಿಂದ ತಳ್ಳಿದಳು. ಆದರೆ ಕೇತನ್ ಅಲ್ಲೇ ಇದ್ದ ಸಣ್ಣ ಹಿಡಿದು ಬಚಾವ್ ಆದ. ಕೂಡಲೇ ಆಕೆ ಹಾವು ಇತ್ತು ಅದಕ್ಕಾಗಿ ತಳ್ಳಿದೆ ಎಂದಳು. ಅದು ಅಲ್ಲಿಗೆ ನಿಂತಿತ್ತು.

ಜೂನ್ 18 : ತನ್ನ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 18 ರಂದು ಸಿಯಾ ಮತ್ತೆ ಕೋಟೆಗೆ ಹೋಗಲು ಕೇತನ್‌ನನ್ನು ಒಪ್ಪಿಸಿದಳು. ಅಂದು ಬೆಳಿಗ್ಗೆ, ಸಿಯಾ ಮತ್ತು ಪ್ರಿಯಕರ ಚೇತನ್ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿ ಕೊನೆಯ ಹಂತದ ಯೋಜನೆ ರೂಪಿಸಿದ್ದರು. ಕೋಟೆಯ ತುದಿಯಲ್ಲಿ ಫೋಟೋಗೆ ಪೋಸ್ ನೀಡುವ ನೆಪದಲ್ಲಿ ಕೇತನ್‌ನನ್ನು ನಿಲ್ಲಿಸಿದ ಸಿಯಾ, ಆತನನ್ನು 3,300 ಅಡಿ ಆಳದ ಕಮರಿಗೆ ತಳ್ಳಿ ಕ್ರೂರವಾಗಿ ಕೊಂದಿದ್ದಾಳೆ. ಇದಕ್ಕೆ ಪ್ರಿಯಕರ ಚೇತನ್ ಸಾಥ್ ನೀಡಿದ್ದಾನೆ.

ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದ ಸುಳಿವುಗಳು

ಕೊಲೆಯ ನಂತರ ಸಿಯಾ ಕಣ್ಣೀರು ಹಾಕುತ್ತಾ, "ಫೋಟೋಗೆ ಪೋಸ್ ನೀಡುವಾಗ ಕೇತನ್ ಕಾಲು ಜಾರಿ ಕಮರಿಗೆ ಬಿದ್ದಿದ್ದಾನೆ" ಎಂದು ಪೊಲೀಸರಿಗೆ ಕಟ್ಟುಕಥೆ ಹೇಳಿದ್ದಳು. ಆರಂಭದಲ್ಲಿ ಪೊಲೀಸರು ಇದನ್ನು ಆಕಸ್ಮಿಕ ಸಾವು (Accidental Death) ಎಂದೇ ಭಾವಿಸಿದ್ದರು. ಮೊದಲು ಕೇತನ್ ಸಹೋದರಿ ಪೊಲೀಸರ ವಿಚಾರಣೆ ವೇಳೆ ಅನುಮಾನ ವ್ಯಕ್ತಪಡಿಸಿದ್ದರು. ಆಕೆ ಪದೇ ಪದೇ ಕೋಟೆಗೆ ಹೋಗಲು ಒತ್ತಾಯಿಸಿದ್ದಳು. ಹಲವು ಬಾರಿ ಅಲ್ಲಿಗೆ ಹೋಗಿದ್ದಾರೆ ಎಂದರು. ಅಲ್ಲಿಂದ ಪೊಲೀಸರ ತನಿಖೆ ತೀವ್ರ ಗೊಂಡಿತ್ತು.

ಇದಕ್ಕೂ ಮುನ್ನ ಬಾಲಿಯಲ್ಲಿ ಫ್ರೀ ವೆಡ್ಡಿಂಗ್ ಶೋಟ್‌ ಗೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಏರ್ಪೋರ್ಟ್ಗೆ ಹೋದಾಗ ಕೇತನ್ ಪಾಸ್‌ಪೋರ್ಟ್ ಮಿಸ್‌ ಆಗಿತ್ತು. ಹೀಗಾಗಿ ಅರ್ಧದಲ್ಲೇ ಬಾಲಿ ಟ್ರಿಪ್ ಮೊಟಕುಗೊಳಿಸಲಾಗಿತ್ತು. ಆದರೆ ಸಿಯಾ ಆತನ ಪಾಸ್‌ಪೋರ್ಟ್ ದಾಖಲೆಗಳನ್ನು ಯಾರಿಗೂ ತಿಳಿಯದಂತೆ ನಾಶ ಮಾಡಿದ್ದಳು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬೇಸಿಗೆಯ ಹೂಡಿ (Hoodie): ಜೂನ್ 18 ರಂದು ಪುಣೆಯಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇತ್ತು. ಅಷ್ಟು ಭೀಕರ ಬೇಸಿಗೆಯ ಬಿಸಿಲಿನಲ್ಲಿ ಪ್ರಿಯಕರ ಚೇತನ್ ಚೌಧರಿ ಕೋಟೆಯ ಸುತ್ತಮುತ್ತ ದಪ್ಪನೆಯ ಹೂಡಿ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದದ್ದು, ಇಬರಿಬ್ಬರ ಕಾರನ್ನು ಫಾಲೋ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಪೊಲೀಸರ ಕಣ್ಣಿಗೆ ಬಿತ್ತು. ದಿನವಿಡೀ ನಡೆಸಿದ ತೀವ್ರ ವಿಚಾರಣೆಯ ನಂತರ, ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ತಾವೇ ಕೇತನ್‌ನನ್ನು ತಳ್ಳಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ.

ಮೇಘಾಲಯ ಕೊಲೆ ಪ್ರಕರಣದ ಮರುಕಳಿಕೆ

ಈ ಭೀಕರ ಪ್ರಕರಣವು ಕಳೆದ ವರ್ಷ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಎಂಬುವವರ ಕೊಲೆಯನ್ನು ನೆನಪಿಸುವಂತಿದೆ. ಅಲ್ಲಿಯೂ ಸಹ ಮಧುಚಂದ್ರಕ್ಕೆ (Honeymoon) ಹೋದಾಗ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕಮರಿಗೆ ತಳ್ಳಿ ಕೊಂದಿದ್ದಳು. ಈಗ ಪುಣೆಯಲ್ಲೂ ಅದೇ ಮಾದರಿಯ ಅಪರಾಧ ನಡೆದಿದೆ.

ಪ್ರಸ್ತುತ, ಪುಣೆ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103 (ಕೊಲೆ) ಮತ್ತು 61(2) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಲಯವು ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Wrong UPI Transaction Refund: ತಪ್ಪಾಗಿ ಹೆಚ್ಚು ಫೋನ್‌ಪೇ ಮಾಡಿದ್ರೆ ಹೇಗೆ ಹಣ ವಾಪಾಸ್‌ ಪಡೆಯೋದು?
ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ