ಪುಲ್ವಾಮಾ ಉಗ್ರರಿಗೆ ನೆರವು, ತಂದೆ-ಮಗಳ ಬಂಧನ!

By Kannadaprabha NewsFirst Published Mar 4, 2020, 8:42 AM IST
Highlights

ಪುಲ್ವಾಮ ಆತ್ಮಾಹುತಿ ದಾಳಿ: ತಂದೆ-ಮಗಳ ಸೆರೆ| ಉಗ್ರರಿಗೆ ಮನೆ, ಆಹಾರದ ನೆರವು ನೀಡಿದ್ದ ತಂದೆ-ಮಗಳು| ಈ ಇಬ್ಬರು ಪುಲ್ವಾಮ ಕೃತ್ಯದ ಪಿತೂರಿಯ ಸಾಕ್ಷಿದಾರರು

ಶ್ರೀನಗರ[ಮಾ.04]: 2019ರ ಫೆಬ್ರವರಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಪುಲ್ವಾಮ ಆತ್ಮಾಹುತಿ ಬಾಂಬ್‌ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಪುಲ್ವಾಮ ಜಿಲ್ಲೆಯ ಹಕ್ರಿಪೊರಾ ನಿವಾಸಿಗಳಾದ ತಾರೀಖ್‌ ಅಹ್ಮದ್‌ ಶಾ ಹಾಗೂ ಅವನ ಪುತ್ರಿ ಇನ್ಷಾ ಜಾನ್‌ ಎಂದು ಗುರುತಿಸಲಾಗಿದೆ.

ಇಬ್ಬರನ್ನೂ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಇದೇ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಜೈಷ್‌ ಉಗ್ರ ಶಾಕಿರ್‌ ಮಗ್ರೇ ಎಂಬುವನನ್ನು ಬಂಧಿಸಿತ್ತು.

ಪುಲ್ವಾಮ ದಾಳಿಕೋರರಾದ ಅದಿಲ್‌ ಅಹ್ಮದ್‌ ದಾರ್‌, ಪಾಕ್‌ ಉಗ್ರ ಮಹಮ್ಮದ್‌ ಉಮರ್‌ ಫಾರೂಕ್‌, ಸಮೀರ್‌ ಅಹ್ಮದ್‌ ದಾರ್‌, ಇಸ್ಮಾಯಿಲ್‌, ಅಲಿಯಾಸ್‌ ಇಬ್ರಾಹಿಂ, ಅಲಿಯಾಸ್‌ ಅದ್ನಾನ್‌ ತನ್ನ ಮನೆಯನ್ನು ಪುಲ್ವಾಮ ದಾಳಿಗಾಗಿ ಉಪಯೋಗಿಸಿಕೊಂಡಿದ್ದರು ಎಂಬ ಮಾಹಿತಿಯನ್ನು ಬಂಧಿತ ತಾರೀಖ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಇನ್ನು ಆತನ ಪುತ್ರಿ ಇನ್ಷಾ, ಎಲ್ಲಾ ಆರೋಪಿಗಳಿಗೆ ಮನೆಯಲ್ಲಿ ಅಹಾರ ತಯಾರಿಸಿಕೊಟ್ಟು ನೆರವು ನೀಡಿದ್ದೂ, ಅಲ್ಲದೆ ಉಗ್ರರ ಸಂಚಾರಕ್ಕೂ ನೆರವಾಗಿದ್ದ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಪುಲ್ವಾಮ ದಾಳಿಯ ನಂತರ ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಬಿಡುಗಡೆ ಮಾಡಿದ ವಿಡಿಯೋ ಸಹ ಇವರ ಮನೆಯ ಮುಂದೆಯೇ ಚಿತ್ರೀಕರಿಸಲಾಗಿದ್ದು ಎಂಬುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ.

click me!