ವೇಶ್ಯಾಗೃಹದಲ್ಲಿ ಸಿಕ್ಕಿಬಿದ್ದ ವೇಶ್ಯೆಯನ್ನು ಬಂಧಿಸುವಂತಿಲ್ಲ: ಸುಪ್ರೀಂ

By Kannadaprabha News  |  First Published May 27, 2022, 4:23 AM IST

*   ಸ್ವ-ಇಚ್ಛೆಯ ವೇಶ್ಯೆಯರನ್ನು ಬಂಧಿಸುವಂತಿಲ್ಲ
*   ಎಲ್ಲರಿಗೂ ತಮ್ಮಿಷ್ಟದ ಜೀವನ ನಡೆಸುವ ಹಕ್ಕಿದೆ
*  ಕಾಂಡೋಂ ಬಳಸುವುದು ವೇಶ್ಯೆಯ ತಪ್ಪಿಗೆ ಸಾಕ್ಷ್ಯವಲ್ಲ
 


ನವದೆಹಲಿ(ಮೇ.27): ವೇಶ್ಯಾಗೃಹಗಳನ್ನು ನಡೆಸುವುದು ಅಕ್ರಮವೇ ಹೊರತು ಸ್ವ ಇಚ್ಛೆಯಿಂದ ವೇಶ್ಯಾವೃತ್ತಿಯಲ್ಲಿ ತೊಡಗುವುದು ಕಾನೂನುಬಾಹಿರವಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವವರು ವಯಸ್ಕರಾಗಿದ್ದಲ್ಲಿ, ಸಮ್ಮತಿಯಿಂದ ಅದರಲ್ಲಿ ಪಾಲ್ಗೊಂಡಿದ್ದಲ್ಲಿ ಅಂಥವರ ವಿರುದ್ಧ ಪೊಲೀಸರು ಕ್ರಿಮಿನಲ್‌ ಕ್ರಮ ತೆಗೆದುಕೊಳ್ಳಬಾರದು. ವೃತ್ತಿ ಯಾವುದಾದರೂ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದ 21ನೇ ಪರಿಚ್ಛೇದದಡಿ ಗೌರವಯುತ ಜೀವನದ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ತನ್ಮೂಲಕ ವೇಶ್ಯಾವಾಟಿಕೆಯನ್ನೂ ವೃತ್ತಿ ಎಂದು ಪರಿಗಣಿಸಿದೆ.

Tap to resize

Latest Videos

ವೇಶ್ಯಾ ವೃತ್ತಿಯಲ್ಲಿರುವವರಿಗೂ ಕಾನೂನಿನಡಿ ಸಮಾನ ರಕ್ಷಣೆ ಇದೆ. ವಯಸ್ಸು ಹಾಗೂ ಸಮ್ಮತಿಯ ಆಧಾರದಲ್ಲಿ ಪ್ರತಿಯೊಬ್ಬರಿಗೂ ಕ್ರಿಮಿನಲ್‌ ಕಾನೂನುಗಳು ಅನ್ವಯವಾಗುತ್ತವೆ ಎಂದು ನ್ಯಾಯಮೂರ್ತಿ ಎಲ್‌.ನಾಗೇಶ್ವರರಾವ್‌ ಅವರಿದ್ದ ಪೀಠ ಹೇಳಿದೆ.

ಹೊರತೆಗೆದ ಕಬ್ಬಿಣದ ಅದಿರು ರಫ್ತಿಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

ಸ್ವಯಂಪ್ರೇರಿತ ಲೈಂಗಿಕ ವೃತ್ತಿ ಅಕ್ರಮವಾಗಿಲ್ಲದ ಕಾರಣ, ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದಾಗ ಸಮ್ಮತಿಯಿಂದ ಆ ಕೆಲಸದಲ್ಲಿ ತೊಡಗಿರುವ ವಯಸ್ಕ ಲೈಂಗಿಕ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಬಾರದು, ಕಿರುಕುಳ ನೀಡಬಾರದು ಅಥವಾ ಸಂತ್ರಸ್ತರನ್ನಾಗಿ ಮಾಡಬಾರದು ಎಂದು ಸೂಚಿಸಿದೆ.

ಲೈಂಗಿಕ ಕಾರ್ಯಕರ್ತೆಯರು ದೂರು ನೀಡಿದಾಗ ಅದರಲ್ಲೂ ವಿಶೇಷವಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿಕೊಂಡಾಗ ಪೊಲೀಸರು ತಾರತಮ್ಯ ಮಾಡಕೂಡದು. ಲೈಂಗಿಕ ಕಿರುಕುಳಕ್ಕೆ ಲೈಂಗಿಕ ಕಾರ್ಯಕರ್ತೆಯರು ಸಂತ್ರಸ್ತರಾಗಿದ್ದರೆ ಅವರಿಗೂ ಎಲ್ಲ ಸೌಲಭ್ಯ ನೀಡಬೇಕು ಎಂದು ಪೊಲೀಸರಿಗೆ ಆದೇಶಿಸಿದೆ.

ಲೈಂಗಿಕ ಕಾರ್ಯಕರ್ತರ ವಿಷಯದಲ್ಲಿ ಪೊಲೀಸರು ನಿರ್ದಯವಾಗಿ ಹಾಗೂ ಹಿಂಸೆಯಿಂದ ನಡೆದುಕೊಳ್ಳುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಆ ವರ್ಗದ ಹಕ್ಕುಗಳಿಗೆ ಮಾನ್ಯತೆ ಇಲ್ಲ ಎಂಬಂತೆ ವರ್ತಿಸುತ್ತಾರೆ. ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದೆ.

ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ತಾಯಿಯಿಂದ ಆಕೆಯ ಮಗುವನ್ನು ಪ್ರತ್ಯೇಕಿಸಬಾರದು. ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳಿಗೂ ಕನಿಷ್ಠ ರಕ್ಷಣೆ ಹಾಗೂ ಗೌರವ ನೀಡಬೇಕು. ಒಂದು ವೇಳೆ, ಅಪ್ರಾಪ್ತರು ವೇಶ್ಯಾಗೃಹ ಅಥವಾ ಲೈಂಗಿಕ ಕಾರ್ಯಕರ್ತರ ಜತೆ ಇದ್ದಾಕ್ಷಣ ಆ ಮಗು ಕಳ್ಳ ಸಾಗಣೆಯಾಗಿದೆ ಎಂದು ಪರಿಭಾವಿಸಬಾರದು ಎಂದು ಸೂಚಿಸಿದೆ.

ಪೊಲೀಸರ ದಾಳಿ ವೇಳೆ ಲೈಂಗಿಕ ಕಾರ್ಯಕರ್ತರ ಗುರುತು ಬಹಿರಂಗವಾಗದಂತೆ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು. ಕಾಂಡೋಂ ಬಳಸಿದಾಕ್ಷಣ ಅದು ಲೈಂಗಿಕ ಕಾರ್ಯಕರ್ತೆಯರ ತಪ್ಪಿಗೆ ಸಾಕ್ಷ್ಯ ಎಂದು ಪೊಲೀಸರು ಭಾವಿಸಬಾರದು. ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ ಬಳಿಕ ಮ್ಯಾಜಿಸ್ಪ್ರೇಟ್‌ ಮುಂದೆ ಹಾಜರುಪಡಿಸಬೇಕು. ಲೈಂಗಿಕ ಕಾರ್ಯಕರ್ತೆ ಸಮ್ಮತಿಯಿಂದ ಈ ಕೆಲಸದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಮ್ಯಾಜಿಸ್ಪ್ರೇಟ್‌ ನಿರ್ಧರಿಸಿದರೆ, ಅಂತಹ ಲೈಂಗಿಕ ಕಾರ್ಯಕರ್ತರನ್ನು ಬಿಡುಗಡೆ ಮಾಡಬಹುದು. ಅದು ಬಿಟ್ಟು ಅವರ ಇಚ್ಛೆಗೆ ವಿರುದ್ಧವಾಗಿ ಆಶ್ರಯ ಕೇಂದ್ರದಲ್ಲಿರುವಂತೆ ಒತ್ತಡ ಹೇರಬಾರದು ಎಂದು ಆದೇಶ ಹೇಳಿದೆ.

ಸುಪ್ರೀಂಕೋರ್ಟ್‌ ಮಹತ್ವದ ಆದೇಶ

- ವಯಸ್ಕರು ಸಮ್ಮತಿಯಿಂದ ವೇಶ್ಯಾವೃತ್ತಿ ಮಾಡುತ್ತಿದ್ದರೆ ಪೊಲೀಸರು ಕ್ರಮ ಕೈಗೊಳ್ಳುವಂತಿಲ್ಲ
- ವೇಶ್ಯಾಗೃಹದಲ್ಲಿ ಸಿಕ್ಕಿಬಿದ್ದ ವೇಶ್ಯೆಯನ್ನು ಬಂಧಿಸುವಂತಿಲ್ಲ, ಅವರ ಮೇಲೆ ಕೇಸು ಹಾಕುವಂತಿಲ್ಲ
- ವೇಶ್ಯಾವೃತ್ತಿಯಲ್ಲಿ ಇರುವವರಿಗೂ ಸಂವಿಧಾನದ 21ನೇ ಪರಿಚ್ಛೇದದಡಿ ಸಮಾನವಾದ ಹಕ್ಕಿದೆ
- ವೇಶ್ಯಾವೃತ್ತಿಯಲ್ಲಿ ಪಾಲ್ಗೊಂಡ ಮಹಿಳೆಯರನ್ನು ಬಲವಂತವಾಗಿ ಆಶ್ರಯ ಕೇಂದ್ರಕ್ಕೆ ಕಳಿಸುವಂತಿಲ್ಲ
- ಕಾಂಡೋಂ ಬಳಸುವುದು ವೇಶ್ಯೆಯ ತಪ್ಪಿಗೆ ಸಾಕ್ಷ್ಯವಲ್ಲ, ದೌರ್ಜನ್ಯ ನಡೆದಿದ್ದರೆ ತನಿಖೆ ನಡೆಸಬೇಕು
 

click me!