ಮುಂಬೈ ಬೀದಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಬ್ರಿಟನ್ ರಾಜಕುಮಾರ ವಿಲಿಯಂ, ಸಚಿನ್ ಸಾಥ್, ಪತ್ನಿಗೆ ಕ್ಯಾನ್ಸರ್ ಬಳಿಕ ಮೊದಲ ವಿದೇಶಿ ಪ್ರವಾಸ!

Published : Nov 16, 2026, 01:24 PM IST
Prince William and Princess Kate

ಸಾರಾಂಶ

ಬ್ರಿಟನ್ ರಾಜಮನೆತನದ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸೆಸ್ ಕೇಟ್ ಮಿಡಲ್‌ಟನ್ ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. 2024ರಲ್ಲಿ ಕೇಟ್ ಮಿಡಲ್‌ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ದಂಪತಿ ಕೈಗೊಂಡಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ.

ಮುಂಬೈ: ಬ್ರಿಟನ್‌ನ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸೆಸ್ ಕ್ಯಾಥರೀನ್ (ಕೇಟ್) ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ರಾಜದಂಪತಿ ಕೈಗೊಂಡಿರುವ ಮೊದಲ ಅಧಿಕೃತ ವಿದೇಶಿ ಪ್ರವಾಸ ಇದಾಗಿದ್ದು, 2024ರಲ್ಲಿ ಕ್ಯಾಥರೀನ್ (ಕೇಟ್) ಅವರಿಗೆ ಕ್ಯಾನ್ಸರ್ ಪತ್ತೆಯಾದ ಬಳಿಕ ಅವರು ಪಾಲ್ಗೊಳ್ಳುತ್ತಿರುವ ಮೊದಲ ಅಂತರರಾಷ್ಟ್ರೀಯ ಪ್ರವಾಸ ಎಂಬ ಕಾರಣಕ್ಕೂ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮುಂಬೈನಲ್ಲಿ ಗಲ್ಲಿ ಕ್ರಿಕೆಟ್ ಆಡಿದ ರಾಜಕುಮಾರ!

ಭಾರತಕ್ಕೆ ಮೂರು ದಿನಗಳ ಭೇಟಿಗೆ ಬಂದ ಬ್ರಿಟನ್‌ನ ಪ್ರಿನ್ಸ್ ವಿಲಿಯಂ ಮತ್ತು ಪತ್ನಿ ಮುಂಬೈನಲ್ಲಿ ಯುವ ಕ್ರಿಕೆಟಿಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂತಸಪಟ್ಟರು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡ ಗಲ್ಲಿ ಕ್ರಿಕೆಟ್ ಆಡಿದರು. ಜೊತೆಗೆ ಅಲ್ಲಿಯೇ ಬೀದಿಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ಜೊತೆಗೆ ಟೀ ಸವಿದು ಉಭಯಕುಶಲೋಪರಿ ಮಾತನಾಡಿದರು. ಪ್ರಿನ್ಸ್ ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್ 2026 ರ ಅರ್ಥ್‌ಶಾಟ್ ಪ್ರಶಸ್ತಿಯನ್ನು ಕೇಂದ್ರೀಕರಿಸಿದ ಮೂರು ದಿನಗಳ ಭೇಟಿಗಾಗಿ ಮುಂಬೈನಲ್ಲಿದ್ದಾರೆ.

ಕ್ಯಾನ್ಸರ್ ಚೇತರಿಕೆಯ ಬಳಿಕ ಕ್ಯಾಥರೀನ್ ಮೊದಲ ವಿದೇಶಿ ಪ್ರವಾಸ

2024ರ ಮಾರ್ಚ್‌ನಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ತಾವು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಯುವರಾಣಿ ಕ್ಯಾಥರೀನ್ ಬಹಿರಂಗಪಡಿಸಿದ್ದರು. ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ಅವರ ವಿದೇಶಿ ಪ್ರವಾಸಗಳು ಸ್ಥಗಿತಗೊಂಡಿದ್ದವು. 2025ರ ಜನವರಿಯಲ್ಲಿ ತಾವು ಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದ ಅವರು, ಹಂತಹಂತವಾಗಿ ಸಾರ್ವಜನಿಕ ಕರ್ತವ್ಯಗಳಿಗೆ ಮರಳಿದ್ದರು. ಇದೀಗ ಪತಿ ಪ್ರಿನ್ಸ್ ವಿಲಿಯಂ ಅವರೊಂದಿಗೆ ಭಾರತ ಪ್ರವಾಸ ಕೈಗೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ರಾಜಮನೆತನದ ಕಾರ್ಯಕ್ರಮಗಳಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

ಮುಂಬೈನಲ್ಲಿ 'ಅರ್ಥ್‌ಶಾಟ್' ಪ್ರಶಸ್ತಿ ಪ್ರದಾನ ಸಮಾರಂಭ, ತಾರೆಯರ ರಂಗು

ತಮ್ಮ ಭಾರತ ಪ್ರವಾಸವನ್ನು ವಾಣಿಜ್ಯ ನಗರಿ ಮುಂಬೈನಿಂದ ಆರಂಭಿಸಿರುವ ರಾಜದಂಪತಿ, ಮಂಗಳವಾರ ನಡೆಯಲಿರುವ ಪ್ರತಿಷ್ಠಿತ 'ಅರ್ಥ್‌ಶಾಟ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹವಾಮಾನ ಬದಲಾವಣೆ ಮತ್ತು ಪರಿಸರ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ನಾವೀನ್ಯಕಾರರನ್ನು ಪ್ರೋತ್ಸಾಹಿಸಲು ಪ್ರಿನ್ಸ್ ವಿಲಿಯಂ 2020ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು.

ಈ ಯೋಜನೆ ಆರಂಭವಾದ ಬಳಿಕ ನಡೆಯುತ್ತಿರುವ ಅತ್ಯಂತ ದೊಡ್ಡ ಸಮಾರಂಭ ಇದಾಗಿದ್ದು, ಜಾಗತಿಕ ಪರಿಸರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಐವರು ವಿಜೇತರಿಗೆ ತಲಾ ಸುಮಾರು 1.3 ಮಿಲಿಯನ್ ಡಾಲರ್ (13 ಲಕ್ಷ) ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟಿ ಆಲಿಯಾ ಭಟ್, ಹಾಲಿವುಡ್ ನಟ ರಾಮಿ ಮಲೆಕ್ ಹಾಗೂ ಬ್ರಿಟಿಷ್ ಪಾಪ್ ಬ್ಯಾಂಡ್ 'ಟೇಕ್ ದಟ್' ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಮುಂಬೈನಲ್ಲಿ ಪರಿಸರ, ಕ್ರಿಕೆಟ್, ಯುವ ಉದ್ಯಮಿಗಳು, ಫ್ಯಾಷನ್ ಮತ್ತು ಬಾಲಿವುಡ್ ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲೂ ದಂಪತಿ ಭಾಗವಹಿಸಲಿದ್ದಾರೆ.

ಭಾರತದ ಪರಿಸರ ನಾವೀನ್ಯತೆಯನ್ನು ಕೊಂಡಾಡಿದ ಪ್ರಿನ್ಸ್ ವಿಲಿಯಂ

ಮುಂಬೈಗೆ ಬಂದಿಳಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ 'ಎಕ್ಸ್' (X) ಮೂಲಕ ಸಂತಸ ಹಂಚಿಕೊಂಡಿರುವ ಪ್ರಿನ್ಸ್ ವಿಲಿಯಂ, ಭಾರತದ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಈ ವರ್ಷದ ಅರ್ಥ್‌ಶಾಟ್ ಪ್ರಶಸ್ತಿಗಾಗಿ ಕ್ಯಾಥರೀನ್ ಮತ್ತು ನಾನು ಭಾರತಕ್ಕೆ ಬಂದಿರುವುದು ಅತೀವ ಸಂತಸ ತಂದಿದೆ. ಕಳೆದ ಆರು ವರ್ಷಗಳಲ್ಲಿ ಅರ್ಥ್‌ಶಾಟ್‌ಗೆ ಭಾರತ ಅಸಾಧಾರಣ ಕೊಡುಗೆ ನೀಡಿದ್ದು, ಜಗತ್ತಿನ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಅರ್ಥ್‌ಶಾಟ್ ಫೈನಲಿಸ್ಟ್‌ಗಳು ಮತ್ತು ವಿಜೇತರು ಭಾರತದಿಂದಲೇ ಹೊರಹೊಮ್ಮಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

"ಪರಿಸರ ನಾವೀನ್ಯತೆಗೆ ಭಾರತವು ವಿಶ್ವದ ಅತ್ಯಂತ ರೋಮಾಂಚಕಾರಿ ತಾಣಗಳಲ್ಲಿ ಒಂದಾಗಿದೆ. ದೇಶಾದ್ಯಂತ ಜನರು ಜಾಗತಿಕ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ವಾರವಿಡೀ ಪ್ರಗತಿಗೆ ಚಾಲನೆ ನೀಡುತ್ತಿರುವ ನಾವೀನ್ಯಕಾರರು, ಉದ್ಯಮಿಗಳು ಹಾಗೂ ಭವಿಷ್ಯದ ಬಗ್ಗೆ ಆಶಾವಾದ ಮೂಡಿಸುವ ಯುವಜನರನ್ನು ಭೇಟಿ ಮಾಡಿ ಸಂಭ್ರಮಿಸಲು ನಾವು ಎದುರು ನೋಡುತ್ತಿದ್ದೇವೆ. ಅರ್ಥ್‌ಶಾಟ್‌ನ ಧ್ಯೇಯವನ್ನು ಪ್ರದರ್ಶಿಸಲು ಭಾರತಕ್ಕಿಂತ ಸೂಕ್ತವಾದ ಸ್ಥಳ ಇನ್ನೊಂದಿಲ್ಲ" ಎಂದು ವಿಲಿಯಂ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ

ಮುಂಬೈ ಕಾರ್ಯಕ್ರಮಗಳ ಬಳಿಕ ರಾಜದಂಪತಿ ಬುಧವಾರ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಫಿಲಿಪೈನ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು ರಾಜದಂಪತಿಯನ್ನು ಭೇಟಿ ಮಾಡುವ ಸಲುವಾಗಿ ಸಕಾಲಕ್ಕೆ ಭಾರತಕ್ಕೆ ಮರಳುವುದಾಗಿ ದೃಢಪಡಿಸಿದ ನಂತರ, ಈ ಭೇಟಿಯನ್ನು ರಾಜಮನೆತನದ ವೇಳಾಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಯಿತು.

ಕಿಂಗ್ ಚಾರ್ಲ್ಸ್ III ಅವರ ಹಿರಿಯ ಪುತ್ರರಾದ ವಿಲಿಯಂ, ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾಗುವ ಮೊದಲು ಅಂದರೆ 2016ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಿನ್ಸ್ ವಿಲಿಯಂ ಅವರ ಪಾತ್ರ ವಿಸ್ತರಿಸುತ್ತಿದ್ದು, ಯುಕೆ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಉನ್ನತ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲು ಈ ಸಭೆಯು ಉತ್ತಮ ಅವಕಾಶವನ್ನು ಒದಗಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಾನು ಪಾಕಿಸ್ತಾನಿ, ಆದ್ರೆ ಹೃದಯ ದೆಹಲಿಯಲ್ಲಿದೆ' ವಾರಾಣಸಿಯಲ್ಲಿ ಗಂಗಾ ಆರತಿ, ಋಷಿಕೇಶದಲ್ಲಿ ಯೋಗದ ಕನಸು ಕಾಣುತ್ತಿರುವ ಮುಸ್ಕಾನ್
ಬೈಕ್ ಟ್ಯಾಕ್ಸಿ ಪ್ರಯಾಣಿಸುವಾಗ ಚಾಲಕ ನೀಡುವ ಹೈಲ್ಮೆಟ್ ಹಾಗೇ ಧರಿಸುತ್ತೀರಾ? ವೈದ್ಯರ ಎಚ್ಚರಿಕೆ