ಲಾಕ್‌ಡೌನ್‌, ಇಂದು ತೀರ್ಮಾನ: ಎಲ್ಲಾ ಸಿಎಂಗಳ ಜತೆ ಮೋದಿ ಸಂವಾದ!

By Kannadaprabha NewsFirst Published Apr 11, 2020, 8:01 AM IST
Highlights

ಲಾಕ್‌ಡೌನ್‌: ಇಂದು ತೀರ್ಮಾನ| ಇಂದು ಬೆಳಗ್ಗೆ 11ಕ್ಕೆ ಬಿಎ​ಸ್‌ವೈ ಸೇರಿ ಎಲ್ಲಾ ಸಿಎಂಗಳ ಜತೆ ಮೋದಿ ಸಂವಾದ| ರಾಜ್ಯ​ಗ​ಳಿಂದ ಪಿಎಂರಿಂದ ಮಾಹಿತಿ ಸಂಗ್ರ​ಹ, ಬಳಿಕ ಲಾಕ್‌​ಡೌನ್‌ ಬಗ್ಗೆ ನಿರ್ಧಾರ

ನವದೆಹಲಿ(ಏ.11): ಭಾರತದ ವಿವಿಧೆಡೆ ಹಾಗೂ ಕರ್ನಾಟಕದಲ್ಲಿ ರಾಜ್ಯದಲ್ಲಿ ಏಪ್ರಿಲ್‌ 14ರ ಬಳಿಕವೂ ಲಾಕ್‌ಡೌನ್‌ ಮುಂದುವರೆಯುತ್ತದೆಯೇ ಅಥವಾ ಸಡಿಲಗೊಳ್ಳುತ್ತದೆಯೇ, ಲಾಕ್‌ಡೌನ್‌ ಮತ್ತಷ್ಟುಬಿಗಿಯಾಗಿ ‘ಸೀಲ್‌ಡೌನ್‌’ ಸ್ವರೂಪ ಪಡೆಯಲಿದೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುವ ನಿರ್ಣಾಯಕ ದಿನ ಶನಿವಾರ. ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದು, ರಾಜ್ಯದ ಪರಿಪೂರ್ಣ ಚಿತ್ರಣ ನೀಡಲಿದ್ದಾರೆ. ಈ ಅವಧಿಯಲ್ಲಿ ನಡೆಯುವ ಚರ್ಚೆಯನ್ನು ಆಧರಿಸಿ ರಾಜ್ಯದಲ್ಲಿ ಲಾಕ್‌ಡೌನ್‌ನ ಭವಿಷ್ಯ ಏನು ಎಂಬುದು ನಿರ್ಧಾರವಾಗಲಿದೆ.

ದೇಶದಲ್ಲಿ ಲಾಕ್‌ಡೌನ್‌ ಹೊರತಾಗಿಯೂ ಸಾವಿನ ಸಂಖ್ಯೆ 200 ದಾಟಿದೆ ಹಾಗೂ ಸೋಂಕಿತ 7 ಸಾವಿರ ದಾಟಿದೆ. ಇನ್ನು ಕರ್ನಾಟಕದಲ್ಲಿ ಲಾಕ್‌ಡೌನ್‌ ಅನುಷ್ಠಾನದ ಹೊರತಾಗಿಯೂ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ದ್ವಿಶತಕದ ಗಡಿ ದಾಟಿದೆ. ಹೀಗಾಗಿ ಲಾಕ್‌ಡೌನ್‌ ಅವಧಿ ಮುಂದುವರೆಸುವಂತೆ ರಾಜ್ಯದ ಸಚಿವ ಸಂಪುಟ ಸಚಿವರು ಸೇರಿದಂತೆ ಬಹುತೇಕ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸೆಪ್ಟೆಂಬ​ರ್‌ಗೆ ಕೊರೋನಾ ತುತ್ತ​ತು​ದಿ​: ಪಂಜಾಬ್‌ ಸಿಎಂ ಸ್ಫೋಟಕ ಮಾಹಿ​ತಿ

ಇತ್ತೀಚೆಗೆ ಮೋದಿ ಅವರು ಸರ್ವಪಕ್ಷ ಸಭೆ ಕರೆದಾಗಲೂ ಶೇ.80ರಷ್ಟುಪಕ್ಷಗಳು ಲಾಕ್‌ಡೌನ್‌ ಮುಂದುವರಿಕೆಗೆ ಆಗ್ರಹಿಸಿದ್ದವು. ಈಗಾಗಲೇ ಏಪ್ರಿಲ್‌ 30ರವರೆಗೆ ಒಡಿಶಾ ಹಾಗೂ ಪಂಜಾಬ್‌ ಲಾಕ್‌ಡೌನ್‌ ವಿಸ್ತರಣೆ ಘೋಷಿಸಿವೆ. ಮೋದಿ ಕೂಡ ಸರ್ವಪಕ್ಷ ಸಭೆಯಲ್ಲಿ, ‘ಏಕಹಂತದಲ್ಲಿ ಲಾಕ್‌ಡೌನ್‌ ಸಡಿಲಿಕೆ ಸಾಧ್ಯವಿಲ್ಲ’ ಎನ್ನುವ ಮೂಲಕ ಲಾಕ್‌ಡೌನ್‌ ಮುಂದುವರಿಕೆ ಸುಳುಹು ನೀಡಿದ್ದರು.

ವಿಸ್ತರಣೆಗೆ ರಾಜ್ಯದ ದೃಢ ನಿಲುವು:

ಮೂಲಗಳ ರಾಜ್ಯ ಸರ್ಕಾರವು ಲಾಕ್‌ಡೌನ್‌ ವಿಸ್ತರಣೆಗೆ ಈಗಾಗಲೇ ದೃಢ ನಿಲುವು ತೆಗೆದುಕೊಂಡಿದೆ. ಇದೇ ವಿಚಾರವನ್ನು ಮುಖ್ಯಮಂತ್ರಿಯವರು ಶನಿವಾರ ಪ್ರಧಾನಿಯವರಿಗೆ ತಿಳಿಸಲಿದ್ದಾರೆ

ಲಾಕ್‌ಡೌನ್‌ ವಿಸ್ತರಣೆಯಿಂದ ದೇಶಕ್ಕೆ ಆಗುತ್ತಿರುವ ಆರ್ಥಿಕ ನಷ್ಟಹೇಗೂ ಆಗುತ್ತಿದೆ. ಆದರೆ, ಜನರು ನಿರ್ಭೀತಿಯಿಂದ ಓಡಾಡುತ್ತಿರುವುದರಿಂದ ಸೋಂಕು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಮತ್ತಷ್ಟುಕಟ್ಟುನಿಟ್ಟಿನ ಲಾಕ್‌ಡೌನ್‌ ಅಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರತಿಪಾದಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಭೆ:

ಪ್ರಧಾನಿ ಜತೆಗಿನ ಸಂವಾದಕ್ಕೂ ಮುನ್ನ ಶನಿವಾರ ಬೆಳಗ್ಗೆ 10.30ಕ್ಕೆ ರಾಜ್ಯ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಭಾಗವಹಿಸಲಿದ್ದಾರೆ.

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ಇಂದು ಸಂಜೆ ಅಥವಾ ನಾಳೆ ಮೋದಿ ಟೀವಿ ಭಾಷಣ| ಲಾಕ್‌​ಡೌನ್‌ ನಿರ್ಧಾರ ಘೋಷಣೆ ನಿರೀಕ್ಷೆ

ನವದೆಹಲಿ: ಕೊರೋನಾ ವೈರಸ್‌ ತಡೆಗೆ ಹಾಕಲಾಗಿದ್ದ ‘ಭಾರತ ಲಾಕ್‌ಡೌನ್‌’ ಏಪ್ರಿಲ್‌ 14ಕ್ಕೆ ಮುಗಿಯುತ್ತಿದೆ. ಈ ಕಾರಣ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸುವ ವಿಡಿಯೋ ಸಂವಾದದಲ್ಲಿ ಲಾಕ್‌ಡೌನ್‌ನ ಮುಂದಿನ ಹಣೆಬರಹ ನಿರ್ಧಾರವಾಗುವ ಸಾಧ್ಯತೆ ಇದೆ. ಬಳಿಕ ಶನಿವಾರ ಸಂಜೆ ಅಥವಾ ಭಾನುವಾರ ಸಂಜೆ ಅವರು ದೇಶವನ್ನು ಉದ್ದೇಶಿಸಿ ಟೀವಿಯಲ್ಲಿ ಮಾತನಾಡಿ, ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

click me!