ದೇವಾಲಯಗಳಲ್ಲಿ ಅರ್ಚಕರು ಅತ್ಯಾ*ಚಾರ ಮಾಡುತ್ತಾರೆ, ಬ್ರಾಹ್ಮಣ ಮಹಿಳೆಯರು ಸುರಕ್ಷಿತವಾಗಿಲ್ಲ - ನೇಹಾ ಬೋರಾ ವೀಡಿಯೊ ಹಂಚಿಕೊಂಡ ಬಿಜೆಪಿ

Published : Nov 03, 2026, 07:10 PM IST
AISA Chief Neha Bora

ಸಾರಾಂಶ

ಎಐಎಸ್‌ಎ ಮುಖ್ಯಸ್ಥೆ ನೇಹಾ ಬೋರಾ ಹೇಳಿಕೆ ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅರ್ಚಕರು ಹಾಗೂ ಬ್ರಾಹ್ಮಣ ಮಹಿಳೆಯರ ಬಗ್ಗೆ ನೇಹಾ ಹೇಳಿರುವ ಹೇಳಿಕೆ ಈಗ ಚರ್ಚೆಯಾಗ್ತಿದೆ.

ಸಿಜೆಪಿ ಪ್ರತಿಭಟನೆ ಹಾಗೂ ರಾಹುಲ್ ಗಾಂಧಿ ಅವರ ಮಾರ್ಚ್ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಎಐಎಸ್ಎ (AISA) ಮುಖ್ಯಸ್ಥೆ ನೇಹಾ ಬೋರಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆಯೊಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೆಹಾ ಬೋರಾ ಅವರು ದೇವಾಲಯದ ಅರ್ಚಕರು ಹಾಗೂ ಬ್ರಾಹ್ಮಣ ಮಹಿಳೆಯರ ಕುರಿತು ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ಹಿಂದೂ ಧರ್ಮ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಪ್ರದೀಪ್ ಭಂಡಾರಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ಭಾರತೀಯ ಜನತಾ ಪಕ್ಷದ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನೇಹಾ ಬೋರಾ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೇಹಾ ಬೋರಾ ಅವರು, ದೇವಾಲಯಗಳಲ್ಲಿ ಅರ್ಚಕರು ಅತ್ಯಾ*ಚಾರ ಮಾಡುತ್ತಾರೆ ಎಂಬರ್ಥದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಹೇಳಿಕೆಯನ್ನು ಖಂಡಿಸಿರುವ ಪ್ರದೀಪ್ ಭಂಡಾರಿ, ನೆಹಾ ಬೋರಾ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ತಮ್ಮ ಪೋಸ್ಟ್ನಲ್ಲಿ, ರಾಹುಲ್ ಗಾಂಧಿ ಅವರ ಪೋಸ್ಟರ್ ಗರ್ಲ್ ಆಗಿರುವ ನೇಹಾ ಬೋರಾ, ಹಿಂದೂಗಳ ವಿರುದ್ಧ ದ್ವೇಷವನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಹಿಂದಿನ ಹೇಳಿಕೆಯೊಂದನ್ನೂ ಪ್ರಸ್ತಾಪಿಸಿದ್ದಾರೆ. ರಾಹುಲ್ ಗಾಂಧಿ ದೇವಾಲಯಗಳಲ್ಲಿ ಹುಡುಗಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ ಎಂದು ಹೇಳಿದ್ದರು ಎಂದು ಭಂಡಾರಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಹಿಂದೂಗಳನ್ನು ದ್ವೇಷಿಸುತ್ತದೆ ಮತ್ತು ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ. ಇಂತಹ ರಾಜಕೀಯ ಧೋರಣೆ ದೇಶದ ಏಕತೆಗೆ ಅಪಾಯಕಾರಿಯಾಗಿದೆ ಎಂದೂ ಟೀಕಿಸಿದ್ದಾರೆ.

ನೇಹಾ ಬೋರಾ ಹೇಳಿಕೆಗೆ ಗೌರವ್ ಭಾಟಿಯಾ ಆಕ್ಷೇಪ

ಬಿಜೆಪಿ ನಾಯಕ ಗೌರವ್ ಭಾಟಿಯಾ ಕೂಡ ನೇಹಾ ಬೋರಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ನಡೆದ ಅಧಿಕಾರ ಬದಲಾವಣೆಯಿಂದ ನೇಹಾ ಬೋರಾ ಪ್ರೇರಣೆ ಪಡೆದಿದ್ದರು ಎಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದು, ಹಿಂದೂಗಳ ಹತ್ಯೆಯೂ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಇಂದು ನೇಹಾ ಬೋರಾ ತಮ್ಮ ಹೇಳಿಕೆಯ ಮೂಲಕ ಎಲ್ಲ ಅರ್ಚಕರನ್ನು ಅವಮಾನಿಸುತ್ತಿದ್ದಾರೆ ಎಂದು ಭಾಟಿಯಾ ಕಿಡಿ ಕಾರಿದ್ದಾರೆ. ಹಿಂದೂಗಳು ಇತಿಹಾಸದುದ್ದಕ್ಕೂ ಸಹಿಷ್ಣುಗಳಾಗಿದ್ದು, ಸಮಾಜ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅರ್ಚಕರು ಕೂಡ ಸಮಾಜ ಸೇವೆ ಮಾಡುತ್ತಾರೆ ಎಂದಿದ್ದಾರೆ.

ನೇಹಾ ಬೋರಾ ಅವರ ಹೇಳಿಕೆಯಲ್ಲಿ ಸತ್ಯಾಂಶವಿದ್ದರೆ, ಮದರಸಾಗಳು ಮತ್ತು ಮೌಲ್ವಿಗಳ ಬಗ್ಗೆಯೂ ಇದೇ ರೀತಿಯ ಹೇಳಿಕೆ ನೀಡುತ್ತಾರೆಯೇ ಎಂದು ಗೌರವ್ ಭಾಟಿಯಾ ಪ್ರಶ್ನಿಸಿದ್ದಾರೆ. ಆಯ್ದ ವಿಚಾರಗಳನ್ನಷ್ಟೇ ವಿರೋಧಿಸುವುದು ದುರುದ್ದೇಶದಿಂದ ಕೂಡಿದೆ. ಇಂತಹ ನಡೆ ಅಪಾಯಕಾರಿ ಎಂದು ಟೀಕಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದರ ಆಕ್ಷೇಪ

ಈ ವಿವಾದಕ್ಕೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಕೂಡ ಪ್ರತಿಕ್ರಿಯಿಸಿದ್ದಾರೆ. ನೇಹಾ ಬೋರಾ ಅವರ ಹೇಳಿಕೆ ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಧರ್ಮದಲ್ಲಿಯೂ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಹಾಗಾಗಿ ಇಡೀ ಧರ್ಮ ಅಥವಾ ಸಮುದಾಯದ ಬಗ್ಗೆ ಸಾಮಾನ್ಯೀಕರಿಸಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇಂತಹ ವಿವಾದಗಳು ಸೃಷ್ಟಿಯಾಗಬೇಕೆಂಬುದೇ ಬಿಜೆಪಿಯ ಉದ್ದೇಶ. ಹಾಗಿರುವಾಗ ನಾವು ಅವರ ಬಲೆಗೆ ಏಕೆ ಬೀಳಬೇಕು ಎಂದು ರಾಜೀವ್ ರೈ ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.ಯಾವುದೇ ಜಾತಿ, ಸಮುದಾಯ, ಧರ್ಮ ಅಥವಾ ಪ್ರದೇಶದ ಜನರ ಬಗ್ಗೆ ಇಡೀ ಸಮುದಾಯವನ್ನೇ ಗುರಿಯಾಗಿಸಿಕೊಂಡು ಮಾತನಾಡಬಾರದು. ಇಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಢೀರ್ 1500% ಜಂಪ್! ಭಾರತಕ್ಕೆ ಹರಿದು ಬರುತ್ತಿದೆಯಾ 'ಕಳ್ಳಚಿನ್ನ'? ಬಂಗಾರದ ಕಳ್ಳಸಾಗಣೆ ದಿಢೀರ್ ಹೆಚ್ಚಾಗಿದ್ದು ಏಕೆ?
Bullet Train: ದೇಶದಲ್ಲೇ ತಯಾರಾಗ್ತಿರೋ ಬುಲೆಟ್ ಟ್ರೈನ್‌ ಖದರ್ ನೀವೇ ನೋಡಿ; 280KM ವೇಗ, ಗಟ್ಟಿತನದ ಪರೀಕ್ಷೆಯೂ ಪಾಸ್