ಕೂತಲ್ಲೇ ಕೋಟಿ ಕೋಟಿ ಉಳಿಸಿದ ಮೋದಿ ಮಾತು; ಪ್ರಧಾನಿ ಮನವಿ ಕೇಳಿದವರಿಗೆ ಬಂಪರ್ ಲಾಭ!

Published : Nov 23, 2026, 05:31 AM IST
Modi

ಸಾರಾಂಶ

ಪ್ರಧಾನಿ ಮೋದಿಯವರ ಚಿನ್ನ ಖರೀದಿ ಮುಂದೂಡುವ ಕರೆಯಿಂದ ವ್ಯಾಪಾರಿಗಳಿಗೆ ಪ್ರತಿ ಕೆಜಿಗೆ ₹65 ಲಕ್ಷ ನಷ್ಟ ತಪ್ಪಿದೆ. ಇದರಿಂದ ಲಕ್ಷಾಂತರ ವ್ಯಾಪಾರಿಗಳು ಸಾಲದ ಕೂಪಕ್ಕೆ ಬೀಳುವುದು ಉಳಿದಿದ್ದು, ಸಿಟಿಐ ಮೋದಿಗೆ ಧನ್ಯವಾದ ತಿಳಿಸಿದೆ.

ನವದೆಹಲಿ: ‘ನನ್ನ ಮಾತು ಕೇಳಿ ಜನಸಾಮಾನ್ಯರು ಚಿನ್ನದ ಖರೀದಿ ಮುಂದೂಡಿದ್ದರಿಂದ ಜನರ ಹಣ ಉಳಿಯಿತು’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಇದೀಗ ವ್ಯಾಪಾರಿಗಳ ಒಕ್ಕೂಟದಿಂದಲೂ ಬೆಂಬಲ ಸಿಕ್ಕಿದೆ. ಅಗತ್ಯವಿಲ್ಲದಿದ್ದರೆ ಕೆಲಕಾಲ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡುವ ಮೂಲಕ ಪ್ರಧಾನಿ ಮೋದಿ ಅವರು ಜ್ಯುವೆಲ್ಲರ್ಸ್‌ಗಳು ಹಾಗೂ ಹೂಡಿಕೆದಾರರಿಗೆ ಉಂಟಾಗಬಹುದಾಗಿದ್ದ ಭಾರೀ ಪ್ರಮಾಣದ ನಷ್ಟ ತಪ್ಪಿಸಿದ್ದಾರೆ. ಮೋದಿ ಅವರ ಕರೆ ಬಳಿಕ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಚೇಂಬರ್‌ ಆಫ್‌ ಟ್ರೇಡ್‌ ಆ್ಯಂಡ್‌ ಇಂಡಸ್ಟ್ರಿ (ಸಿಟಿಐ) ಹೇಳಿದೆ.

ಮುಖ್ಯಸ್ಥ ಬ್ರಿಜೇಶ್‌ ಗೋಯಲ್‌ ಪತ್ರ

ಚಿನ್ನದ ವಿಚಾರದಲ್ಲಿ ಪ್ರಧಾನಿ ಅವರ ಸಕಾಲಿಕ ಮಧ್ಯಪ್ರವೇಶದಿಂದ ಲಕ್ಷಾಂತರ ವ್ಯಾಪಾರಿಗಳು ಸಾಲಕ್ಕೆ ತುತ್ತಾಗುವುದು ತಪ್ಪಿದೆ ಎಂದು ಹೇಳಿ ಚೇಂಬರ್‌ ಆಫ್‌ ಟ್ರೇಡ್‌ ಆ್ಯಂಡ್‌ ಇಂಡಸ್ಟ್ರೀ(ಸಿಟಿಐ) ಪರವಾಗಿ ಮುಖ್ಯಸ್ಥ ಬ್ರಿಜೇಶ್‌ ಗೋಯಲ್‌ ಅ‍ವರು ಮೋದಿಗೆ ಪತ್ರ ಬರೆದು ಧನ್ಯವಾದವನ್ನೂ ಅರ್ಪಿಸಿದ್ದಾರೆ.

ಮೋದಿ ಅವರು ಚಿನ್ನ ಖರೀದಿ ಮುಂದೂಡಲು ಮನವಿ ಮಾಡಿದಾಗ ಚಿನ್ನದ ಬೆಲೆ 1 ಕೆ.ಜಿ.ಗೆ 1.90 ಕೋಟಿ ರು. ಇತ್ತು. ಅದಾದ ಬಳಿಕ ಇದೀಗ ಆ ದರ ಸರಾಸರಿ 1.25 ಕೋಟಿ ರು.ಗೆ ಇಳಿದಿದೆ. ಅಂದರೆ ಕೆ.ಜಿ. ಚಿನ್ನದ ದರ ಪ್ರತಿ ಕೆ.ಜಿ.ಗೆ 65 ಲಕ್ಷ ರು.ನಷ್ಟು ಇಳಿದಿದೆ ಎಂದು ಬ್ರಿಜೇಶ್‌ ಹೇಳಿಕೊಂಡಿದ್ದಾರೆ.

ಒಂದು ವೇಳೆ ವ್ಯಾಪಾರಿಗಳು ಮೋದಿ ಅವರ ಮನವಿ ತಿರಸ್ಕರಿಸಿ ಅಂದು ಚಿನ್ನ ಖರೀದಿಸಿಟ್ಟು ದಾಸ್ತಾನು ಮಾಡಿಕೊಂಡಿಟ್ಟುಕೊಂಡಿದ್ದರೆ ಪ್ರತಿ ಕೆ.ಜಿ.ಗೆ 65 ಲಕ್ಷ ರು. ನಷ್ಟ ಅನುಭವಿಸಬೇಕಾಗುತ್ತಿತ್ತು. ಲಕ್ಷಾಂತರ ವ್ಯಾಪಾರಿಗಳು ಸಾಲದ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗಿತ್ತು. ಆದರೆ, ಮೋದಿ ಅವರ ಒಂದು ಕರೆ ಜ್ಯುವೆಲ್ಲರ್‌ಗಳು, ಸಣ್ಣ ವ್ಯಾಪಾರಿಗಳನ್ನು ಭಾರೀ ಸಾಲದ ಕೂಪದಿಂದ ಪಾರು ಮಾಡಿದೆ ಎಂದಿದ್ದಾರೆ.

ಕೃತಜ್ಞತಾ ಸಂದೇಶಗಳ ಮಹಾಪೂರ

ಸಿಟಿಐನ ಟ್ರೇಡರ್‌ಗಳ ಗುಂಪಿನಲ್ಲಿ ಮೋದಿ ಅವರಿಗೆ ಕೃತಜ್ಞತಾ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಮೋದಿ ನಮ್ಮನ್ನು ಭಾರೀ ನಷ್ಟದಿಂದ ಪಾರು ಮಾಡಿದ್ದಾರೆಂದು ಹೊಗಳಿಕೆ ಬರುತ್ತಿದೆ ಎಂದಿದ್ದಾರೆ ಬ್ರಿಜೇಶ್‌. ಮೋದಿ ಮನವಿಯನ್ನು ಆರಂಭದಲ್ಲಿ ವಿರೋಧಿಸಿದವರೂ ಈಗ ಅದರಿಂದಾಗಿರುವ ಅನುಕೂಲ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದೇ ವೇಳೆ ಚಿನ್ನ, ಬೆಳ್ಳಿಯಂಥ ಬೆಲೆಗಳ ಕುರಿತು ನಿಯಮಿತವಾಗಿ ಮಾರ್ಗದರ್ಶನ ನೀಡುತ್ತಿರಿ ಎಂದು ಪ್ರಧಾನಿಗೆ ಮನವಿ ಮಾಡಿರುವ ಅವರು, ಇದು ಅನಗತ್ಯ ದಾಸ್ತಾನಿನಿಂದ ರಕ್ಷಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಸಿಐಟಿ ಮತ್ತು ಸಂಪೂರ್ಣ ಟ್ರೇಡಿಂಗ್‌ ಸಮುದಾಯದ ಪರ ನಾವು ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ಬ್ರಿಜೇಶ್‌ ತಿಳಿಸಿದ್ದಾರೆ.

ಮದುವೆ ಸೀಸನ್‌ ವೇಳೆ ದರ ಇಳಿಕೆ

ಮದುವೆ ಸೀಸನ್‌ ಅವಧಿಯಲ್ಲೇ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ದೇಶದ ಸಾಮಾನ್ಯ ಕುಟುಂಬಗಳಿಗೆ ನಿರಾಳತೆ ಉಂಟು ಮಾಡಿದೆ. ಸುಮಾರು 52 ಲಕ್ಷ ಮದುವೆಗಳು ಈ ಸೀಸನ್‌ನಲ್ಲಿ ನಡೆಯುತ್ತವೆ. ಹಳದಿ ಲೋಹದ ಬೆಲೆ ಇಳಿಕೆಯಾಗಿರುವುದು ಚಿನ್ನ ಖರೀದಿಗೆ ಯೋಚಿಸುತ್ತಿದ್ದ ಜನಸಾಮಾನ್ಯರಿಗೆ ದೊಡ್ಡ ನೆಮ್ಮದಿ ನೀಡಿದೆ ಎಂದು ಬ್ರಿಜೇಶ್‌ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೂತಲ್ಲೇ ಕೋಟಿ ಕೋಟಿ ಉಳಿಸಿದ ಮೋದಿ ಮಾತು; ಪ್ರಧಾನಿ ಮನವಿ ಕೇಳಿದವರಿಗೆ ಬಂಪರ್ ಲಾಭ!
ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ? ಕಂಪನಿ ವಿರುದ್ಧ ಕಾನೂನು ಸಮರ ಸಾರಿದ FSSAI