ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ? ಕಂಪನಿ ವಿರುದ್ಧ ಕಾನೂನು ಸಮರ ಸಾರಿದ FSSAI

Published : Nov 22, 2026, 11:27 PM IST
bisleri bottle

ಸಾರಾಂಶ

ಬಿಸ್ಲೆರಿ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಕಾನೂನು ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಗೆ, ನಿಯಮ ಉಲ್ಲಂಘಿಸಿದ ಚಾಕೊಲೇಟ್ ಕುಕೀಸ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಲಾಗಿದೆ.

ನವದೆಹಲಿ: ಜನಪ್ರಿಯ 'ಬಿಸ್ಲೆರಿ ಇಂಟರ್‌ನ್ಯಾಶನಲ್' (Bisleri International) ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಮುಂದಾಗಿದೆ. ಬಿಸ್ಲೆರಿ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಅದು ಕುಡಿಯಲು ಸುರಕ್ಷಿತವಾಗಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಪರೀಕ್ಷೆಯಲ್ಲಿ ಪತ್ತೆಯಾಗಿದ್ದೇನು?

ಬಿಸ್ಲೆರಿ ಘಟಕದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ ಪರೀಕ್ಷಿಸಿದಾಗ ಅದರಲ್ಲಿ 'ಬ್ರೋಮೇಟ್'ಅಂಶವು ನಿಗದಿತ ಮಿತಿಗಿಂತ ಹೆಚ್ಚಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನೀರು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಮೇಲ್ಮನವಿ ಸಲ್ಲಿಸಿದ ಕಾರಣ ನೀರಿನ ಮಾದರಿಯನ್ನು ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಎರಡನೇ ಬಾರಿಯ ಪರೀಕ್ಷೆಯಲ್ಲೂ ನೀರು ಸುರಕ್ಷಿತವಾಗಿಲ್ಲ ಎಂದು ವರದಿ ಬಂದಿದೆ. ಅದರಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿವೆ.

ಬ್ರೋಮೇಟ್ ಮತ್ತು PAHs ಎರಡೂ ಕ್ಯಾನ್ಸರ್ ಕಾರಕ ರಾಸಾಯನಿಕಗಳಾಗಿವೆ. ಹೀಗಾಗಿ 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಬಿಸ್ಲೆರಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು FSL ಅನುಮತಿ ನೀಡಿದೆ.

ಚಾಕೊಲೇಟ್ ಕುಕೀಸ್ ವಾಪಸ್ ಪಡೆಯಲು ಆದೇಶ

ಇದೇ ವೇಳೆ.. ಆಶಾ ಕನ್ಫೆಕ್ಷನರಿ ಸಂಸ್ಥೆಯ ಪ್ಯಾಕ್ ಮಾಡಲಾದ ಚಾಕೊಲೇಟ್-ಫಿಲ್ಡ್ ಕುಕೀಸ್‌ಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಎಫ್‌ಎಸ್‌ಎಸ್‌ಎಐ ಆದೇಶಿಸಿದೆ.

  • ಪ್ಯಾಕೆಟ್ ಲೇಬಲ್‌ನಲ್ಲಿ ಉಲ್ಲೇಖಿಸದಿದ್ದರೂ, ಕುಕೀಸ್‌ನಲ್ಲಿ 'ಕಾರ್ಮೋಸಿನ್' (Carmosine) ಎಂಬ ಕೃತಕ ಬಣ್ಣದ ಅಂಶ ಪತ್ತೆ
  • ಟಾರ್ಟ್ರಾಜಿನ್ (Tartrazine) ಬಣ್ಣವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಲಾಗಿದೆ
  • ಈ ಆಹಾರ ಪದಾರ್ಥದಲ್ಲಿ ಬಳಸಲು ಅನುಮತಿಯಿಲ್ಲದ 'ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್' ಬಣ್ಣವೂ ಇದರಲ್ಲಿ ಕಂಡುಬಂದಿದೆ
  • ಈ ಹಿನ್ನೆಲೆಯಲ್ಲಿ ಸದರಿ ಕುಕೀಸ್‌ಗಳನ್ನು ಕಳಪೆ ಗುಣಮಟ್ಟದ, ತಪ್ಪು ಮಾಹಿತಿಯುಳ್ಳ ಮತ್ತು ಅಸುರಕ್ಷಿತ ಉತ್ಪನ್ನ ಎಂದು ಘೋಷಿಸಲಾಗಿದೆ.
  • ಕಲುಷಿತಗೊಂಡಿರುವ ಇಡೀ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ತಕ್ಷಣವೇ ಹಿಂಪಡೆಯುವಂತೆ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಇತರ ಹಲವು ಸಂಸ್ಥೆಗಳ ಪರವಾನಗಿಯನ್ನೂ ಪ್ರಾಧಿಕಾರ ರದ್ದುಗೊಳಿಸಿದೆ.

ಈ ಹಿನ್ನೆಲೆಯಲ್ಲಿ FSSAI ಈ ಕುಕೀಸ್‌ಗಳನ್ನು Misbranded, Sub-standard ಮತ್ತು 'ಅಸುರಕ್ಷಿತ' ಆಹಾರ ಎಂದು ಘೋಷಿಸಿದೆ. ಅಲ್ಲದೆ, ಸಮಸ್ಯೆ ಕಂಡುಬಂದಿರುವ ಬ್ಯಾಚ್‌ನ ಎಲ್ಲಾ ಉತ್ಪನ್ನಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ, ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ FSSAI ತನ್ನ ತಪಾಸಣೆ ಮತ್ತು ಕಠಿಣ ಕ್ರಮಗಳನ್ನು ತೀವ್ರಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಊರಿಗೆ ಹೋಗಲು ತಪ್ಪಿದ ಬಸ್​ ಟಿಕೆಟ್‌ನಿಂದ ಹುಟ್ಟಿತು 800 ಕೋಟಿಯ ಉದ್ಯಮ: 25 ವರ್ಷ ಎಂಜಿನಿಯರ್​ನ RedBus ಸ್ಟೋರಿ
9/11ರ ದಾಳಿಯಲ್ಲಿ ಕಸಬ್​ ವಿರುದ್ಧ ಸಾಕ್ಷಿ ನುಡಿದ 9ರ ಬಾಲೆ ಈಕೆ! ಉಗ್ರನನ್ನು ಜಂಟಲ್​ಮನ್​ ಎಂದಿದ್ದ ಶಾರುಖ್​ ಸನ್ಮಾನಕ್ಕೆ ಅಸಮಾಧಾನ