* ಹಣದ ಆಮಿಷ ತೋರುವ ಮೂಲಕ ಮತ್ತು ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಮೋಸ
* ರೋಗಗಳನ್ನು ಗುಣಪಡಿಸುವುದಾಗಿ ಆಸೆ ತೋರಿಸುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ
* ಧರ್ಮ ಪ್ರಚಾರಕ ದಂಪತಿ ಉತ್ತರ ಗೋವಾದಲ್ಲಿ ಅರೆಸ್ಟ್
ಪಣಜಿ(ಮೇ.28): ಹಣದ ಆಮಿಷ ತೋರುವ ಮೂಲಕ ಮತ್ತು ರೋಗಗಳನ್ನು ಗುಣಪಡಿಸುವುದಾಗಿ ಆಸೆ ತೋರಿಸುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಪಡಿಸುತ್ತಿದ್ದ ಧರ್ಮ ಪ್ರಚಾರಕ ದಂಪತಿಯನ್ನು ಉತ್ತರ ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಧರ್ಮ ಪ್ರಚಾರಕರಾದ ಡಾಮಿನಿಕ್ ಡಿ’ಸೋಜ ಮತ್ತು ಅವರ ಪತ್ನಿ ಜೋನ್ ಅವರನ್ನು ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ಇವರ ವಿರುದ್ಧ ಜನ ಮತಾಂತರಕ್ಕೆ ಬಲವಂತ ಪಡಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಇಬ್ಬರ ಮೇಲೂ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಲು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರ್ವಕ ಕೃತ್ಯಗಳಲ್ಲಿ ತೊಡಗಿದ್ದ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತಾಂತರವಾಗುವಂತೆ ಯುವತಿಗೆ ಒತ್ತಾಯ: ದೂರು ದಾಖಲು
ಇಲ್ಲಿನ ತಲ್ಲೂರು ಗ್ರಾಮದ ಉಪ್ಪಿನಕುದ್ರು ಎಂಬಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಪ್ರಕರಣದ ಹಿಂದೆ ಲವ್ ಜಿಹಾದ್‌ನ ಸಂಶಯ ವ್ಯಕ್ತವಾಗಿದೆ.
ಶಿಲ್ಪಾ ದೇವಾಡಿಗ (25) ಮೇ 23ರಂದು ಮನೆಯಲ್ಲಿ ಇಲಿ ಪಾಷಾಣ ಸೇವಿಸಿ, ಅಸ್ವಸ್ಥಗೊಂಡಿದ್ದಳು. ಮನೆಯವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, 24ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಈ ಸಂದರ್ಭದಲ್ಲಿ ಆಕೆ ಅಜೀಜ್ ಎಂಬಾತ ತನ್ನನ್ನು ಪ್ರೀತಿಸಿ ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದರಿಂದ ವಿಷ ಸೇವಿಸಿದ್ದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಸಹೋದರ ರಾಘವೇಂದ್ರ, ಅಜೀಜ್ ಎಂಬಾತನ ಮೇಲೆ ದೂರು ದಾಖಲಿಸಿದ್ದಾರೆ.
‘ನನ್ನ ತಂಗಿಯನ್ನು ಅಜೀಜ್ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದುರುಪಯೋಗಪಡಿಸಿಕೊಂಡು, ಫೋಟೋ, ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ನಂತರ ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಒತ್ತಾಯಿಸಿದ್ದಾನೆ. ಅಲ್ಲದೆ ಅಜೀಜ್ ಪತ್ನಿ ಸಲ್ಮಾ ಎಂಬಾಕೆ ತನ್ನ ತಂಗಿಗೆ ಕಿರುಕುಳ ನೀಡಿದ್ದಾಳೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಶಿಲ್ಪಾ ಹೇಳಿಕೆ ಕೊಟ್ಟಿದ್ದಾಳೆ’ ಎಂದು ರಾಘವೇಂದ್ರ ಹೇಳಿದ್ದಾರೆ.
ಬಟ್ಟೆಅಂಗಡಿಗೆ ಕೆಲಸಕ್ಕೆ ಹೋಗುತಿದ್ದ ಶಿಲ್ಪಾಗೆ ನಾಲ್ಕು ವರ್ಷಗಳಿಂದ ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32) ಪರಿಚಯ ಆಗಿದ್ದು, ನಂತರ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ. ಶಿಲ್ಪಾ ಮದುವೆಯ ಪ್ರಸ್ತಾಪ ಮಾಡಿದಾಗ ಮತಾಂತರವಾಗುವಂತೆ ಹೇಳುತ್ತಿದ್ದ. ಅಜೀಜ್‌ಗೆ ಈಗಾಗಲೇ ಮದುವೆಯಾಗಿರುವ ವಿಷಯ ತಿಳಿದು ಶಿಲ್ಪಾ ತಾನು ಮೋಸ ಹೋಗಿರುವ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತಪಟ್ಟಮೇಲೆ ಅಜೀಜ್ ನಾಪತ್ತೆಯಾಗಿದ್ದು, ಕುಂದಾಪುರ ಪೊಲೀಸರು ಅಜೀಜ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಪ್ರಕರಣವಾಗಿದ್ದು, ತಕ್ಷಣ ಆರೋಪಿ ಅಜೀಜ್‌ನನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿವೆ.