ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎನ್ನಲಾದ ನಟ ಮಮ್ಮುಟ್ಟಿ ಹೆಸರಿನಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಇತ್ತೀಚೆಗೆ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕೊಚ್ಚಿ (ಮಾ.27): ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎನ್ನಲಾದ ನಟ ಮಮ್ಮುಟ್ಟಿ ಹೆಸರಿನಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಇತ್ತೀಚೆಗೆ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ‘ಮುಸ್ಲಿಂ ಸಮುದಾಯದ ಮುಮ್ಮಟ್ಟಿ ಹೆಸರಲ್ಲಿ ದೇಗುಲದಲ್ಲಿ ಪ್ರಾರ್ಥಿಸಿದ್ದು ಮುಸ್ಲಿಂ ನಿಯಮದ ಉಲ್ಲಂಘನೆ’ ಎಂದು ಕೆಲವರು ಅಪಸ್ವರ ಎತ್ತಿದ್ದಾರೆ.
ಮಾ.18ರಂದು ಮೋಹನ್‌ಲಾಲ್ ಮಮ್ಮುಟ್ಟಿ ಹೆಸರಿನಲ್ಲಿ ‘ಉಷಾ ಪೂಜೆ’ ಮಾಡಿಸಿದ್ದರು. ದೇಗುಲ ನೀಡಿದ ರಸೀದಿಯಲ್ಲಿ ಮಮ್ಮುಟ್ಟಿ ಹೆಸರು ‘ಮೊಹಮ್ಮದ್ ಕುಟ್ಟಿ’ ಎಂದು ನಮೂದಾಗಿದೆ ಎಂದು ಈಗ ಬಹಿರಂಗವಾಗಿದೆ. ಜತೆಗೆ ಜನ್ಮ ನಕ್ಷತ್ರ ವಿಶಾಖ ನಕ್ಷತ್ರ ಎಂದು ಉಲ್ಲೇಖಿಸ ಲಾಗಿದೆ. ಈ ರಸೀದಿ ಚೀಟಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಅಬ್ದುಲ್ಲಾ ಕಿಡಿ : ಪತ್ರಕರ್ತ ಅಬ್ದುಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿ, ‘ಮಮ್ಮುಟ್ಟಿ ಈ ವಿಚಾರದ ಬಗ್ಗೆ ತಿಳಿದಿದ್ದರೆ ಮುಸ್ಲಿಮರಲ್ಲಿ ಕ್ಷಮೆಯಾಚಿಸಬೇಕು. ಇದು ನಟನ ಕಡೆಯಿಂದ ಆದ ಗಂಭೀರ ಲೋಪ. ಮಮ್ಮುಟ್ಟಿಗೆ ತಿಳಿಯದೇ ಮೋಹನ್‌ಲಾಲ್ ಪೂಜೆ ಮಾಡಿಸಿದ್ದರೆ ಯಾವುದೇ ತಪ್ಪಿಲ್ಲ. ಮೋಹನ್‌ಲಾಲ್ ಅವರಿಗೆ ಅಯ್ಯಪ್ಪನ ಮೇಲಿನ ನಂಬಿಕೆಯಿಂದ ಅದನ್ನು ಮಾಡಿರಬಹುದು. ಆದರೆ ಮಮ್ಮುಟ್ಟಿಗೆ ತಿಳಿದು ಪೂಜೆ ಮಾಡಿದ್ದರೆ ದೊಡ್ಡ ಅಪರಾಧ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಯಾರೂ ಅಲ್ಲಾಹುನಿಗೆ ಹೊರತುಪಡಿಸಿ ಯಾರಿಗೂ ಏನನ್ನೂ ಅರ್ಪಿಸಬಾರದು, ಇದು ಇಸ್ಲಾಂ ನಿಯಮಗಳ ಉಲ್ಲಂಘನೆ’ ಎಂದಿದ್ದಾರೆ. ಈ ಪೋಸ್ಟ್‌ಗೆ ಮುಸ್ಲಿಂ ಸಮುದಾಯದಿಂದಲೇ ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಎಂಪುರಾನ್ ಚಿತ್ರದಲ್ಲಿ ಕ್ಯಾಮಿಯೋ ಯಾರು?: ಯೂಟ್ಯೂಬರ್ ಇರ್ಫಾನ್‌ಗೆ ಆ ಸೀಕ್ರೆಟ್ ಹೇಳಿದ ಮೋಹನ್ ಲಾಲ್
ಮಮ್ಮುಟ್ಟಿಗೆ ಕ್ಯಾನ್ಸರ್ ವದಂತಿ: ನಟ ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಮಮ್ಮುಟ್ಟಿ ಆಪ್ತರು ಸ್ಪಷ್ಟನೆ ನೀಡಿದ್ದು ಇದು ಸುಳ್ಳು ಸುದ್ದಿ ಎಂದಿದ್ದಾರೆ.