
ನವದೆಹಲಿ(ಫೆ.24): ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ಧ ತಾವು ಪ್ರತಿನಿಧಿಸುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಟ್ರ್ಯಾಕ್ಟರ್ ರಾರಯಲಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಪ್ರಹ್ಲಾದ್ ಜೋಶಿ ಅವರು, ‘ರಾಹುಲ್ ಗಾಂಧಿ ಅವರು ಟ್ರ್ಯಾಕ್ಟರ್ನಲ್ಲಿ ನಟನಾಗಲು ಯತ್ನಿಸುತ್ತಿದ್ದಾರೆ. ನೀವು(ರಾಹುಲ್ಗಾಂಧಿ) ಎಪಿಎಂಸಿ ಪರವಾಗಿದ್ದರೆ, ಕೇರಳದಲ್ಲಿ ಒಂದೇ ಒಂದು ಎಪಿಎಂಸಿಗಳಿಲ್ಲ ಏಕೆ?’ ಎಂದು ಪ್ರಶ್ನಿಸಿದರು. ಅಲ್ಲದೆ ನಿಮ್ಮದೇ ಕಾಂಗ್ರೆಸ್ ಸರ್ಕಾರ ಪಂಜಾಬ್ನಲ್ಲಿ ಒಪ್ಪಂದವನ್ನು ಉಲ್ಲಂಘಿಸುವ ರೈತರನ್ನು ಜೈಲಿಗೆ ಕಳಿಸುವ ಕಾನೂನನ್ನು ಜಾರಿಗೆ ತಂದಿದೆ ಎಂದು ರಾಹುಲ್ರನ್ನು ತರಾಟೆಗೆ ತೆಗೆದುಕೊಂಡರು.
ಕೇರಳದ ಆಡಳಿತಾರೂಢ ಎಡಪಂಥೀಯ ಎಲ್ಡಿಎಫ್ ಮೈತ್ರಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕುರಿತಾಗಿ ಪ್ರತಿಕ್ರಿಯಿಸಿದ ಜೋಶಿ ಅವರು, ಕೇರಳದಲ್ಲಿ ಮಾತ್ರ ಕುಸ್ತಿಯಾಡುತ್ತಿರುವ ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ದಿಲ್ಲಿಯಲ್ಲಿ ದೋಸ್ತಿಗಳಾಗಿವೆ. ಈ ಪಕ್ಷಗಳ ಬೂಟಾಟಿಕೆಯನ್ನು ನೀವೇ ನೋಡಿ. ಅದೇ ರೀತಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ. ಆದರೆ ಅವರ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ವಿರೋಧಿಸುತ್ತಾರೆ ಎಂದು ವಿಪಕ್ಷಗಳ ನಾಟಕಗಳ ಕುರಿತಾಗಿ ವ್ಯಂಗ್ಯವಾಡಿದರು.
ಅಲ್ಲದೆ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿದ್ದಾರೆಯೇ ಅಥವಾ ಇಂಥ ಬೂಟಾಟಿಕೆಯಲ್ಲಿ ವಿಶ್ವಾಸವಿಟ್ಟಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕೆಂದು ಜೋಶಿ ಅವರು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ