ಖ್ಯಾತ ಶಾಸ್ತ್ರೀಯ ಗಾಯಕಿ, ಕಿರಾಣಾ ಘರಾಣಾದ ದಿಗ್ಗಜ ಪ್ರಭಾ ಅತ್ರೆ ನಿಧನ

By Santosh NaikFirst Published Jan 13, 2024, 6:47 PM IST
Highlights

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನಾ ಘರಾನಾವನ್ನು ಪ್ರತಿನಿಧಿಸಿದ ಪ್ರಭಾ ಅತ್ರೆ, ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಗೌರವ ಪಡೆದುಕೊಂಡಿದ್ದರು.

ನವದೆಹಲಿ (ಜ.13):  ಖ್ಯಾತ ಶಾಸ್ತ್ರೀಯ ಗಾಯಕಿ ಡಾ ಪ್ರಭಾ ಅತ್ರೆ ಅವರು ಜನವರಿ 13 ರಂದು ತಮ್ಮ 92 ನೇ ವಯಸ್ಸಿನಲ್ಲಿ ಪುಣೆಯ ತಮ್ಮ ನಿವಾಸದಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ನಿಂದ ನಿಧನರಾದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನಾ ಘರಾನಾವನ್ನು ಪ್ರತಿನಿಧಿಸಿದ ಅತ್ರೆ ಅವರು ಭಾರತ ಸರ್ಕಾರದಿಂದ ಎಲ್ಲಾ ಮೂರು ಪದ್ಮ ಪ್ರಶಸ್ತಿಗಳ ಗೌರವ ಪಡೆದುಕೊಂಡಿದ್ದಾರೆ. ಅತ್ರೆ ಅವರು ತಮ್ಮ ನಿವಾಸದಲ್ಲಿ ನಿದ್ರಿಸುತ್ತಿದ್ದ ಸಮಯದಲ್ಲಿಯೇ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಅವರನ್ನು ಕೊತ್ರುಡ್‌ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಬೆಳಗ್ಗೆ 5.30ಕ್ಕೆ ಸಾವನ್ನಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಪ್ರಭಾ ಅತ್ರೆ ಅವರ ಕುಟುಂಬದ ಆಪ್ತರು ವಿದೇಶದಲ್ಲಿ ನೆಲೆಸಿರುವ ಕಾರಣ ಅವರು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

1932ರ ಸೆಪ್ಟೆಂಬರ್ 13ರಂದು ಜನಿಸಿದ ಅತ್ರೆ ಬಹುಮುಖ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಶಾಸ್ತ್ರೀಯ ಗಾಯಕಿಯಾಗುವುದರ ಜೊತೆಗೆ, ಅವರು ಶಿಕ್ಷಣತಜ್ಞ, ಸಂಶೋಧಕ, ಸಂಗೀತ ಸಂಯೋಜಕ ಮತ್ತು ಲೇಖಕಿಯೂ ಆಗಿದ್ದರು. ವಿಜ್ಞಾನ ಮತ್ತು ಕಾನೂನು ಪದವೀಧರರಾಗಿದ್ದ ಅವರು ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದರು.  ಜಾಗತಿಕ ಮಟ್ಟದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಜನಪ್ರಿಯಗೊಳಿಸುವಲ್ಲಿ ಅವರು ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದರು. ಖಯಾಲ್, ಠುಮ್ರಿ, ದಾದ್ರಾ, ಗಜಲ್, ಗೀತೆ, ನಾಟ್ಯಸಂಗೀತ ಮತ್ತು ಭಜನೆಗಳಂತಹ ಶೈಲಿಗಳಲ್ಲಿ ಪ್ರವೀಣರಾಗಿದ್ದ ಅತ್ರೆ ಅವರು ಕಳೆದ ಐದು ದಶಕಗಳಿಂದ ವಿದ್ಯಾರ್ಥಿಗಳಿಗೆ ಖಾಸಗಿ ಪಾಠಗಳನ್ನು ನೀಡುತ್ತಿದ್ದರು.

'ಗುರು-ಶಿಷ್ಯ ಪರಂಪರೆ' ಮತ್ತು ಸಾಂಸ್ಥಿಕ ಎರಡೂ ಸಂಪ್ರದಾಯಗಳಲ್ಲಿ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಕಲಿಸಲು ಅತ್ರೆ ಸ್ವರ್ಮಯಿ ಗುರುಕುಲವನ್ನು ಸ್ಥಾಪಿಸಿದರು. ಈ ಎರಡು ವ್ಯವಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಮುಖ್ಯ ಎಂದು ಅವರು ಬಲವಾಗಿ ಭಾವಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಪ್ರಭಾ ಅತ್ರೆ ನೀಡಿದ ಸೇವೆಗಾಗಿ 2022ರ ಜನವರಿಯಲ್ಲಿ ಕೇಂದ್ರ ಸರ್ಕಾರ ದೇಶದ 2ನೇ ಅತ್ಯುನ್ನತ ನಾಗರೀಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದರು. ಅದಕ್ಕೂ ಮುನ್ನ 1990ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2002ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವವಿಸಲಾಯಿತು. 1991 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

Latest Videos

Breaking: ಪದ್ಮಶ್ರೀ ಪುರಸ್ಕೃತ ಉಸ್ತಾದ್‌ ರಶೀದ್‌ ಖಾನ್‌ ನಿಧನ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜಗತ್ತು ಈ ವಾರ ತನ್ನ ಎರಡು ಅಮೂಲ್ಯ ಧ್ವನಿಗಳನ್ನು ಕಳೆದುಕೊಂಡಿದೆ ಮಂಗಳವಾರ ಪ್ರಾಸ್ಟೇಟ್ ಕ್ಯಾನ್ಸರ್‌ನೊಂದಿಗೆ ನಾಲ್ಕು ವರ್ಷಗಳ ಹೋರಾಟ ನಡೆಸಿದ್ದ ಉಸ್ತಾದ್‌ ರಶೀದ್‌ ಖಾನ್‌ ಕೋಲ್ಕತ್ತಾದಲ್ಲಿ ನಿಧನರಾಗಿದ್ದರು.

ಮೈಸೂರು ಅರಮನೆಯ ಉಸ್ತಾದ್ ತಿಲಕ್‌ ಜಟ್ಟಿ ಇನ್ನಿಲ್ಲ

click me!