
ನವದೆಹಲಿ: ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಭಾರತದಲ್ಲಿ 2024ರಲ್ಲಿ ಬಡತನದ ಪ್ರಮಾಣ ಶೇ. 4.6ಕ್ಕೆ ಇಳಿಕೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂದಾಜು ವರದಿ ತಿಳಿಸಿದೆ. ಈ ಮೂಲಕ, ವಿಶ್ವಬ್ಯಾಂಕ್‌ನ ವರದಿ ಪ್ರಕಾರ 2023ರಲ್ಲಿದ್ದ ಶೇ.5.3ರಷ್ಟು ಬಡತನದಲ್ಲಿ ಮತ್ತಷ್ಟು ಕುಸಿತ ಕಂಡಿದ್ದು ಕಂಡುಬಂದಿದೆ.
ವರದಿಯ ಪ್ರಕಾರ, ಬಡತನ ಕಡಿಮೆ ಮಾಡುವಲ್ಲಿ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ದತ್ತಾಂಶ ಸಂಗ್ರಹದ ಹೊಸ ಮಾದರಿ ಅಳವಡಿಸಿಕೊಳ್ಳುವಿಕೆ ಹಾಗೂ ವ್ಯಾಖ್ಯಾನಗಳ ನವೀಕರಣದಿಂದ ಇದು ಸಾಧ್ಯವಾಗಿದೆ. 2017ರಲ್ಲಿ ದಿನಕ್ಕೆ 184.02 ರು. ಇದ್ದ ಜಾಗತಿಕ ಬಡತನದ ರೇಖೆಯನ್ನು ವಿಶ್ವಬ್ಯಾಂಕ್ 2012ರಲ್ಲಿ 256.77 ರು.ಗೆ ಹೆಚ್ಚಿಸಿತ್ತು. ಇದರಿಂದಾಗಿ ಜಾಗತಿಕವಾಗಿ ಬಡವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 22.6 ಕೋಟಿ ಜನ ಕಡುಬಡವರಿದ್ದರು ಎನ್ನಲಾಗಿತ್ತು. ಆದರೆ ಇದೀಗ ಭಾರತದಲ್ಲಾಗಿರುವ ಸುಧಾರಣೆಯಿಂದಾಗಿ ಈ ಸಂಖ್ಯೆ 12.5 ಕೋಟಿಗೆ ಇಳಿಕೆಯಾಗಿದೆ. 2011-12ರಲ್ಲಿ ಬಡತನವು ಶೇ.16.22 ರಷ್ಟಿತ್ತು. ಇದು 2022-23ರ ಹೊತ್ತಿಗೆ ಶೇ.5.25ಕ್ಕೆ ಇಳಿಕೆಯಾಗಿತ್ತು.
ಭಾರತೀಯರೀಗ 146 ಕೋಟಿ, ಮರಣಕ್ಕೆ ತಕ್ಕ ಜನನ ಪ್ರಮಾಣ ಇಲ್ಲ
ನವದೆಹಲಿ: ಭಾರತದ ಜನಸಂಖ್ಯೆ ಈ ವರ್ಷ 146 ಕೋಟಿಯಷ್ಟಾಗಲಿದೆ. ಈ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಮುಂದುವರಿಯಲಿದೆ. ಆದರೆ, ದೇಶದಲ್ಲಿ ಫಲವತ್ತತೆ ಅಥವಾ ಜನನ ಪ್ರಮಾಣ ಮಾತ್ರ ತೀವ್ರ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆಯ ಹೊಸ ಜನಸಂಖ್ಯಾ ವರದಿ ಹೇಳಿದೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ, ವಿಶ್ವ ಜನಸಂಖ್ಯೆಯ ಸ್ಥಿತಿಗತಿ, ನೈಜ ಪ್ರಜನನ ಬಿಕ್ಕಟ್ಟು ವರದಿ ಪ್ರಕಾರ, ಫಲವತ್ತತೆ ಪ್ರಮಾಣ ಇಳಿಮುಖ ಕುರಿತು ಆತಂಕದ ಬದಲು ಲಕ್ಷಾಂತರ ಮಂದಿ ಮಕ್ಕಳನ್ನು ಹೊಂದುವ ಇಚ್ಛೆ ಪೂರೈಸಿಕೊಳ್ಳಲಾಗದಿರುವ ಬಗ್ಗೆ ಗಮನಹರಿಸುವ ಅಗತ್ಯ ವಿದೆ. ಅದೇ ರೀತಿ ಜನಸಂಖ್ಯೆ ಹೆಚ್ಚು ಅಥವಾ ಕಡಿಮೆ ಎಂಬುದು ನೈಜ ಬಿಕ್ಕಟ್ಟು ಅಲ್ಲ, ಬದಲಾಗಿ ಗರ್ಭನಿರೋಧಕ ಮತ್ತು ಕುಟುಂಬ ಆರಂಭಿಸಲು ಜನರಿಗೆ ಅಧಿಕಾರ ಇಲ್ಲದಿರುವುದೇ ನೈಜ ಸಮಸ್ಯೆ ಆಗಿದೆ.
ರಿಪ್ಲೇಸ್‌ಮೆಂಟ್ ರೇಟ್‌ಗಿಂತ ಕೆಳಗೆ ಕುಸಿದ ಫಲವತ್ತತೆ: ವಿಶ್ವಸಂಸ್ಥೆ
ಭಾರತದ ಒಟ್ಟಾರೆ ಸಂತಾನೋತ್ಪತ್ತಿ ದರ 1.9ರಷ್ಟಿದೆ. ಅಂದರೆ ಪ್ರತಿ ಮಹಿಳೆ ಯರು 1.9 ಮಕ್ಕಳನ್ನು ಹೆರುತ್ತಾರೆ. ಇದು ಪರ್ಯಾಯ ಹಂತ ಅಥವಾ ರಿಪ್ಲೇಸ್ ಮೆಂಟ್ ರೇಟ್ (2.1)ಗಿಂತ ಕಡಿಮೆ. ಇದರರ್ಥ ಭಾರತೀಯ ಮಹಿಳೆಯರು ಈಗ ಹೆಚ್ಚಿನ ಮಕ್ಕಳನ್ನು ಹೆರುತ್ತಿಲ್ಲ. ಹೀಗಾಗಿ ಮುಂದಿನ ತಲೆಮಾರಲ್ಲಿ ಜನಸಂಖ್ಯೆ ಸ್ಥಿರವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಜನನ ಪ್ರಮಾಣ ಇಳಿಕೆಯಾದರೂ ಯುವಜನರ ಸಂಖ್ಯೆ ಈಗಲೂ ದೊಡ್ಡ ಪ್ರಮಾಣದಲ್ಲಿದೆ. ದೇಶದಲ್ಲಿ 0-14 ವಯಸ್ಸಿನ ಮಕ್ಕಳ ಸಂಖ್ಯೆ ಶೇ.24ರಷ್ಟಿದ್ದರೆ, 10-19ರ ನಡುವಿನ ಯುವಜನರ ಸಂಖ್ಯೆ ಶೇ.17, 10-24ರ ನಡುವಿನ ಯುವಕರ ಪ್ರಮಾಣ ಶೇ.26 ರಷ್ಟಿದೆ. ಇನ್ನು ದೇಶವು ಶೇ.68ರಷ್ಟು ದುಡಿಯುವ ವಯಸ್ಸಿನವರನ್ನು (15 ರಿಂದ 64 ವಯಸಿನವರು) ಹೊಂದಿದೆ. ಇನ್ನು 65 ವರ್ಷ ಮೇಲ್ಪಟ್ಟವರು ಕೇವಲ ಶೇ.6ರಷ್ಟಿದ್ದಾರೆ. ಮುಂದಿನ ದಶಕಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ. 2025ರಲ್ಲಿ ಅಂದರೆ ಸದ್ಯ ದೇಶದ ಜನರ ಸರಾಸರಿ ಜೀವಿತಾವಧಿ ಗಂಡಸರದ್ದು 71 ವರ್ಷ ಮತ್ತು ಮಹಿಳೆಯರಿಗೆ 74 ವರ್ಷ ಆಗಿರಲಿದೆ.
ಏರಿಕೆಯಾಗಿ ಇಳಿಕೆ: ಭಾರತದ ಜನಸಂಖ್ಯೆ ಸದ್ಯ ಏರುಗತಿಯಲ್ಲಿದ್ದು, ಅದು 1.7ಶತಕೋಟಿಗೆ ತಲುಪಿದ ಬಳಿಕ ಇಳಿಮುಖವಾಗಲು ಆರಂಭಿಸುತ್ತದೆ. ಸುಮಾರು 40 ವರ್ಷ ಬಳಿಕ ಜನಸಂಖ್ಯೆ ಇಳಿಕೆ ಶುರುವಾಗಲಿದೆ ಎಂದು ವರದಿ ಅಂದಾಜಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ