'ಮೊದ್ಲು ನಿಮ್ಮ ಸೀಟ್‌ ಉಳಿಸಿಕೊಳ್ಳಿ, ನಂತರ ವಿಪಕ್ಷ ಸಂಘಟನೆ ಮಾತು..' ನಿತೀಶ್‌ ಕುಮಾರ್‌ಗೆ ಪ್ರಶಾಂತ್‌ ಕಿಶೋರ್‌ ಟಾಂಗ್‌!

By Santosh NaikFirst Published May 14, 2023, 5:48 PM IST
Highlights

10 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ವಿರುದ್ಧ ಕೂಡ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಮೇ.4): ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ವಿಪಕ್ಷಗಳಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ. ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ವಿಪಕ್ಷಗಳ ಸಂಘಟನೆಗಾಗಿ ರಾಜ್ಯದಿಂದ ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಈ ನಡುವೆ ನಿತೀಶ್‌ ಕುಮಾರ್‌ ಅವರ ವಿಪಕ್ಷಗಳ ಸಂಘಟನೆ ಪ್ರಯತ್ನವನ್ನು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಟೀಕೆ ಮಾಡಿದ್ದಾರೆ. ನಿತೀಶ್‌ ಕುಮಾರ್‌ಗೆ ಸ್ವತಃ ಅವರ ಸೀಟ್‌ ಉಳಿಯುವ ಬಗ್ಗೆಯೇ ಗ್ಯಾರಂಟಿ ಇಲ್ಲ. ಈಗ ಅವರು ಇಡೀ ದೇಶ ಸುತ್ತು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಬಿಹಾರ ಮುಖ್ಯಮಂತ್ರಿಯ ಪ್ರಯತ್ನ ಯಾವುದೇ ರೀತಿಯ ಫಲ ಕೊಡೋದಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ನಾಯಕರೊಂದಿಗೆ ಚಹಾ ಕುಡಿದು, ಸುದ್ದಿಗೋಷ್ಠಿ ನಡೆಸಿದರೆ ಏನೂ ಆಗೋದಿಲ್ಲ ಎಂದು  ರಾಜ್ಯದಾದ್ಯಂತ ನಡೆಯುತ್ತಿರುವ ಜನ್ ಸೂರಜ್ ಪಾದಯಾತ್ರೆಯ ಭಾಗವಾಗಿ, ಕಿಶೋರ್ ಸಮಸ್ತಿಪುರ ಜಿಲ್ಲೆಯ ಮೊರ್ವಾ ಬ್ಲಾಕ್‌ನಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬಿಹಾರ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿತೀಶ್ ಕುಮಾರ್ ಅವರಿಗೇ ಸ್ವಂತ ನೆಲೆ ಇಲ್ಲ. ಈಗ ಇಡೀ ದೇಶದಲ್ಲಿ ತಿರುಗಾಡುತ್ತಿದ್ದಾರೆ, ನಾಯಕರೊಂದಿಗೆ ಚಹಾ ಸೇವಿಸುತ್ತಾರೆ ಮತ್ತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ, ಅದರಿಂದ ಏನೂ ಬದಲಾಗೋದಿಲ್ಲ. ಚಹಾ ಸೇವಿಸಿ, ಪತ್ರಿಕಾಗೋಷ್ಠಿ ನಡೆಸಿ ಪ್ರತಿಪಕ್ಷಗಳ ಒಗ್ಗಟ್ಟು ಸಾಧಿಸಬೇಕಾದರೆ ಅದು ಹತ್ತು ವರ್ಷಗಳ ಹಿಂದೆಯೇ ಪೂರ್ಣಗೊಳ್ಳುತ್ತಿತ್ತು. ನಾಯಕರು ಪರಸ್ಪರ ಭೇಟಿ ಮಾಡಿದರೆ ಪ್ರತಿಪಕ್ಷಗಳ ಒಗ್ಗಟ್ಟು ಸಾಧ್ಯವಿಲ್ಲ. ನಿತೀಶ್‌ ಕುಮಾರ್ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿರುವ ನಿತೀಶ್‌ ಕುಮಾರ್ ಅವರು ಬಿಹಾರದಲ್ಲಿ ಮೊದಲಿಗೆ ಸೀಟು ಹಂಚಿಕೆಯ ಸೂತ್ರವನ್ನು ಬಿಡುಗಡೆ ಮಾಡಬೇಕು' ಎಂದು ಹೇಳಿದರು.

ಅವರು ಮೊದಲು ಜೆಡಿಯು, ಕಾಂಗ್ರೆಸ್, ಆರ್‌ಜೆಡಿ ಮತ್ತು ಅವರ ಇತರ ಮಿತ್ರಪಕ್ಷಗಳ ನಡುವಿನ ಆಗಿರುವ ಹೊಂದಾಣಿಕೆಯ ಬಗ್ಗೆ ಬಹಿರಂಗಪಡಿಸಬೇಕು ಎಂದರು. ನಿತೀಶ್ ಅವರು ತಮ್ಮ ಸ್ಥಾನವನ್ನು ತೆರವು ಮಾಡಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಗೆ ಕೊಡುತ್ತಾರೆಯೇ ಎಂದೂ ಕಿಶೋರ್‌ ಅವರು ಈ ವೇಳೆ ಪ್ರಶ್ನಿಸಿದ್ದಾರೆ.

ಸಿಪಿಐ(ಎಂ-ಎಲ್) ಗೆಲುವು ನಿತೀಶ್‌ ಕುಮಾರ್ ಅವರಿಗಿಂತ ಹೆಚ್ಚು. ಬಿಹಾರದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ 110 ಸ್ಥಾನಗಳಲ್ಲಿ 42 ಸ್ಥಾನಗಳನ್ನು ನಿತೀಸ್‌ ಕುಮಾರ್ ಅವರ ಪಕ್ಷವು ಗೆದ್ದುಕೊಂಡಿದೆ. ಆದರೆ ಸಿಪಿಐ (M-L) ಸ್ಪರ್ಧಿಸಿದ 17 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿದೆ. ಈ ಸತ್ಯವನ್ನು ಗಮನಿಸಿದರೆ, ಸಿಪಿಐ (ಎಂ-ಎಲ್) ಹೆಚ್ಚು ಸ್ಥಾನಗಳನ್ನು ಪಡೆಯಬೇಕು. ಹಾಗಾಗಿ ನಿತೀಶ್ ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

10 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ವಿರುದ್ಧವೂ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಿಹಾರ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಕೆಲಸ ಮಾಡಿರುವ ರೀತಿಯನ್ನು ನೀವು ಎಚ್ಚರಿಕೆಯಿಂದ ಅರ್ಥಮಾಡಿಕೊಂಡರೆ, ಬಿಪಿಎಸ್‌ಸಿ ಒಂದು ವರ್ಷದಲ್ಲಿ 10 ಸಾವಿರಕ್ಕಿಂತ ಹೆಚ್ಚು ಉದ್ಯೋಗಗಳನ್ನು ನೀಡಲು ಸಾಧ್ಯವಿಲ್ಲ ಎಂದು ನೀವು ತಿಳಿದುಕೊಳ್ಳುತ್ತೀರಿ ಎಂದು ಚುನಾವಣಾ ತಂತ್ರಗಾರ ಹೇಳಿದ್ದಾರೆ.

'ಬಿಜೆಪಿಯನ್ನು ಯಾಕೆ ಸೋಲಿಸೋಕೆ ಸಾಧ್ಯವಿಲ್ಲ..; ಪ್ರಶಾಂತ್‌ ಕಿಶೋರ್‌ ಕೊಟ್ಟ ಕಾರಣ ಇದು..!

ನಿಯಮಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಎರಡು ಲಕ್ಷ ಶಿಕ್ಷಕರನ್ನು ನೇಮಿಸಲು ಬಿಪಿಎಸ್‌ಸಿ ಕನಿಷ್ಠ ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಉದ್ಯೋಗಿ ಶಿಕ್ಷಕರಿಗೆ ಕೇವಲ 3 ಅವಕಾಶಗಳಿವೆ. ಸುಮ್ಮನೆ ಜನರನ್ನುಇವರು ಮೂರ್ಖರನ್ನಾಗಿಸುತ್ತಿದ್ದಾರೆ. 10 ಲಕ್ಷ ಉದ್ಯೋಗ ನೀಡುವುದಾಗಿ ಯಾದವ್‌ ಅವರು ಭರವಸೆ ನೀಡಿದ್ದು, ಒಂದೇ ಸಹಿಯಲ್ಲಿ ನೀಡುವುದಾಗಿ ತಿಳಿಸಿದ್ದರು. ತೇಜಸ್ವಿ ಯಾದವ್ ಅವರಿಗೆ ಯಾವುದೇ ವಿಷಯದ ಜ್ಞಾನವಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

click me!