- ಆರ್ಥಿಕ ಸಂಕಷ್ಟ: ತಮಿಳರ ಸೋಗಿನಲ್ಲಿ ನುಗ್ಗುವ ಸಂಭವ
- ಸಮುದ್ರ ಮಾರ್ಗದ ಮೂಲಕ ದೇಶದ ಗಡಿಯೊಳಗೆ ಪ್ರವೇಶ
- ಮೀನುಗಾರಿಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ
ಮಂಗಳೂರು(ಮೇ.13): ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಿಂದ ಜನರು ಅಕ್ರಮವಾಗಿ ಭಾರತಕ್ಕೆ ವಲಸೆ ಬರುವ ಸಂಭವವಿದ್ದು, ರಾಜ್ಯದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಲಂಕಾದಲ್ಲಿ ಬೆಲೆಯೇರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬದುಕು ಅರಸಿ ಭಾರತಕ್ಕೆ ಬರುವ ಸಂಭವ ಹೆಚ್ಚಿದೆ. ಹೀಗಾಗಿ ದೇಶಾದ್ಯಂತ ಹೈ ಅಲರ್ಚ್ ಘೋಷಣೆ ಮಾಡಲಾಗಿದೆ.
ಕರಾವಳಿಯಲ್ಲಿ ಸಮುದ್ರ ಮಾರ್ಗದ ಮೂಲಕ ದೇಶದ ಗಡಿಯೊಳಗೆ ಲಂಕಾ ನಾಗರಿಕರು ನುಸುಳುವ ಭೀತಿ ಇರುವ ಕಾರಣ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೂ ಹೈ ಅಲರ್ಚ್ ಘೋಷಿಸಲಾಗಿದೆ. ತಮಿಳಿಗರ ಸೋಗಿನಲ್ಲಿ ಶ್ರೀಲಂಕಾ ನಿರಾಶ್ರಿತರು ಒಳ ನುಸುಳುವ ಸಂಭವ ಇದೆ. ಅಲ್ಲದೆ ಮೀನುಗಾರಿಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರದ ವಸತಿ ಗೃಹ ಹಾಗೂ ಬಾಡಿಗೆ ಮನೆಗಳ ಮೇಲೂ ನಿಗಾ ಇರಿಸಲಾಗಿದೆ. ಈ ಬಗ್ಗೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಅಲ್ಲದೇ ಸಮುದ್ರದಲ್ಲಿ ನಡೆಯುವ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಲು ಆದೇಶ ನೀಡಲಾಗಿದೆ. ಮಂಗಳೂರಲ್ಲಿ ನೌಕಾಪಡೆ, ಕರಾವಳಿ ಕಾವಲು ಪೊಲೀಸ್, ಕೋಸ್ಟ್‌ಗಾರ್ಡ್‌ಗೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಪಧಾನಿ ಪದವಿಗೇರಿದ ರಾನಿಲ್ ವಿಕ್ರಮಸಿಂಘೆ
ಲಂಕಾಕ್ಕೆ ಸೇನೆ ರವಾನೆ ಮಾಡಿಲ್ಲ: ಭಾರತ ಸ್ಪಷ್ಟನೆ
ಶ್ರೀಲಂಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಣಕ್ಕೆ ಭಾರತ ಸರ್ಕಾರ ತನ್ನ ಸೇನೆಯನ್ನು ರವಾನಿಸುವ ಸಾಧ್ಯತೆ ಇದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಯನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಶ್ರೀಲಂಕಾದಲ್ಲಿನ ಭಾರತೀಯ ದೂತವಾಸ ಕಚೇರಿ ‘ದ್ವೀಪರಾಷ್ಟ್ರದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಯನ್ನು’ ಭಾರತ ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ. ಭಾರತ ತನ್ನ ಸೇನೆ ರವಾನಿಸಲಿದೆ ಎಂಬ ಕೆಲ ಮಾಧ್ಯಮಗಳ ವರದಿಯನ್ನು ನಾವು ಪೂರ್ಣವಾಗಿ ನಿರಾಕರಿಸುತ್ತೇವೆ. ವರದಿಗಳು ಲಂಕಾ ವಿಷಯದಲ್ಲಿ ಭಾರತದ ನಿಲುವನ್ನು ಅನುಮೋದಿಸುವುದಿಲ್ಲ’ ಎಂದು ಹೇಳಿದೆ.
ಭಾರತದ ವಿದೇಶಾಂಗ ಸಚಿವಾಲಯ ಕೂಡಾ ಮಂಗಳವಾರ ಇದೇ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ, ನೆರೆಯ ದೇಶದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಸದ್ಯ ನೌಕಾನೆಲೆಯಿಂದ ಮಹಿಂದಾ ಹೊರಬರಲ್ಲ!
ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ
ಆಢಳಿತಾರೂಢ ಶ್ರೀಲಂಕಾ ಪೀಪಲ್ಸ್ ಪಾರ್ಟಿಯ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಮನೆ ಮತ್ತು ಹಲವು ಐಷಾರಾಮಿ ಕಾರುಗಳನ್ನು ಬೂದಿ ಮಾಡಿದೆ.
ಸೋಮವಾರ ಮಹಿಂದಾ ಬೆಂಬಲಿಗರು, ಶಾಂತಿಯುತ ಹೋರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ 90ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಬೆನ್ನಲ್ಲೇ ಜನರು ಬೀದಿಗಿಳಿದು, ಆಡಳಿತಾರೂಢ ಪಕ್ಷದ ಹಾಲಿ, ಮಾಜಿ ಸಚಿವರು, ಸಂಸದರು, ನಾಯಕರ ನೂರಾರು ಮನೆ, ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಹಂಬನ್‌ಟೋಟಾ ನಗರದಲ್ಲಿರುವ ಮಹಿಂದಾ ಅವರ ಮನೆ, ಅಧ್ಯಕ್ಷ ಗೋಟಬಯ ಅವರ ಐಷಾರಾಮಿ ಬಂಗಲೆಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಈ ವೇಳೆ ಮನೆಯ ಆವರಣದೊಳಗೆ ನಿಲ್ಲಿಸಲಾಗಿದ್ದ ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಕುರುನೆಗೆಲಾ ನಗರದಲ್ಲಿ ಮಹಿಂದಾ ಅವರು ಪೂರ್ವಜರ ಮನೆಯೂ ಅಗ್ನಿಗೆ ಆಹುತಿಯಾಗಿದೆ.