* ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಪ್ರಧಾನಿ ಮೋದಿ
* ಸ್ವಕ್ಷೇತ್ರಕ್ಕೆ ಆಗಮಿಸಿದ ಮೋದಿಗೆ ವಾರಣಸಿ ಜನತೆಯಿಂದ ಅದ್ಧೂರಿ ಸ್ವಾಗತ
* ಹಾದಿ ಮಧ್ಯೆ ಮೋದಿಗೆ ಪೇಟ, ಶಾಲು ಜತೊಡಿಸಿದ ಅಭಿಮಾನಿ
ವಾರಾಣಸಿ(ಡಿ.13): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ವಾರಣಾಸಿ ಪ್ರವಾಸದಲ್ಲಿದ್ದಾರೆ. ವಾರಾಣಸಿ ತಲುಪಿದ ಪ್ರಧಾನಿಯವರು ಗಂಗಾ ದರ್ಶನ ಮತ್ತು ಪೂಜೆಗಾಗಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮುಂದೆ ಸಾಗಲು ಆರಂಭಿಸಿದ ಕೂಡಲೇ ದಾರಿಯಲ್ಲಿದ್ದ ಜನರು ಅವರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಅವರ ಸ್ವಾಗತಕ್ಕೆ ತಲೆಬಾಗಿದ ಪ್ರಧಾನಿ ವಾರಣಾಸಿಯ ತಂಜ್ ಗಲಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಭದ್ರತಾ ಸಿಬ್ಬಂದಿಯನ್ನು ದೂರ ಹೋಗುವಂತೆ ಹೇಳಿದರು. ಅಷ್ಟೇ ಅಲ್ಲದೇ, ಕಾರನ್ನು ನಿಲ್ಲಿಸಿ ಅಲ್ಲಿ ನೆರೆದಿದ್ದ ಸ್ಥಳೀಯರನ್ನು ಬರಮಾಡಿಕೊಂಡರು, ಅವರು ಕೊಟ್ಟ ಪೇಟ ಧರಿಸಿದ್ದಲ್ಲದೆ ಪ್ರೀತಿಯಿಂದ ಕೊಟ್ಟ ಕೇಸರಿ ಶಾಲನ್ನೂ ಧರಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಕೈಮುಗಿದುಕೊಂಡಿದ್ದರು. ಜನರೂ ಅವರ ಮೇಲೆ ಪುಷ್ಪವೃಷ್ಟಿ ಮಾಡಿದ್ದಾರೆ
ವೀಡಿಯೊವೊಂದರಲ್ಲಿ, ಪ್ರಧಾನಿಯ ಮೋದಿಯ ಕಾರು ಸ್ಥಳೀಯರು ಮತ್ತು ಅಂಗಡಿಗಳಿದ್ದ ಕಿರಿದಾದ ಲೇನ್ ಮೂಲಕ ಹಾದುಹೋಗುತ್ತದೆ. ಈ ವೇಳೆ ಜನರು ಘೋಷಣೆಗಳನ್ನು ಕೂಗುತ್ತಾ, ಪುಷ್ಪವೃಷ್ಟಿ ಮಾಡುವ ಮೂಲಕ ಶುಭಾಶಯ ಕೋರಿದರು. ಈ ನಡುವೆ ಅಭಿಮಾನಿಯೊಬ್ಬರು ಪ್ರಧಾನಿ ಮೋದಿಗೆ ಕೆಂಪು ಪೇಟ ಮತ್ತು ಕೇಸರಿ ದುಪಟ್ಟಾ ನೀಡಲು ಯತ್ನಿಸಿದರು. ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದಾಗ, ಪ್ರಧಾನಿ ಅವರನ್ನು ತನ್ನ ಬಳಿಗೆ ಬರುವಂತೆ ಸೂಚಿಸಿದರು. ವ್ಯಕ್ತಿ ಪ್ರಧಾನಿಯವರ ತಲೆಗೆ ಪೇಟ ಮತ್ತು ಭುಜದ ಮೇಲೆ ಕೇಸರಿ ಶಾಲನ್ನು ಎಳೆದಿದ್ದಾರೆ. ಈ ವೇಳೆ ಪ್ರಧಾನಿ ಕೈಮುಗಿದರು.
ಕಾಶಿ ತಲುಪಿದ ಸ್ಥಳೀಯ ಜನರು ತಮ್ಮ ಲೋಕಸಭಾ ಸಂಸದರಾದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಕೂಡ ಹಸ್ತಲಾಘವ ಮಾಡಿ ಜನರ ಶುಭಾಶಯಗಳನ್ನು ಸ್ವೀಕರಿಸಿದರು. ಇದಾದ ನಂತರ ಟ್ವೀಟ್ ಮಾಡಿರುವ ಅವರು, “ಕಾಶಿ ತಲುಪಲು ತುಂಬಾ ಉತ್ಸುಕನಾಗಿದ್ದೇನೆ. ಸ್ವಲ್ಪ ಸಮಯದ ನಂತರ ನಾವೆಲ್ಲರೂ ಕಾಶಿ ವಿಶ್ವನಾಥ ಧಾಮ ಯೋಜನೆಯ ಪ್ರಾರಂಭವನ್ನು ವೀಕ್ಷಿಸುತ್ತೇವೆ. ಇದಕ್ಕೂ ಮುನ್ನ ನಾನು ಕಾಶಿಯ ಕೊತ್ವಾಲ್‌ನ ಕಾಲಭೈರವನ ದರ್ಶನ ಪಡೆದೆ ಎಂದಿದ್ದಾರೆ.
ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲು, ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಡಬಲ್ ಡೆಕ್ಕರ್ ದೋಣಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನವನ್ನು ತಲುಪಿದ್ದಾರೆ. ಈ ಯೋಜನೆಯ ವೆಚ್ಚ ಅಂದಾಜು ₹ 339 ಕೋಟಿ ರೂಪಾಯಿ. ಮೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಇದು (ಶೇ 95) ಪೂರ್ಣಗೊಂಡಿದೆ ಎಂಬುವುದು ಮತ್ತೊಂದು ವಿಶೇಷ.