ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ, ಅದಕ್ಕಾಗಿ ನಾನು ಸಾಯಬಹುದು. ನಾನು ರಾಜಕೀಯಕ್ಕೆ ಬಂದು 10 ವರ್ಷಗಳಾಗಿದೆ. ನನ್ನ ದೇಶ ಏಕೆ ತುಂಬಾ ಹಿಂದುಳಿದಿದೆ, ಏಕೆ ಇಷ್ಟೊಂದು ಬಡತನ ಇತ್ತು, ಏಕೆ ಜನರು ವಿದ್ಯಾವಂತರಲ್ಲ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಯುವಕರು ನಿರುದ್ಯೋಗಿಗಳಾಗಿದ್ದೇಕೆ? ಏಕೆ? ನನ್ನ ಬಳಿ ಈಗ ಉತ್ತರವಿದೆ. ನಮ್ಮ ನಾಯಕರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ (ಏಪ್ರಿಲ್ 16, 2023): ದೆಹಲಿ ಅಬಕಾರಿ ನೀತಿ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ವಿಚಾರಣೆಗೆ ಕರೆದಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಸಿಬಿಐ ಕಚೇರಿಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಈ ಹಿನ್ನೆಲೆ ಸಿಬಿಐ ಕಚೇರಿಗೆ ತೆರಳುವ ಮುನ್ನ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಂದ್ರ ಕಚೇರಿಗೆ ತೆರಳುವ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, “ಪ್ರಧಾನಿ ಸಾರ್, ನೀವು ಏನು ಬೇಕಾದರೂ ಮಾಡಿ, ಎಎಪಿ (ಹೋರಾಟ) ನಿಲ್ಲಿಸುವುದಿಲ್ಲ” ಎಂದು ಹೇಳಿದರು. ದೆಹಲಿ ಅಬಕಾರಿ ನೀತಿ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಕೇಂದ್ರೀಯ ಸಂಸ್ಥೆಯಿಂದ ಕರೆಸಲ್ಪಟ್ಟಿರುವ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿ: ದೆಹಲಿ ಶಾಸಕರಿಗೆ ಸ್ಯಾಲರಿ ಹೈಕ್ ಭಾಗ್ಯ..! ಆಮ್ ಆದ್ಮಿ ಸಿಎಂ ಕೇಜ್ರಿವಾಲ್ ಸಂಬಳ ಎಷ್ಟು ನೋಡಿ..
ಅಲ್ಲದೆ, ಸಿಬಿಐ ಕಚೇರಿಗೆ ತೆರಳುವ ಮೊದಲು ಅವರು ತಮ್ಮ ಮನೆಯ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಂತರ ರಾಜ್ ಘಾಟ್‌ಗೆ ಸಹ ಭೇಟಿ ನೀಡಿದ್ದಾರೆ. ವಿಡಿಯೋದಲ್ಲಿ ‘’ಇಂದು ಅವರು ನನ್ನನ್ನು ಸಿಬಿಐಗೆ ಕರೆದಿದ್ದಾರೆ. ನಾನು ಸ್ವಲ್ಪ ಹೊತ್ತಿನಲ್ಲಿ ಹೊರಡುತ್ತೇನೆ. ನಾವೇನೂ ತಪ್ಪು ಮಾಡದಿರುವಾಗ, ಮರೆಮಾಚಲು ಏನಿದೆ? ನಾನು ಎಲ್ಲಾ ಪ್ರಶ್ನೆಗಳಿಗೆ ಸತ್ಯವಾಗಿ ಉತ್ತರಿಸುತ್ತೇನೆ. ಈ ಜನರು ತುಂಬಾ ಶಕ್ತಿಶಾಲಿಗಳು. ಅವರು ತಪ್ಪಿತಸ್ಥರು ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಯಾರನ್ನಾದರೂ ಜೈಲಿಗೆ ಕಳುಹಿಸಬಹುದು. ನಿನ್ನೆಯಿಂದ ಇವರೆಲ್ಲ ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬಹುಶಃ ಬಿಜೆಪಿಯವರು ನನ್ನನ್ನು ಬಂಧಿಸುವಂತೆ ಸಿಬಿಐಗೆ ಆದೇಶಿಸಿರಬಹುದು,” ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನು, ಅರವಿಂದ್ ಕೇಜ್ರಿವಾಲ್ ಅವರು ಬೆಳಗ್ಗೆ 11.08ರ ಸುಮಾರಿಗೆ ಸಿಬಿಐ ಕೇಂದ್ರ ಕಚೇರಿಯನ್ನು ತಲುಪಿದ್ದಾರೆ. ಇವರ ಜತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ಸಚಿವರಾದ ಸೌರಭ್ ಭಾರದ್ವಾಜ್, ಅತಿಶಿ ಮತ್ತು ಇತರರು ಸೇರಿದಂತೆ ಹಿರಿಯ ಎಎಪಿ ನಾಯಕರು ಸಹ ದೆಹಲಿಯ ಲೋಧಿ ರಸ್ತೆಯ ಸಿಬಿಐ ಕಚೇರಿಗೆ ತೆರಳಿದ್ದಾರೆ. ಹಾಗೆ, ತಮ್ಮ ಪಕ್ಷದ ಮುಖ್ಯಸ್ಥರನ್ನು ಬೆಂಬಲಿಸಲು ಸಿಬಿಐ ಪ್ರಧಾನ ಕಚೇರಿಯ ಹೊರಗೆ ಕುಳಿತಿದ್ದಾರೆ.ಈ ಮಧ್ಯೆ, ದೆಹಲಿಯ ಮುಖ್ಯಮಂತ್ರಿ ನಿವಾಸ, ಸಿಬಿಐ ಪ್ರಧಾನ ಕಚೇರಿ, ರಾಜ್ ಘಾಟ್ ಮತ್ತು ಐಟಿಒ ಸೇರಿದಂತೆ ದೆಹಲಿಯ ಹಲವು ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಆಪ್ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು .
ಇದನ್ನೂ ಓದಿ: ಆಪ್ ಸೇನಾನಿಗಳು ಜೈಲಿಗೆ: ಉಡುಗಿದ ಸೇನೆಯ ಮಹಾದಂಡನಾಯಕನ ಜಂಘಾಬಲ..!
ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಈಗ ಬಿಜೆಪಿ ಆದೇಶವೊಂದನ್ನು ಜಾರಿ ಮಾಡಿದರೆ, ಸಿಬಿಐ ಅದನ್ನು ಪಾಲಿಸಲೇಬೇಕಾಗುತ್ತದೆ. ಅವರು ತುಂಬಾ ಅಹಂಕಾರಿಗಳಾಗಿ ಮಾರ್ಪಟ್ಟಿದ್ದಾರೆ. ಅಧಿಕಾರದ ಅಮಲು ಹಿಡಿದಿದ್ದು, ನ್ಯಾಯಾಧೀಶರು, ಮಾಧ್ಯಮದವರು, ರಾಜಕಾರಣಿಗಳು, ವ್ಯಾಪಾರಿಗಳು ಯಾರಿಗಾದರೂ ಬೆದರಿಕೆ ಹಾಕುತ್ತಾರೆ. ಅವರು ಎಲ್ಲರಿಗೂ ಜೈಲು ಬೆದರಿಕೆ ಹಾಕುತ್ತಾರೆ ಎಂದೂ ಟೀಕೆ ಮಾಡಿದ್ದಾರೆ.
ಅಲ್ಲದೆ, "ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ, ಅದಕ್ಕಾಗಿ ನಾನು ಸಾಯಬಹುದು. ನಾನು ರಾಜಕೀಯಕ್ಕೆ ಬಂದು 10 ವರ್ಷಗಳಾಗಿದೆ. ನನ್ನ ದೇಶ ಏಕೆ ತುಂಬಾ ಹಿಂದುಳಿದಿದೆ, ಏಕೆ ಇಷ್ಟೊಂದು ಬಡತನ ಇತ್ತು, ಏಕೆ ಜನರು ವಿದ್ಯಾವಂತರಲ್ಲ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಯುವಕರು ನಿರುದ್ಯೋಗಿಗಳಾಗಿದ್ದೇಕೆ? ಏಕೆ? ನನ್ನ ಬಳಿ ಈಗ ಉತ್ತರವಿದೆ. ನಮ್ಮ ನಾಯಕರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲದಿರುವುದೇ ಇದಕ್ಕೆ ಕಾರಣ. ಅವರು ಯಾವಾಗಲೂ ಕೊಳಕು ರಾಜಕೀಯವನ್ನು ಆಡಲು ಬಯಸುತ್ತಾರೆ. ಅವರು ಎಲ್ಲರಿಗೂ ಜೈಲಿಗೆ ಹೋಗುವಂತೆ ಬೆದರಿಕೆ ಹಾಕುತ್ತಾರೆ’’ ಎಂದೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದೆಹಲಿ ಮದ್ಯನೀತಿ ಹಗರಣ: ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಭಾರಿ ಪ್ರತಿಭಟನೆ