
ನವದೆಹಲಿ: ದೇಶದಲ್ಲಿ ಸಂತಾನೋತ್ಪತ್ತಿ ದರವು (ಟಿಎಫ್‌ಆರ್) ಕುಸಿದಿರುವುದರಿಂದ, ಜನಸಂಖ್ಯಾ ನಿಯಂತ್ರಣಕ್ಕೆ ಕೈಗೊಂಡ ಎಲ್ಲ ಕ್ರಮಗಳನ್ನು ಹಾಗೂ ಪ್ರೋತ್ಸಾಹಕ ಯೋಜನೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
‘ದಿ ಘೋಸ್ಟ್ ಆಫ್ ಪಾಪ್ಯುಲೇಷನ್ ಪಾಸ್ಟ್: ಹೌ ಪಾಪ್ಯುಲೇಷನ್ ಕಂಟ್ರೋಲ್ ಪರ್ಸಿಸ್ಟ್ಸ್ ಇನ್ ಇಂಡಿಯಾ’ ಹೆಸರಿನ ಕಾರ್ಯಕಾರಿ ವರದಿಯನ್ನು ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿದೆ. ಅದರಲ್ಲಿ, 2 ಮಕ್ಕಳ ನೀತಿಯನ್ನು ಪಾಲಿಸುವ ದಂಪತಿಗೆ ಆಶಾ ಕಾರ್ಯಕರ್ತೆಯರ ಮೂಲಕ ನೀಡಲಾಗುವ ಪ್ರೋತ್ಸಾಹಕ ಸೇರಿದಂತೆ ಎಲ್ಲಾ ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಗಳನ್ನು ರದ್ದುಗೊಳಿಸಬೇಕೆಂದು ತಿಳಿಸಲಾಗಿದೆ.
ಪ್ರಸ್ತುತ ಭಾರತದ ರಾಷ್ಟ್ರೀಯ ಒಟ್ಟು ಫಲವತ್ತತೆ ದರವು 1.9ಕ್ಕೆ ಕುಸಿದಿದ್ದು, ಇದು ಜನಸಂಖ್ಯೆ ಸ್ಥಿರತೆಗೆ ಅಗತ್ಯವಿರುವ ‘ಬದಲಿ ಫಲವತ್ತತೆ ದರ’ಕ್ಕಿಂತ ಕಡಿಮೆಯಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದ ಉಳಿದ ಭಾಗಗಳಲ್ಲಿ ಈ ದರವು 1.6ರಷ್ಟಿದೆ. ಇದು ಉತ್ತರ ಯುರೋಪ್ (1.5) ಮತ್ತು ಅಮೆರಿಕದ (1.6) ಸಂತಾನೋತ್ಪತ್ತಿ ದರಕ್ಕೆ ಸಮಾನವಾಗಿದೆ. ಹೀಗಾಗಿ ಪ್ರಸ್ತುತ ವಾತಾವರಣದಲ್ಲಿ ಜನಸಂಖ್ಯೆ ನಿಯಂತ್ರಣ ನೀತಿಯ ಆವಶ್ಯಕತೆಯಿಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಇದಷ್ಟೇ ಅಲ್ಲದೆ, ಕುಟುಂಬ ಯೋಜನಾ ಪ್ರಶಸ್ತಿಗಳು, ವಿಶ್ವ ಜನಸಂಖ್ಯಾ ದಿನದಂತಹ ಜನಸಂಖ್ಯೆ ನಿಯಂತ್ರಣವನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಕೈಬಿಡಬೇಕು. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಇಬ್ಬರು ಮಕ್ಕಳ ನಿಯಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ವರದಿ ಹೇಳಿದೆ.
ಇದನ್ನೂ ಓದಿ: 2037ರ ವೇಳೆಗೆ $400 ಬಿಲಿಯನ್ ಆರ್ಥಿಕತೆಯತ್ತ ಬೆಂಗಳೂರು: ಮೂಲಸೌಕರ್ಯದ ಸವಾಲು ಮೆಟ್ಟಿ ನಿಲ್ಲುವುದೇ ಸಿಲಿಕಾನ್ ಸಿಟಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ