
ಬೆಂಗಳೂರು (ಆ.26): ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಆದ ಸ್ಥಳವನ್ನು ಪ್ರಧಾನಿ ನರೇಂದ್ರ ಮೋದಿ ಶಿವಶಕ್ತಿ ಸ್ಥಳ ಎಂದು ನಾಮಕರಣ ಮಾಡಿದ್ದಾರೆ. ಇಸ್ರೋ ವಿಜ್ಞಾನಿಗಳ ಎದುರು ಮಾಡಿದ ಭಾಷಣದಲ್ಲಿ ಇನ್ನು ಮುಂದೆ ಆ ಸ್ಥಳವನ್ನು ಶಿವಶಕ್ತಿ ಸ್ಥಳ ಎಂದು ತಿಳಿಸಿದ್ದಾರೆ. ಇನ್ನು ಚಂದ್ರಯಾನ-2 ಬಿದ್ದ ಸ್ಥಳವನ್ನು 'ತಿರಂಗಾ' ಎನ್ನುವ ಹೆಸರಿನಿಂದ ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ, ಬಳಿಕ ಗ್ರೀಸ್‌ಗೆ ಹೋಗಿದ್ದೆ. ಆದರೆ, ನನ್ನ ಮನಸ್ಸು ಸಂಪೂರ್ಣವಾಗಿ ನಿಮ್ಮ ಜೊತೆಗೆ ಸೇರಿಕೊಂಡಿತ್ತು. ನನಗೆ ಒಮ್ಮೊಮ್ಮೆ ಅನಿಸುತ್ತದೆ. ನಾನು ನಿಮಗೆ ಅನ್ಯಾಯ ಮಾಡುತ್ತಿದ್ದೇನೆ ಅನಿಸುತ್ತಿದೆ. ಬೆಳ್ಳಂ ಬೆಳಗ್ಗೆ ನಿಮನ್ನು ಇಲ್ಲಿಗೆ ಕರೆಸಿದಿದ್ದೇನೆ. ಎಷ್ಟೆಲ್ಲಾ ಓವರ್‌ಟೈಂ ಕೆಲಸ ಮಾಡಿದ್ದೀರಿ. ಭಾರತಕ್ಕೆ ಬಂದ ಬಳಿಕ, ನಿಮ್ಮ ದರ್ಶನ ಪಡೆಯಬೇಕು ಎಂದು ಮನಸ್ಸು ಮಾಡಿದ್ದೆ. ನಿಮ್ಮ ಬಳಿ ಬಂದಿರುವುದು ಬಹಳ ಸಂತೋಷ ನೀಡಿದೆ. ನಿಮ್ಮೆಲ್ಲರಿಗೂ ನಾನು ಸೆಲ್ಯೂಟ್ ಸಲ್ಲಿಸುತ್ತೇನೆ. ನೀವು ದೇಶವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎನ್ನುವ ವಿಚಾರ ಇದೆಯಲ್ಲ ಇದು ಸಾಧಾರಣ ಸಾಧನೆಯಲ್ಲ. ಇದು ಅನಂತ ಅಂತರಿಕ್ಷದಲ್ಲಿ ಭಾರತದ ವೈಜ್ಞಾನಿಕ ಸಾಧನೆಯ ಶಂಖನಾದ. ಇಂದು ನಮ್ಮ ದೇಶದ ರಾಷ್ಟ್ರಧ್ವಜ ಚಂದ್ರನ ಮೇಲೆ ಇದೆ. ಇಂದು ನಾವು ಎಲ್ಲಿ ತಲುಪಿದ್ದೇವೆಯೋ ಅಲ್ಲಿ ಈವರೆಗೂ ಯಾರೂ ತಲುಪಿಲ್ಲ. ನೀವು ಮಾಡಿದ ಸಾಧನೆ ಯಾರೂ ಮಾಡಿಲ್ಲ. ಇದು ನಿಮ್ಮ ಭಾರತ, ನಿರ್ಭೀತ ಭಾರತ. ಇದು ಹೊಸ ಭಾರತ, ಹೊಸ ಆಲೋಚನೆ ಹೊಂದಿರುವ ಭಾರತ' ಎಂದು ಹೇಳಿದರು.
21ನೇ ಶತಮಾನದಲ್ಲಿ ಇದೇ ಭಾರತ, ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಸಮಾಧಾನ ತರಲಿದೆ. ಲ್ಯಾಂಡಿಗ್ ಖಚಿತವಾದ ಬಳಿಕ, ಇಸ್ರೋ ಕೇಂದ್ರ ಹಾಗೂ ಇಡೀ ದೇಶ ಸಂಭ್ರಮ ಪಟ್ಟಿತಲ್ಲ ಅದನ್ನು ಯಾರು ಮರೆಯುತ್ತಾರೆ. ಆ ಕ್ಷಣ ಇಂದು ಇತಿಹಾಸದಲ್ಲಿ ಅಮರವಾಗಲಿದೆ. ಈ ಕ್ಷಣ ಇಡೀ ಶತಮಾನದ ಪ್ರೇರಣಾದಾಯಿ ಕ್ಷಣಗಳಲ್ಲಿ ಒಂದಾಗಿರಲಿದೆ. ಇಲ್ಲಿಂದ ಸಂದೇಶವನ್ನು ಚಂದ್ರನಿಗೆ ಕಳಿಸುತ್ತಿದ್ದೀರಿ. ಅಲ್ಲಿಂದ ಸಂದೇಶ ಬರುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಿಮ್ಮಿಂದ. ನಮ್ಮ ದೇಶದ ವಿಜ್ಞಾನಿಗಳಿಂದ ಇದು ಸಾಧ್ಯವಾಗಿದೆ. ನಾನು ನಿಮಗೆ ಎಷ್ಟು ಶ್ಲಾಘನೆ ಮಾಡಿದರೂ ಅದು ಬಹಳ ಕಡಿಮೆ ಎಂದರು.
PM Modi Isro Visit: ಇಸ್ರೋ ಕಚೇರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಜಾಲಹಳ್ಳಿ ಕ್ರಾಸ್‌ನಿಂದ ರೋಡ್ ಶೋ!
ವಿಕ್ರಮ್ ಲ್ಯಾಂಡರ್ ಕಾಲಿಟ್ಟ ಚಿತ್ರವನ್ನು ನೋಡಿದೆ. ಒಂದು ಕಡೆ ವಿಕ್ರಮನ ವಿಶ್ವಾಸವಿದ್ದರೆ, ಇನ್ನೊಂದೆಡೆ ಪ್ರಗ್ಯಾನನ ಪರಾಕ್ರಮವಿದೆ. ಪ್ರಗ್ಯಾನ್ ಪ್ರತಿಕ್ಷಣ ಚಂದ್ರನ ಮೇಲೆ ತನ್ನ ಚಿತ್ರಗಳನ್ನು ಮೂಡಿಸುತ್ತಿದೆ. ಇದೆಲ್ಲವೂ ಅದ್ಭುತ. ಮಾನವ ಜನಾಂಗ ಹಿಂದೆಂದೂ ಕಾಣದ ಭಾಗದ ಚಿತ್ರಗಳು ಸಿಗುತ್ತಿದೆ. ಇದನ್ನು ಜಗತ್ತಿಗೆ ನೀಡಿದ್ದು ಭಾರತ. ಇಂದು ಇಡೀ ಜಗತ್ತು ನಮ್ಮ ತಂತ್ರಜ್ಞಾನದ, ವಿಜ್ಞಾನದ ಹೆಮ್ಮೆಯನ್ನು ಪರಿಗಣಿಸಿದೆ. ಚಂದ್ರಯಾನ-3 ಭಾರತದ್ದು ಮಾತ್ರವಲ್ಲ ಇಡೀ ಮಾನವ ಜನಾಂಗದ ಯಶಸ್ಸು. ನಮ್ಮ ಮಿಷನ್ ಯಾವ ಕ್ಷೇತ್ರವನ್ನು ಪರಿಶೋಧನೆ ಮಾಡುತ್ತದೆಯೋ, ಅದು ಚಂದ್ರ ಪರಿಶೋಧನೆಗೆ ಹೊಸ ಮಾರ್ಗ ತೆರೆಯುತ್ತದೆ ಎಂದು ಹೇಳಿದರು.
Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್, ಚಂದ್ರನ ಮೇಲಿದೆ ನೆಹರು ಪಾಯಿಂಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ