ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ರಾತ್ರಿ ಕಳೆದ Modi: ಸರಳತೆ ಮೆರೆದ ಪ್ರಧಾನಿ

By Kannadaprabha News  |  First Published Oct 24, 2022, 9:46 AM IST

ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ಪ್ರಧಾನಿ ಮೋದಿ ರಾತ್ರಿ ಕಳೆದಿದ್ದಾರೆ. ಭಾರತದ ಕೊನೆಯ ಗ್ರಾಮಕ್ಕೆ ಅವರು ದಿಢೀರ್‌ ಭೇಟಿ ನೀಡಿ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲೇ ಅಚ್ಚರಿಯ ವಾಸ್ತವ್ಯ ಮಾಡಿದ್ದಾರೆ. 


ನವದೆಹಲಿ: ಅಚ್ಚರಿಯ ಭೇಟಿ, ಘೋಷಣೆ ಹಾಗೂ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೊಸದೊಂದು ಅಚ್ಚರಿಯನ್ನು ನೀಡಿದ್ದಾರೆ. ಚೀನಾ (China) ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ (India’s Last Village) ಉತ್ತರಾಖಂಡದ (Uttarakhand) ಮನಾಕ್ಕೆ ಶನಿವಾರ ರಾತ್ರಿ ತೆರಳಿದ ಅವರು ಗಡಿ ರಸ್ತೆ ಸಂಘಟನೆ (Border Roads Organization) (ಬಿಆರ್‌ಒ) (BRO) ಯ ಕಾರ್ಮಿಕರು ವಾಸಿಸುವ ಸಣ್ಣ ತಗಡಿನ ಶೆಡ್‌ನಲ್ಲಿ ಒಂದು ರಾತ್ರಿಯನ್ನು ಕಳೆದಿದ್ದಾರೆ. ಜತೆಗೆ ಕಾರ್ಮಿಕರು ತಯಾರಿಸಿದ ಖಿಚಡಿ, ಸಿರಿಧಾನ್ಯದ ರೊಟ್ಟಿ, ಊದಲುವಿನ ಖೀರು ಸೇವಿಸಿದ್ದಾರೆ. ಪ್ರಧಾನಿ ಅವರ ಈ ಸರಳತೆ ಕಂಡು ಕಾರ್ಮಿಕರು ಪುಳಕಿತರಾಗಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕೇದಾರನಾಥ ಹಾಗೂ ಬದರೀನಾಥ ದರ್ಶನ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರು ಮನಾದಲ್ಲಿ ಇರುವ ಕಾರ್ಮಿಕರ ಶೆಡ್‌ಗೆ ಆಗಮಿಸಿದರು. ಮೋದಿ ಆಗಮನ ಕುರಿತು 72 ತಾಸಿನ ಮುಂಚೆಯಷ್ಟೇ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ಇತ್ತು. ಆದರೆ ಅವರೆಲ್ಲಿ ಬರುತ್ತಾರೆ ಎಂಬ ಅನುಮಾನದೊಂದಿಗೇ ಶೆಡ್‌ನಲ್ಲಿ ಕೊಂಚ ಬದಲಾವಣೆಗಳನ್ನು ತರಾತುರಿಯಲ್ಲಿ ಮಾಡಿದರು. ಗಮನಾರ್ಹವೆಂದರೆ, ‘ಈ ಶೆಡ್‌ ಸುತ್ತಮುತ್ತ ಮೂಲಸೌಕರ್ಯಗಳು ಅತ್ಯಂತ ಕನಿಷ್ಠ ಪ್ರಮಾಣದಲ್ಲೇ ಇವೆ. ಆದರೂ ಮೋದಿ ಅವರು ತಂಗಲು ಹಿಂದೆ-ಮುಂದೆ ನೋಡಲಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

Tap to resize

Latest Videos

ಇದನ್ನು ಓದಿ: ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!

ನಮ್ಮ ಆಹಾರವನ್ನೇ ತಿಂದರು:
‘ಮೋದಿ ಅವರು ರಸ್ತೆ ನಿರ್ಮಾಣ ಕಾರ್ಮಿಕರ ಜತೆ ಚರ್ಚೆ ನಡೆಸಿದರು. ಬಳಿಕ ನನಗೂ ಅಡುಗೆ ಮಾಡಿ ಎಂದು ಹೇಳಿದರು. ಪ್ರಧಾನಿಗೆಂದು ನಾವು ಯಾವುದೇ ವಿಶೇಷ ಸಾಮಗ್ರಿ ತಂದಿರಲಿಲ್ಲ. ನಮ್ಮಲ್ಲಿ ಇದ್ದ ವಸ್ತುವನ್ನೇ ಬಳಸಿ ಅಡುಗೆ ಮಾಡಿದೆವು. ಅಧಿಕಾರಿಗಳು ಬದರೀನಾಥದಲ್ಲಿ ಮೋದಿ ಅವರಿಗೆ ಸಕಲ ವ್ಯವಸ್ಥೆ ಮಾಡಿದ್ದರು. ಆದರೂ ಅವರು ಇಲ್ಲೇ ಆಹಾರ ಸೇವಿಸಿದರು. ಅವರ ಜತೆಗೆ ಬಂದಿದ್ದ ಅಧಿಕಾರಿಗಳೂ ಆಹಾರ ತಿಂದರು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೋದಿ ಅವರು ತಂಗಿದ್ದ ಜಾಗ 11,300 ಅಡಿ ಎತ್ತರದಲ್ಲಿದೆ. ಶೂನ್ಯಕ್ಕಿಂತ ಕಡಿಮೆ ತಾಪಮಾನ ಇರುವ ಕಾರಣ ರಾತ್ರಿ ವೇಳೆ ಅವರಿಗೆ ಸಣ್ಣ ಎಲೆಕ್ಟ್ರಿಕ್‌ ಹೀಟರ್‌ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಅವರು ನಿರ್ಗಮಿಸುವಾಗ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿ ಬೀಳ್ಕೊಟ್ಟು ಕಾರ್ಮಿಕರು ಕುಪ್ಪಳಿಸಿದರು.

ಇದನ್ನೂ ಓದಿ: Modi ಅವಧಿಯಲ್ಲಿ ಉಗ್ರ ದಾಳಿ ಇಳಿಕೆ: RTI ಮಾಹಿತಿ

ಸರಳತೆ ಮೆರೆದ ಪ್ರಧಾನಿ
- ಬದರೀನಾಥದಲ್ಲಿ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು
- ಆದರೆ ಗಡಿ ರಸ್ತೆ ಸಂಘಟನೆಯ ಕಾರ್ಮಿಕರ ಭೇಟಿಗೆ ಹೊರಟ ಮೋದಿ
- ‘ಇವತ್ತು ಇಲ್ಲೇ ತಂಗುವೆ’ ಎಂದು ಕೊನೆ ಕ್ಷಣದಲ್ಲಿ ಹೇಳಿಕೆ
- ಕಾರ್ಮಿಕರ ಅಡುಗೆ, ಸಿರಿಧಾನ್ಯದ ರೊಟ್ಟಿ ಸೇವನೆ
- ಮೈನಸ್‌ ಚಳೀಲಿ ತಗಡಿನ ಶೆಡ್ಡಲ್ಲಿ ಹೀಟರ್‌ ನೆರವಿನಿಂದ ನಿದ್ದೆ
 

click me!