
ನವದೆಹಲಿ(ಡಿ.26): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ ಮುಂದುವರಿಯುತ್ತಿರುವಾಗಲೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 18 ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಪ್ರಧಾನಿ ಮೋದಿ ಅವರು ಗುಂಡಿಯನ್ನು ಒತ್ತುವುದರೊಂದಿಗೆ ಫಲಾನುಭವಿ ರೈತರ ಖಾತೆಗಳಿಗೆ ತಲಾ 2000 ರು. ಏಕಕಾಲದಲ್ಲಿ ಸಂದಾಯವಾಗಿದೆ.
ಪಿಎಂ-ಕಿಸಾನ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 3 ಕಂತುಗಳಲ್ಲಿ ವಾರ್ಷಿಕ 6 ಸಾವಿರ ರು. ನೆರವು ನೀಡಲಾಗುತ್ತದೆ. ಈ ಪೈಕಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಪ್ರಯುಕ್ತ ‘ಉತ್ತಮ ಆಡಳಿತದ ದಿನಾಚರಣೆ’ಯಾದ ಡಿ.25ರಂದು 9 ಕೋಟಿ ಅನ್ನದಾತರ ಖಾತೆಗಳಿಗೆ ತಲಾ 2 ಸಾವಿರ ರು.ನಂತೆ 18 ಸಾವಿರ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಈ ವೇಳೆ ಮೋದಿ ಅವರು ರೈತರ ಜೊತೆ ಸಂವಾದ ನಡೆಸಿದರು. ಇದಕ್ಕಾಗಿ ದೇಶಾದ್ಯಂತ 19 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ದೀದಿ ಸರ್ಕಾರದ ವಿರುದ್ಧ ಗರಂ:
ರೈತರಿಗೆ ಕೇಂದ್ರದ ಸಹಾಯ ಧನ ಬಿಡುಗಡೆ ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆಗೆ ಹಣಿಯಾಗುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡರು. ಪಶ್ಚಿಮ ಬಂಗಾಳದ 70 ಲಕ್ಷ ರೈತರು ಪಿಎಂ-ಕಿಸಾನ್ ಯೋಜನೆ ವ್ಯಾಪ್ತಿಗೆ ಬರದಂತೆ ದೀದಿ ಸರ್ಕಾರ ತಡೆದಿದೆ ಎಂದು ಕಿಡಿಕಾರಿದರು.
ಕೃಷಿ ಕಾಯ್ದೆಗಳಿಂದ ರೈತರ ಜಮೀನು ಖಾಸಗಿ ಪಾಲಾಗಲ್ಲ
ಅಲ್ಲದೆ ಕಳೆದ 3 ದಶಕಗಳಿಂದ ರಾಜ್ಯದ ಆಳ್ವಿಕೆ ನಡೆಸುತ್ತಿರುವವರು ರಾಜ್ಯವನ್ನು ಹೀನಾಯ ಸ್ಥಿತಿಗೆ ತಂದಿದ್ದು, ರೈತರ ಅಭ್ಯುದಯಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಎಡಪಕ್ಷಗಳ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ