Swami Vivekananda Jayanti: ವಿವೇಕಾನಂದರ ಕಲ್ಪನೆ ಮೋದಿ ಮೂಲಕ ಸಾಕಾರ

Kannadaprabha News   | Asianet News
Published : Jan 12, 2022, 08:25 AM ISTUpdated : Jan 12, 2022, 09:00 AM IST
Swami Vivekananda Jayanti: ವಿವೇಕಾನಂದರ ಕಲ್ಪನೆ ಮೋದಿ ಮೂಲಕ ಸಾಕಾರ

ಸಾರಾಂಶ

ಏಳು, ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು ಎನ್ನುವುದು ವಿವೇಕಾನಂದರ (Vivekananda) ಪ್ರಮುಖ ವಾಣಿ. ಈ ವಾಕ್ಯವೇ ಮೋದಿಯವರನ್ನು ಆರಂಭದಿಂದ ಇಲ್ಲಿಯ ತನಕ ನಡೆಸಿಕೊಂಡು ಬಂದಿದೆ ಎನ್ನಬಹುದು. 

ಒಂದು ಕಲ್ಪನೆಯನ್ನು ನಿಗದಿಪಡಿಸಿ. ಆ ಒಂದು ಕಲ್ಪನೆಯನ್ನೇ ನಿಮ್ಮ ಜೀವನವನ್ನಾಗಿಸಿ. ಅದನ್ನೇ ಕನಸು ಕಾಣಿ, ಅದನ್ನೇ ಯೋಚಿಸಿ ಮತ್ತು ಅದನ್ನೇ ಬದುಕಿ ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು (Vivekananda) ಹೇಳಿದ್ದನ್ನು ತಮ್ಮ ಜೀವನದಲ್ಲಿ ಯಥಾವತ್ತಾಗಿ ಅಳವಡಿಸಿದ ವ್ಯಕ್ತಿ ಯಾರೆಂದರೆ ಅದು ಪ್ರಧಾನಿ ನರೇಂದ್ರ ದಾಮೋದರದಾಸ ಮೋದಿ (Narendra Modi) ಎಂದು ನಾನು ಎದೆತಟ್ಟಿ ಹೇಳಬಲ್ಲೆ.

ಈ ದೇಶ ಭಾರತವನ್ನು ವಿಶ್ವಗುರು ಮಾಡಬೇಕೆನ್ನುವ ಕಲ್ಪನೆ ಮತ್ತು ಅದನ್ನೇ ಕನಸು ಕಾಣುತ್ತಾ, ಅದನ್ನೇ ಯೋಚಿಸುತ್ತಾ ಮತ್ತು ಅದನ್ನೇ ಬದುಕಿನ ಗುರಿಯಾಗಿರಿಸಿದ ಇಬ್ಬರು ಮಹಾನ್‌ ವ್ಯಕ್ತಿಗಳಲ್ಲಿ ಒಬ್ಬರು ಧಾರ್ಮಿಕ ಸಂತ ನರೇಂದ್ರ ಅಥವಾ ವಿವೇಕಾನಂದರು ಇನ್ನೊಬ್ಬರು ರಾಜಕೀಯ ಸಂತ ನರೇಂದ್ರ ಮೋದಿ.

ರಾಷ್ಟ್ರೀಯ ಯುವ ದಿನವನಾದ ಇವತ್ತು ಮತ್ತು ಸ್ವತಂತ್ರ ಭಾರತದ 75ನೇ ಸಂಭ್ರಮವನ್ನು ನಾವು ಆಚರಿಸುತ್ತಿರುವ ಈ ವರ್ಷದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಮೋದಿಯವರ ಕಲ್ಪನೆಗಳು ಭಾರತದ ಮೆದುಳು ಮತ್ತು ಹೃದಯಗಳಂತೆ ಕೆಲಸ ಮಾಡುತ್ತಿವೆ ಎನ್ನುವುದರಲ್ಲಿ ನನಗೆ ಯಾವ ಅತಿಶಯೋಕ್ತಿಯೂ ಕಾಣಿಸುತ್ತಿಲ್ಲ. ಹೇಗೆ ಸ್ವಾಮಿ ವಿವೇಕಾನಂದರು ಹೇಳಿದ ಒಂದೊಂದು ಸುಭಾಷಿತ ಕೂಡ ಮೋದಿಯವರ ಬಾಳಿನ ಒಂದೊಂದು ಅಧ್ಯಾಯವಾಗಿ ಅದು ಈ ದೇಶದ ಹಿತಕ್ಕೆ ಅರ್ಪಣೆಯಾಗುತ್ತಿದೆ ಎನ್ನುವುದನ್ನು ನೋಡಬಹುದು.

National Youth Day : ಜಗತ್ತಿನಲ್ಲೇ ಭಾರತ ಶಕ್ತಿಯ ಉತ್ತುಂಗಕ್ಕೇರಲಿದೆ, ವಿವೇಕಾನಂದರ ಭವಿಷ್ಯ ನಿಜವಾಗಿಸೋಣ!

ಗುರಿ ಮುಟ್ಟುವತನಕ ನಿಲ್ಲದಿರು

ಏಳು, ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು ಎನ್ನುವುದು ವಿವೇಕಾನಂದರ ಪ್ರಮುಖ ವಾಣಿ. ಈ ವಾಕ್ಯವೇ ಮೋದಿಯವರನ್ನು ಆರಂಭದಿಂದ ಇಲ್ಲಿಯ ತನಕ ನಡೆಸಿಕೊಂಡು ಬಂದಿದೆ ಎನ್ನಬಹುದು. ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲಿ ನಾವು ಯಾವತ್ತೂ ನೆನಪಿನಲ್ಲಿ ಇಡಲೇಬೇಕಾದ ಮೈಲಿಗಲ್ಲು ಎಂದರೆ ಕಾಶ್ಮೀರಕ್ಕೆ ಕೊಟ್ಟವಿಶೇಷ ಸ್ಥಾನಮಾನ ಆರ್ಟಿಕಲ್ 370 ನಿಷೇಧ ಮಾಡಿರುವುದು. ಇಂತಹ ಒಂದು ಧೈರ್ಯವನ್ನು ಮಾಡಲು ಯಾರೂ ಮುಂದಾಗಿರಲಿಲ್ಲ. ಎಷ್ಟೋ ಸರ್ಕಾರಗಳು ಗುರಿ ಮುಟ್ಟುವುದು ಬಿಡಿ.

ಈ ವಿಷಯದಲ್ಲಿ ಎದ್ದೇಳಲು ತಯಾರಿರಲೇ ಇಲ್ಲ. ಆದರೆ ಮೋದಿ ಅದನ್ನು ಮಾಡುವ ತನಕ ವಿರಮಿಸಲೇ ಇಲ್ಲ. 2019, ಆಗಸ್ಟ್‌ 6ರಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಇದೊಂದು ಐತಿಹಾಸಿಕ ಮೈಲಿಗಲ್ಲಾಗಿ ಭಾರತದ ಇತಿಹಾಸದಲ್ಲಿ ದಾಖಲಾಗುವಂತಾಯಿತು. ಈಗ ಜಮ್ಮು-ಕಾಶ್ಮೀರ ಅಭಿವೃದ್ಧಿಯತ್ತ ಮುಖ ಮಾಡಿದೆ. ಅಲ್ಲಿ ಭೂಮಿ ಖರೀದಿಸಲು, ಅಭಿವೃದ್ಧಿ ಮಾಡಲು, ಉದ್ಯೋಗಾವಕಾಶ ಸೃಷ್ಟಿಸಲು ಅವಕಾಶ ಮಾಡಲಾಗಿದೆ. ವಿವೇಕಾನಂದರ ಸುಭಾಷಿತ ಮೋದಿಯವರ ಮೂಲಕ ಇಲ್ಲಿ ಗುರಿ ತಲುಪಿದೆ.

‘ಗಗನಕ್ಕೆ ತಲುಪಿದ’ ಸಾಹಸ

ವಿವೇಕಾನಂದರ ಇನ್ನೊಂದು ಸುಭಾಷಿತವನ್ನು ಮೋದಿ ತಮ್ಮ ಜೀವನದಲ್ಲಿ ಅಳವಡಿಸಿ ತೋರಿಸಿದ್ದಾರೆ. ಈ ಜಗತ್ತಿನಲ್ಲಿ ಇರುವ ಎಲ್ಲಾ ಶಕ್ತಿಗಳು ನಮ್ಮವೇ ಆಗಿವೆ. ಆದರೆ ನಾವು ನಮ್ಮ ಹಸ್ತವನ್ನು ಕಣ್ಣಿಗೆ ಅಡ್ಡವಿಟ್ಟು ಕತ್ತಲೆ ಎಂದು ಅಳುತ್ತಾ ಕುಳಿತಿದ್ದೇವೆ ಎಂದು ವಿವೇಕಾನಂದರು ಹೇಳಿದ್ದರು. ಮೋದಿಯವರು ಪ್ರಧಾನಿಯಾದ ನಂತರ ಜಗತ್ತಿನ ಶಕ್ತಿಗಳನ್ನು ಭಾರತ ಬಳಸುವಂತೆ ಮಾಡಿಕೊಂಡರು. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಶ್ರಮ ಮತ್ತು ಮೋದಿಯವರ ದೂರದೃಷ್ಟಿಯಿಂದ ಚಂದ್ರಯಾನ-2 ಜಿಎಸ್‌ಎಲ್ ಎಂಕೆ 111 ರಾಕೆಟ್‌ ಯಶಸ್ವಿಯಾಗಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಸೆಂಟರ್‌ನಿಂದ ರವಾನೆಯಾಯಿತು.

2019, ಮಾ.27ರಂದು ಮಿಶನ್‌ ಶಕ್ತಿಯನ್ನು ಲಾಂಚ್‌ ಮಾಡಲಾಯಿತು. ಇದು ಬಾಹ್ಯಕಾಶ ಯೋಜನೆಯ ಮತ್ತೊಂದು ಮಹತ್ತರ ಮೈಲಿಗಲ್ಲು. 2019ರ ಫೆಬ್ರವರಿಯಲ್ಲಿ ಲಘು ಗಗನನೌಕೆ ತೇಜಸ್‌ ಯಶಸ್ವಿಯಾಗಿ ಪರೀಕ್ಷೆಗೆ ಒಳಪಟ್ಟು ಭಾರತದ ವಾಯುಸೇನೆಗೆ ಸೇರ್ಪಡೆಗೊಂಡು ಸೇನೆಯ ಶಕ್ತಿಯನ್ನು ವೃದ್ಧಿಸಿತು. ಇದೆಲ್ಲವನ್ನು ಮೋದಿ ಸಾಧ್ಯವಾಗಿಸಿದ್ದರು. ಅವರು ಕಣ್ಣಿನ ಎದುರು ಕತ್ತಲು ಎಂದು ಕೂರಲಿಲ್ಲ. ಇಚ್ಛಾಶಕ್ತಿ ಮತ್ತು ವಿಜ್ಞಾನಿಗಳಿಗೆ ಬೆಂಬಲವಾಗಿ ನಿಂತರು. ನಡೆದದ್ದು ಇತಿಹಾಸ.

ಸಂಬಂಧಗಳಿಗೆ ಮೋದಿ ಪ್ರಾಮುಖ್ಯತೆ

ಸ್ವಾಮಿ ವಿವೇಕಾನಂದರು ಹೇಳಿದ ಇನ್ನೊಂದು ಸುಭಾಷಿತವನ್ನು ಇಲ್ಲಿ ಉಲ್ಲೇಖ ಮಾಡಲೇಬೇಕು. ಬದುಕಿಗಿಂತ ಜೀವನದಲ್ಲಿ ಸಂಬಂಧಗಳು ಮುಖ್ಯ. ಆದರೆ ಆ ಸಂಬಂಧಗಳಲ್ಲಿ ಜೀವ ಇದೆಯಾ ಎನ್ನುವುದನ್ನು ಮೊದಲು ನೋಡಬೇಕು ಎಂದು ಹೇಳಿದ್ದರು. ಸ್ವತಂತ್ರ ಭಾರತದಲ್ಲಿ ಏನಾಗಿತ್ತು ಎಂದರೆ ಒಂದು ಸಮುದಾಯದಲ್ಲಿ ಸಂಬಂಧಗಳಿಗೆ ಅರ್ಥ ಎಂಬುದು ಇರಲಿಲ್ಲ. ಮುಸಲ್ಮಾನ ಮಹಿಳೆಯರು ವೈವಾಹಿಕ ಜೀವನದಲ್ಲಿ ತ್ರಿವಳಿ ತಲಾಖ್‌ನಿಂದ ಅಭದ್ರತೆಗೆ ಒಳಗಾಗಿದ್ದರು. ತಮ್ಮ ಪತಿ ಯಾವಾಗ ಮೂರು ಬಾರಿ ತಲಾಖ್‌ ಹೇಳುವ ಮೂಲಕ ತಮಗೆ ವಿಚ್ಛೇದನ ಕೊಡಬಹುದು ಎಂದು ಆತಂಕದಿಂದಲೇ ಜೀವನ ಸಾಗಿಸಬೇಕಾಗಿತ್ತು.

ವಿವೇಕಾನಂದರ 1893 ರ ಚಿಕಾಗೋ ಭಾಷಣಕ್ಕೆ 128 ವರ್ಷ: 9/11 ದಾಳಿಗಳಿಗೂ ಪರಿಹಾರಗಳಿವೆ ಎಂದ ಮೋದಿ!

ಮೋದಿಯವರ ಸರ್ಕಾರ ಬಂದ ಬಳಿಕ ಆ ಕಂಟಕಕ್ಕೆ ಪರಿಹಾರ ನೀಡಲಾಗಿದೆ. ತ್ರಿವಳಿ ತಲಾಖ್‌ ನಿಷೇಧಿಸಲಾಗಿದೆ. ಈ ಮೂಲಕ ಮುಸಲ್ಮಾನ ಸಮುದಾಯದ ಕೋಟ್ಯಂತರ ಮಹಿಳೆಯರಿಗೆ ಸಮಾಧಾನವಾಗಿದೆ. ಇದು ಯಾವತ್ತೋ ಆಗಬೇಕಿತ್ತು. ಆದರೆ ಹಿಂದಿನ ಸರ್ಕಾರಗಳು ಮತಬ್ಯಾಂಕಿನ ಕಾರಣದಿಂದ ಇಂತಹ ವಿಷಯದಲ್ಲಿ ಕೈಹಾಕಿರಲಿಲ್ಲ. ಆದರೆ ಮೋದಿಯವರಿಗೆ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮುಸ್ಲಿಂ ಮಹಿಳೆಯರ ಜೀವನದ ಭದ್ರತೆ ಮುಖ್ಯವಾಗಿತ್ತು. ಬದುಕಿನಲ್ಲಿ ಸಂಬಂಧಗಳಿಗೆ ಪ್ರಾಮುಖ್ಯತೆ ಕೊಟ್ಟಶ್ರೇಯಸ್ಸು ಮೋದಿಯವರದ್ದು.

ಅತಿದೊಡ್ಡ ಆರ್ಥಿಕ ಸುಧಾರಣೆ

ಸ್ವಾಮಿ ವಿವೇಕಾನಂದರು, ನಾವು ಏನಾಗಿದ್ದೇವೋ ಅದು ನಮ್ಮ ಯೋಚನೆಗಳಿಂದ ಆಗಿದ್ದೇವೆ. ನಮ್ಮ ಯೋಚನೆಗಳ ಮೇಲೆ ನಮಗೆ ನಿಯಂತ್ರಣವಿರಬೇಕು. ಹೇಳುವ ಶಬ್ದಗಳಿಗಿಂತ ಯೋಚನೆಗಳು ಮುಖ್ಯ ಮತ್ತು ಅವು ದೂರ ನಮ್ಮನ್ನು ಕರೆದುಕೊಂಡು ಹೋಗುತ್ತವೆ ಎಂದಿದ್ದರು. ಮೋದಿಯವರು ಈ ಮೇಲಿನ ಸುಭಾಷಿತವನ್ನು ವ್ಯಾಪಾರಿ ವಲಯದಲ್ಲಿ ಅಳವಡಿಸಲು ಮುಂದಾದದ್ದು ಆರ್ಥಿಕ ವ್ಯವಸ್ಥೆಯ ಅತಿ ದೊಡ್ಡ ಸ್ಥಿತ್ಯಂತರ ಎನ್ನಬಹುದು. ಈ ದೇಶದಲ್ಲಿ ಬೇರೆ ಬೇರೆ ಕಾರಣಗಳಿಂದ ತೆರಿಗೆಗಳ ಹಣ ಸೋರಿಕೆಯಾಗುತ್ತಿತ್ತು. ತೆರಿಗೆ ವ್ಯವಸ್ಥೆ ಜಟಿಲವಾಗಿತ್ತು.

ಅದನ್ನು ಸರಳೀಕರಿಸುವ ವ್ಯವಸ್ಥೆ ಅಗತ್ಯವಾಗಿತ್ತು. ನಿಜವಾಗಿ ನೋಡಿದರೆ ಉದ್ಯಮಿಗಳು ತೆರಿಗೆಯಲ್ಲಿ ಮೋಸ ಮಾಡಲು ಬಯಸುತ್ತಿರಲಿಲ್ಲ. ಆದರೆ ಇಲ್ಲಿನ ವ್ಯವಸ್ಥೆ ಅವರ ಹಾದಿ ತಪ್ಪಿಸಿತ್ತು. ಈ ಮೂಲಕ ಸಿರಿವಂತರನ್ನು ಕೂಡ ಸಂಶಯದಿಂದ ನೋಡುವ ಹಾಗೆ ಪರಿಸ್ಥಿತಿ ಬದಲಾಗಿತ್ತು. ಮೋದಿಯವರು ಈ ಯೋಚನೆಯನ್ನೇ ಬದಲಾಯಿಸಲು ಮುಂದಾದರು. ಉದ್ಯಮಿಗಳು ಈ ದೇಶದ ಅಭಿವೃದ್ಧಿಯ ನಿರ್ಮಾತೃರು ಎಂದು ಅವರಿಗೂ ಗೌರವ ನೀಡಿದರು. ಅದಕ್ಕೆ ಅನುಗುಣವಾಗಿ ಅವರು ತಂದದ್ದೇ ಸರಕು ಮತ್ತು ಸೇವಾ ತೆರಿಗೆ.

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಮೈಲಿಗಲ್ಲು ಎಂದೇ ಹೇಳಲಾಗುವ ಸರಕು ಮತ್ತು ಸೇವಾ ತೆರಿಗೆ (GST) ಅನುಷ್ಠಾನಗೊಳಿಸುವ ಮೂಲಕ ವ್ಯಾಪಾರಿಗಳಲ್ಲಿ, ಉದ್ಯಮಿಗಳಲ್ಲಿ ಹೊಸ ಮನ್ವಂತರದ ಆರಂಭಕ್ಕೆ ಕಾರಣರಾದರು. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕದ ಮಹತ್ತರ ತೆರಿಗೆಗಳು ಸಮ್ಮಿಳಿತಗೊಂಡು ಅನುಕೂಲವಾಗಿದೆ. ಇದರಿಂದ ಉದ್ಯಮಿಗಳು ನಿರಾಳರಾಗಿದ್ದಾರೆ. ಇನ್ನು 2016ರಲ್ಲಿ ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮೌಲ್ಯದ ನೋಟುಗಳನ್ನು ಹಿಂತೆಗೆದುಕೊಂಡದ್ದು ನವಭಾರತದ ಇತಿಹಾಸದಲ್ಲಿ ಬಹಳ ಧೀರ ನಡೆ ಎನ್ನಬಹುದು. ಕಪ್ಪು ಹಣ, ಭಯೋತ್ಪಾದನೆ ಸಹಿತ ಅನೇಕ ದೇಶವಿರೋಧಿ ಕೃತ್ಯಗಳು ಇದರಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡವು.

- ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ