
ಲಂಡನ್/ನವದೆಹಲಿ (ಜ. 12): ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಿರುವ ಹಾಗೂ ಕಾಂಗ್ರೆಸ್ ಪಕ್ಷದ ಜತೆ ನಂಟು ಹೊಂದಿದ್ದಾನೆ ಎನ್ನಲಾದ ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿ (Sanjay Bhandari), ತನಗೆ ನೀಡಬೇಕಿರುವ ‘ಬಾಕಿ ಶುಲ್ಕ’ ನೀಡಬೇಕು ಎಂದು ಆಗ್ರಹಿಸಿ ಫ್ರೆಂಚ್ ಕಂಪನಿ ‘ಥೇಲ್ಸ್ ಗ್ರೂಪ್’ (Thales) ವಿರುದ್ಧ ಫ್ರಾನ್ಸ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾನೆ. ಇದು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2008ರಲ್ಲಿ ವರ್ಷದ ಹಿಂದೆ ಯುಪಿಎ ಸರ್ಕಾರವಿದ್ದಾಗ (UPA Government) ಫ್ರಾನ್ಸ್ ನಿರ್ಮಿತ ಹಳೆಯ ‘ಮಿರಾಜ್-2000’ ಯುದ್ಧವಿಮಾನಗಳನ್ನು ಆಧುನೀಕರಣಗೊಳಿಸಲಾಗಿತ್ತು. ಆಧುನೀಕರಣಕ್ಕಾಗಿ ಯುಪಿಎ ಸರ್ಕಾರವು ಥೇಲ್ಸ್ ಗ್ರೂಪ್ ಜತೆ 2.4 ಶತಕೋಟಿ ಯೂರೋ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಕುದುರಲು ಥೇಲ್ಸ್ ಗ್ರೂಪ್‌ಗೆ ಭಂಡಾರಿ ಸಹಾಯ ಮಾಡಿದ್ದ ಎನ್ನಲಾಗಿದೆ.
ಈಗ ಇದೇ ವಿವಾದದ ಮೂಲವಾಗಿದೆ. ಒಪ್ಪಂದ ಏರ್ಪಡಲು ತನಗೆ ಥೇಲ್ಸ್ ಗ್ರೂಪ್ 20 ದಶಲಕ್ಷ ಯೂರೋ (150 ಕೋಟಿ ರು.) ‘ಸಲಹಾ ಶುಲ್ಕ’ (ಕಮಿಶನ್) ನೀಡಲು ಒಪ್ಪಿಕೊಂಡಿತ್ತು. ಆದರೆ ಅರ್ಧ ಹಣ ಮಾತ್ರ ನೀಡಿ ಇನ್ನರ್ಧ ಹಣ ನೀಡಿಲ್ಲ. ಹೀಗಾಗಿ ಪೂರ್ತಿ ಶುಲ್ಕವನ್ನು ಕಂಪನಿ ನೀಡಬೇಕು ಎಂದು ಆಗ್ರಹಿಸಿ ಫ್ರೆಂಚ್ ಕೋರ್ಟ್‌ಗೆ ಭಂಡಾರಿ ಅರ್ಜಿ ಸಲ್ಲಿಸಿದ್ದಾನೆ.ಆದರೆ ಈತನ ವಾದವನ್ನು ಥೇಲ್ಸ್ ಗ್ರೂಪ್ ನಿರಾಕರಿಸಿದೆ. ಇಂಥ ಯಾವುದೇ ಒಪ್ಪಂದವನ್ನು ಭಂಡಾರಿ ಜತೆ ಮಾಡಿಕೊಂಡಿರಲಿಲ್ಲ ಎಂದಿದೆ.
ಇದನ್ನೂ ಓದಿ: Nand Kumar Baghel : ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಮುಖ್ಯಮಂತ್ರಿಯ ತಂದೆ!
ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಕೇಸುಗಳಲ್ಲಿ ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಿರುವ 59 ವರ್ಷದ ಭಂಡಾರಿ ಈಗ ಲಂಡನ್‌ನಲ್ಲಿ ಜಾಮೀನಿನ ಮೇಲಿದ್ದಾನೆ. ಆತನ ವಿರುದ್ಧದ ಗಡೀಪಾರು ವಿಚಾರಣೆ ಫೆ.21ರಂದು ಲಂಡನ್‌ನಲ್ಲಿ ನಡೆಯಬೇಕಿದೆ. ಆದರೆ, ‘ನಾನು ಕಾಂಗ್ರೆಸ್ ಜತೆ ಉತ್ತಮ ಸಂಬಂಧ ಹೊಂದಿದ್ದ ಕಾರಣ, ಬಿಜೆಪಿ ಸರ್ಕಾರವು ತನ್ನನ್ನು ಟಾರ್ಗೆಟ್ ಮಾಡುತ್ತಿದೆ’ ಎಂದು ಭಂಡಾರಿ ವಾದಿಸಿದ್ದು, ಲಂಡನ್‌ಲ್ಲೇ ರಾಜಾಶ್ರಯ ಕೋರಿದ್ದಾನೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ:
ಭಂಡಾರಿ ಹೂಡಿದ ದಾವೆಯನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ‘ರಕ್ಷಣಾ ವ್ಯವಹಾರಗಳಲ್ಲಿ ಕಾಂಗ್ರೆಸ್ ಪಕ್ಷ ಕಮಿಶನ್ ಹಾಗೂ ಲಂಚವನ್ನು ಪ್ರಚೋದಿಸಿತ್ತು ಎಂಬುದು ಸಾಬೀತಾಗಿದೆ’ ಎಂದಿದೆ.‘ಯುಪಿಎ ಅವಧಿಯಲ್ಲಿ ನಡೆದ ಈ ವ್ಯವಹಾರದಲ್ಲಿ ಭಂಡಾರಿಗೆ 170 ಕೋಟಿ ರು. ಕಿಕ್‌ಬ್ಯಾಕ್ ಬರಬೇಕಿತ್ತು. ಆದರೆ 75 ಕೋಟಿ ರು. ಮಾತ್ರ ಆತನಿಗೆ ಸಿಕ್ಕಿದೆ. ಅದಕ್ಕೇ ಆತ ದಾವೆ ಹೂಡಿದ್ದಾನೆ. ಇಂಥವನ ಗಡೀಪಾರಿಗೆ ಈಗ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ಭಂಡಾರಿ ದಾವೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ