
ಕನ್ಯಾಕುಮಾರಿ(ಮೇ.30): ಕಳೆದ 2 ತಿಂಗಳಿನಿಂದ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ದೇಶದ ಉದ್ದಗಲಕ್ಕೂ ಎಡೆಬಿಡದೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ ಮೂರು ದಿನಗಳ ಕಾಲ ಧ್ಯಾನದ ಮೊರೆ ಹೋಗಲಿದ್ದಾರೆ.
ಮೋದಿ, ದೇಶದ ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 3 ದಿನ ಧ್ಯಾನ ನಡೆಸಲಿದ್ದಾರೆ. ಅವರು ಸುಮಾರು 45 ತಾಸು ಕಾಲ ಸ್ಮಾರಕದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗಿದ್ದು, ಅವರ ಧ್ಯಾನಕ್ಕೆ ಹಾಗೂ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೆ, 2000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇಂಡಿಯಾ ಕೂಟಕ್ಕೆ ಬಹುಮತ ಬರುವ ಸಾಧ್ಯತೆ ಇದೆ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ
ಜೂ.1ರ ಕೊನೆಯ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ. ಸಂಜೆ 5 ಗಂಟೆ ವೇಳೆಗೆ ಮೋದಿ ಕನ್ಯಾಕುಮಾರಿಗೆ ಆಗಮಿಸಿ ಧ್ಯಾನಮಂಟಪದಲ್ಲಿ ಧ್ಯಾನ ನಡೆಸಲಿದ್ದಾರೆ. ಜೂ1ರಂದು ಮಧ್ಯಾಹ್ನ 3 ಗಂಟೆಗೆ ತೆರಳಲಿದ್ದಾರೆ. ಅವರ ಭೇಟಿಯ ಅವಧಿ 45 ಗಂಟೆಗಳಾಗಿವೆ ಎಂದು ಮೂಲಗಳು ಹೇಳಿವೆ.
ಸಕಲ ಸಿದ್ಧತೆ, ಭದ್ರತೆ:
ಮೋದಿ ಭೇಟಿ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕನ್ಯಾಕುಮಾರಿಯ ರಾಕ್ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮೋದಿ ಇರುವ ವೇಳೆ ವಿವೇಕಾನಂದ ಶಿಲಾ ಸ್ಮಾರಕದ ಸುತ್ತಮುತ್ತ ಖಾಸಗಿ ಬೋಟ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ ಪ್ರವಾಸಿಗರ ಭೇಟಿಗೂ ನಿಷೇಧ ಇರಲಿದೆ.
2019ರ ಚುನಾವಣಾ ಪ್ರಚಾರದ ನಂತರ ಕೇದಾರನಾಥ ಗುಹೆಯಲ್ಲಿ ಇದೇ ರೀತಿ ಮೋದಿ ಧ್ಯಾನ ಮಾಡಿದ್ದರು.
3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಬಿಜೆಪಿ ಕಾರ್ಪರೇಟರ್‌ಗಳು ಅನರ್ಹ: ಮೋದಿ ರೂಪಿಸಿದ್ದ ಕಾನೂನು..!
ಡಿಎಂಕೆ ವಿರೋಧ:
ಈ ನಡುವೆ ಮೋದಿ ಧ್ಯಾನಕ್ಕೆ ಅವಕಾಶ ನೀಡದಂತೆ ಕನ್ಯಾಕುಮಾರಿ ಜಿಲ್ಲಾಧಿಕಾರಿಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮನವಿ ಮಾಡಿದೆ. ಇದು ದೇಶಿ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸಮಯ. ಹೀಗಾಗಿ ಮೋದಿ ಧ್ಯಾನಕ್ಕೆ ಅವಕಾಶ ನೀಡದಂತೆ ಅದು ಮನವಿ ಮಾಡಿದೆ.
ಇನ್ನೊಂದೆಡೆ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಧಾನಿ ಮೋದಿ ಅವರ ಕನ್ಯಾಕುಮಾರಿ ಧ್ಯಾನ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು ಎಂದು ಕಾಂಗ್ರೆಸ್‌ನ ತಮಿಳುನಾಡು ಘಟಕ ಆಗ್ರಹಿಸಿದೆ. ಮತ್ತೊಂದೆಡೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ‘ಮೋದಿ ಅವರ ಧ್ಯಾನವನ್ನು ಟೀವಿಯಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಟೀವಿಯಲ್ಲಿ ಪ್ರಸಾರ ಆದರೆ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ