ಕ್ರಾಂತದರ್ಶನದ ಪ್ರತಿಭೆಯಾಗಿದ್ದ ವಿವೇಕಾನಂದರ 170ನೇ ಜನ್ಮದಿನ ಇದು. ಈ ಸಂದರ್ಭದಲ್ಲಿ ಕಳೆದ 8 ವರ್ಷಗಳಲ್ಲಿ ಭಾರತವು ಕಾಣುತ್ತಿರುವ ನವೋತ್ಕರ್ಷದ ಒಂದು ಸುಂದರ ಚಿತ್ರವನ್ನು ಕಣ್ಮುಂದೆ ತಂದುಕೊಳ್ಳುವುದು ಸೂಕ್ತವಾಗಿದೆ.
ಬೆಂಗಳೂರು(ಜ.12): ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ. ಭಾರತದ ಪುನರುತ್ಥಾನದ ಅಧ್ವರ್ಯುಗಳಲ್ಲಿ ಒಬ್ಬರೆಂದು ಮತ್ತು ಹಿಂದೂ ಧರ್ಮ, ಸಂಸ್ಕೃತಿಗಳಿಗೆ ನವನವೋನ್ಮೇಷವಾದ ಸ್ಪರ್ಶವನ್ನು ನೀಡಿದ ವೀರ ಸನ್ಯಾಸಿ ಎಂದು ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಅನುಪಮ ಸಾಧಕರು ಅವರು. ಅವರ ಜನ್ಮದಿನವನ್ನು ದೇಶದಾದ್ಯಂತ ಯುವ ಜನೋತ್ಸವವಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಏಕೆಂದರೆ, ದೇಶವನ್ನು ಮುನ್ನಡೆಸಲು ಅಗತ್ಯವಾಗಿ ಬೇಕಾದ ಸ್ಫೂರ್ತಿ, ಪ್ರೇರಣೆ, ಉತ್ಸಾಹಶಕ್ತಿಗಳನ್ನು ಪಡೆದುಕೊಳ್ಳಲು ಒಂದು ಒಳ್ಳೆಯ ನಿಮಿತ್ತವಾಗಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಕ್ರಾಂತದರ್ಶನದ ಪ್ರತಿಭೆಯಾಗಿದ್ದ ವಿವೇಕಾನಂದರ 170ನೇ ಜನ್ಮದಿನ ಇದು. ಈ ಸಂದರ್ಭದಲ್ಲಿ ಕಳೆದ 8 ವರ್ಷಗಳಲ್ಲಿ ಭಾರತವು ಕಾಣುತ್ತಿರುವ ನವೋತ್ಕರ್ಷದ ಒಂದು ಸುಂದರ ಚಿತ್ರವನ್ನು ಕಣ್ಮುಂದೆ ತಂದುಕೊಳ್ಳುವುದು ಸೂಕ್ತವಾಗಿದೆ.
ಭಾರತದ ಹಿರಿಮೆ-ಗರಿಮೆ ನೆನೆಯುವುದು ಅಗತ್ಯ
ಭಾರತವೆನ್ನುವ ಕಲ್ಪನೆಯು ಕಾಲಾತೀತವಾದುದು. ಜಂಬೂದ್ವೀಪ, ಭಾರತವರ್ಷ, ಭರತಖಂಡ ಎನ್ನುವ ಕಲ್ಪನೆಗಳು ಸಮಾಜದಲ್ಲಿದ್ದ ಕಾಲದಿಂದ 19ನೇ ಶತಮಾನದ ಉತ್ತರಾರ್ಧದಲ್ಲಿ ಮೈದಾಳಿದ ನೇಷನ್ ಸ್ಟೇಟ್‌ನ ಪರಿಕಲ್ಪನೆಯವರೆಗೂ ಇದರ ಹರಹು ವಿಸ್ತಾರವಾಗಿದೆ. ಹೀಗಾಗಿ, ಭಾರತದ ಹಿರಿಮೆ, ಗರಿಮೆಗಳನ್ನು ಭೌಗೋಳಿಕ ವಿಸ್ತಾರದ ಜತೆಜತೆಯಲ್ಲೇ ಕಾಲದ ವೈಶಾಲ್ಯದಲ್ಲೂ ಕಣ್ಮುಂದೆ ತಂದುಕೊಳ್ಳುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಭಾರತದಲ್ಲಿ ಅಂತರ್ಗತವಾಗಿರುವ ವೇದ, ವೇದಾಂತವಾಗಲಿ, ಉಪನಿಷತ್ ತತ್ತ$್ವವಾಗಲಿ, ಮಹೋನ್ನತ ವಿಚಾರಗಳಾಗಲಿ ಸಮಷ್ಟಿಹಿತದ ಕಲ್ಪನೆಯಾಗಲಿ ಭೂತ, ವರ್ತಮಾನ, ಭವಿಷ್ಯತ್‌ಗಳನ್ನು ಏಕತ್ರವಾಗಿ ಪರಿಭಾವಿಸುವ ನೆಲದ ಅಪೂರ್ವ ಗುಣದ ಶಕ್ತಿಯಾಗಲಿ ಗೊತ್ತಾಗುವುದಿಲ್ಲ. ಸಾವಿರಾರು ಜಾತಿ, ಭಾಷೆ, ಲೆಕ್ಕವಿಲ್ಲದಷ್ಟುನಂಬಿಕೆ ಇತ್ಯಾದಿಗಳನ್ನು ಒಡಲಲ್ಲಿ ಪೋಷಿಸಿಕೊಂಡು ದೇಶವನ್ನು ಸಮಭಾವದಿಂದ ಪೋಣಿಸಿರುವ ಜೀವನಸತ್ಯ ಯಾವುದೆಂದು ತಿಳಿಯುವುದಿಲ್ಲ.
National Youth Day 2023: ಪ್ರಧಾನಿ ಮೋದಿಗಾಗಿ ವಿಶೇಷ ಕಲಾಕೃತಿ ತಯಾರಿಸಿದ ಧಾರವಾಡದ ಯುವ ಕಲಾವಿದ
ಕನ್ನಡ ಸಾಹಿತ್ಯದ ಮೇಲೆ ವಿವೇಕಾನಂದರ ಪ್ರಭಾವ
ಅಂದಂತೆ, ವಿವೇಕಾನಂದರ ವಿಚಾರಗಳು ಕನ್ನಡ ನೆಲದ ಮೇಲೆ ಗಾಢ ಪ್ರಭಾವ ಬೀರಿವೆ. ಬೇಂದ್ರೆ, ಕುವೆಂಪು ಅವರ ಸಾಹಿತ್ಯ ಸೃಷ್ಟಿಯನ್ನು ನೋಡಿದರೆ ಇದು ಗೊತ್ತಾಗುತ್ತದೆ. ಕುವೆಂಪು ಅವರಂತೂ ತಮ್ಮ ಚಾಗಿಯ ಹಾಡು ಕವಿತೆಯಲ್ಲಿ ‘ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು’ ಎಂದು ಉದ್ಗರಿಸಿದ್ದಾರೆ. ಅವರ ವ್ಯಕ್ತಿತ್ವವನ್ನು ರೂಪಿಸಿದ ಚೈತನ್ಯಗಳಲ್ಲಿ ರಾಮಕೃಷ್ಣ ಪರಮಹಂಸರಿಗೆ ಇರುವಷ್ಟೇ ಸ್ಥಾನವು ಸ್ವಾಮಿ ವಿವೇಕಾನಂದರಿಗೂ ಇದೆ.
ವಿವೇಕರ ಕನಸ ನನಸು ಮಾಡಲು ಮೋದಿ ಪ್ರಯತ್ನ
ವಿವೇಕಾನಂದರು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತದ ಕನಸನ್ನು ಕಂಡವರು. ಹಾಗೆಯೇ ನಮ್ಮ ಧರ್ಮ, ತತ್ವಜ್ಞಾನ ಮತ್ತು ಅಧ್ಯಾತ್ಮಗಳನ್ನು ದೇಶದ ಆಧಾರಸ್ತಂಭಗಳೆಂದು ಸಾರಿದವರು. ಅವರು ಕಂಡ ಕನಸು ಈಗ ಒಂದೂಕಾಲು ಶತಮಾನದ ನಂತರ ನನಸಾಗುತ್ತಿದೆ. ಇದಕ್ಕೆ ಕಾರಣಕರ್ತರಾಗಿರುವವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು. ವಿವೇಕಾನಂದರ ದೇಹಾವಸಾನದ 45 ವರ್ಷಗಳ ನಂತರ ಭಾರತವು ಬ್ರಿಟಿಷರ ಕಪಿಮುಷ್ಟಿಯಿಂದ ವಿಮೋಚನೆ ಕಂಡಿತಷ್ಟೆ. ಆದರೆ, ನಂತರದ 60 ವರ್ಷಗಳ ಕಾಲ ಸದೃಢ ಭಾರತದ ಕನಸನ್ನು ನನಸಾಗಿಸಲು ಯಾವ ಪ್ರಾಮಾಣಿಕ ಪ್ರಯತ್ನವೂ ನಡೆಯಲಿಲ್ಲ. ಇನ್ನೊಂದೆಡೆ, ವಿವೇಕಾನಂದರ ಕಲ್ಪನೆಯ ಭಾರತವನ್ನು ಕಟ್ಟುವ ಕನಸನ್ನು ಕೇಶವ ಬಲಿರಾಂ ಹೆಡಗೇವಾರ್, ಸರ್ದಾರ್ ವಲ್ಲಭಾಯ್ ಪಟೇಲ್, ಶಾಮಪ್ರಸಾದ್ ಮುಖರ್ಜಿ, ವೀರ್ ಸಾವರ್ಕರ್, ಬಾಬಾಸಾಹೇಬ್ ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ದತ್ತೋಪಂತ ಠೇಂಗಡಿ, ಮಾಧವ ಗೋಳ್ವಲ್ಕರ್ ಮುಂತಾದವರು ಕಾಣತೊಡಗಿದರು. ಆದರೆ ಯುಗ ಪರಿವರ್ತನೆಯ ವಿದ್ಯಮಾನಗಳು ಓರ್ವ ಪರಿಪೂರ್ಣ ನಾಯಕನ ಬರುವಿಕೆಗಾಗಿ ಕಾಯುತ್ತಿದ್ದವು. ಭಾರತಕ್ಕೆ ಹೀಗೆ ಸಿಕ್ಕಿರುವುದು ಪ್ರಧಾನಿ ನರೇಂದ್ರ ಮೋದಿ.
ಭಾರತದ ಅಮೃತ ಕಾಲ ಪ್ರಾರಂಭ
ಒಂದು ದೇಶವನ್ನು ಕಟ್ಟುವುದೆಂದರೆ, ಅದು ಹಲವು ಆಯಾಮಗಳ ಮುಂಗಾಣ್ಕೆಯನ್ನು ಬೇಡುವ ಗುರುತರ ಹೊಣೆಗಾರಿಕೆಯ ಯಜ್ಞವಾಗಿದೆ. ಅಂದರೆ, ಒಳಗಿನಿಂದಲೂ ಹೊರಗಿನಿಂದಲೂ ಏಕಕಾಲದಲ್ಲಿ ಭಾರತವನ್ನು ಒಂದು ಮಹೋನ್ನತ ಶಕ್ತಿಯಾಗಿ ಪ್ರತಿಷ್ಠಾಪಿಸುವ ಕೆಲಸ ನಡೆಯಬೇಕಾಗುತ್ತದೆ. ಆಂತರಿಕ ಶಾಂತಿ, ಬಲಶಾಲಿಯಾದ ರಕ್ಷಣಾ ಪಡೆಗಳು, ಭಯೋತ್ಪಾದನೆ ನಿಗ್ರಹ, ಕೈಗಾರಿಕೆ ಮತ್ತು ಆರ್ಥಿಕ ಬೆಳವಣಿಗೆ, ಬಂಡವಾಳ ಆಕರ್ಷಣೆ, ಸಶಕ್ತ ವಿದೇಶಾಂಗ ನೀತಿ, ಜಾಗತಿಕ ಸಮುದಾಯದಲ್ಲಿ ರಾಜತಾಂತ್ರಿಕ ನೈಪುಣ್ಯ, ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಸಮಸ್ಯೆಗಳ ನಿಭಾಯಿಸುವಿಕೆ, ಮೂಲಸೌಕರ್ಯಗಳ ಜಾಲ, ಜನ ಸಮುದಾಯಗಳನ್ನು ಅಭಿವೃದ್ಧಿಯ ಕೇಂದ್ರದಲ್ಲಿ ಪ್ರತಿಷ್ಠಾಪಿಸುವುದು, ರಾಷ್ಟ್ರೀಯ ಜಾಗೃತಿ, ಸಾಮೂಹಿಕ ಹೊಣೆಗಾರಿಕೆಯ ಎಚ್ಚರ, ಜಗತ್ತಿನ ನಾನಾ ದೇಶಗಳಲ್ಲಿ ಚದುರಿರುವ ಅನಿವಾಸಿ ಭಾರತೀಯರನ್ನು ಸಕಾರಾತ್ಮಕವಾಗಿ ನೋಡಬೇಕಾದ ಸಮಕಾಲೀನ ಅಗತ್ಯ ಇವೆಲ್ಲವೂ ಇಲ್ಲಿ ಆಗುವಂತೆ ನೋಡಿಕೊಂಡಿರುವ ಶ್ರೇಯಸ್ಸು ಮೋದಿ ಅವರಿಗೆ ಸಲ್ಲಬೇಕು. ಇಲ್ಲದೆ ಹೋದರೆ, ಸದ್ಯದ ಜಾಗತಿಕ ರಾಜಕಾರಣದಲ್ಲಿ ದೇಶದ ಪ್ರತಿಷ್ಠೆ ಮುಕ್ಕಾಗುತ್ತದೆ. ಮೋದಿ ಅವರು 8 ವರ್ಷಗಳ ಹಿಂದೆ ದೇಶದ ಚುಕ್ಕಾಣಿ ಹಿಡಿದಾಗ ಇದ್ದಿದ್ದು ಪ್ರತಿಕೂಲ ಪರಿಸ್ಥಿತಿಯೊಂದೇ! ಆಗ ದೇಶದ ವರ್ಚಸ್ಸು ಹಾಳಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಆ ಸ್ಥಿತಿಯಿಂದ ದೇಶವನ್ನು ಮೇಲಕ್ಕೆತ್ತಿ, ಕೇವಲ 5-6 ವರ್ಷಗಳಲ್ಲಿ ಆತ್ಮನಿರ್ಭರ ಭಾರತವನ್ನು ಕಟ್ಟುವ ಹೊಂಗನಸನ್ನು ಹಂಚಿಕೊಂಡ ದಿಟ್ಟತನ ಪ್ರಧಾನಿ ಮೋದಿ ಅವರದ್ದಾಗಿದೆ. ಅವರು ಜಾರಿಗೆ ತಂದಿರುವ ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮುಂತಾದ ಮಹತ್ವಾಕಾಂಕ್ಷಿ ಉಪಕ್ರಮಗಳು ಇದನ್ನು ಸಾಧ್ಯವಾಗಿಸಿವೆ. ಹಾಗೆಯೇ, ಕೋವಿಡ್ ಸಾಂಕ್ರಾಮಿಕಕ್ಕೆ ಹೆದರಿ ಇಡೀ ಜಗತ್ತೇ ಸ್ತಬ್ಧವಾಗಿದ್ದಾಗ ಮೋದಿ ಅವರು ಸಾಧ್ಯವಾಗಿಸಿದ ಲಸಿಕಾಕರಣ ಭಾರತದ ಸಾತ್ವಿಕ ಶಕ್ತಿ ಏನೆನ್ನುವುದನ್ನು ತೋರಿಸಿ ಕೊಟ್ಟಿತ್ತು. ಇದರಿಂದ, ಜಗತ್ತಿನ 90ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತದ ಬಾಂಧವ್ಯ ಸುಧಾರಿಸಿತು.
ಭಾರತ ವಿಶ್ವಗುರು ಆಗಲು ಮೋದಿ ಪಣ
ಇಂದು ಭಾರತವು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೋದಿಯವರು ಸದ್ಯಕ್ಕೆ ಐದು ಟ್ರಿಲಿಯನ್ ಡಾಲರ್ ಮೌಲ್ಯದ ಅರ್ಥಿಕತೆಯನ್ನು ಬೆಳೆಸುವ ಗುರಿ ಇಟ್ಟುಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು 25 ವರ್ಷಗಳಲ್ಲಿ ಭಾರತ ನಂ.1 ಆರ್ಥಿಕತೆಯಾಗಲಿದೆ. ಹಿಂದಿನ ಸರ್ಕಾರಗಳ ಪುಕ್ಕಲುತನದಿಂದಾಗಿ ಚೀನಾ ನಮಗಿಂತ ಮುಂದೆ ಸಾಗಿ ಹೋಗಿದೆ ಎನ್ನುವುದು ನಿಜ. ಆದರೆ, ಈಗ ಭಾರತದಲ್ಲಿ ಪ್ರಗತಿಯಲ್ಲಿರುವ ಯೋಜನೆಗಳು ಮತ್ತು ಆಡಳಿತದಲ್ಲಿ ಅನುಸರಿಸುತ್ತಿರುವ ಮಿನಿಮಮ್ ಗೌರ್ನೆನ್ಸ್, ಮ್ಯಾಕ್ಸಿಸಂ ಗೌರ್ನಮೆಂಟ್ ನೀತಿಯಿಂದ ನವಭಾರತ ನಿರ್ಮಾಣದ ಅಮೃತ ಕಾಲ ಈಗ ಆರಂಭವಾಗಿದೆ. ಮೋದಿ ಅವರ ಮೇಲೆ ಜನರ ನಂಬಿಕೆಯನ್ನು ಹುಸಿಗೊಳಿಸಿಲ್ಲ. ಸದಾ ಭಾರತಕ್ಕಾಗಿ ಮಿಡಿಯುವ ಅವರು, ಭಾರತೀಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಾಗೆಯೇ, ಭಾರತವನ್ನು ವಿಶ್ವ ಗುರುವಾಗಿಸಲು ಪಣ ತೊಟ್ಟಿದ್ದು, ದಾಪುಗಾಲಿಡುತ್ತಿದ್ದಾರೆ. ಎಲ್ಲ ರಂಗಗಳಲ್ಲೂ ಜಾಣ್ಮೆಯಿಂದ ಭಾರತದ ಹಿತಾಸಕ್ತಿಗಳನ್ನು ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ, ಭಾರತವನ್ನು ಅವರು ಪ್ರಜಾಸತ್ತೆಯ ಹಿತರಕ್ಷಕ ದೇಶವಾಗಿ ಮುನ್ನೆಲೆಗೆ ತಂದಿದ್ದಾರೆ. ಅವರ ನಾಯಕತ್ವದಲ್ಲಿ ದೇಶ ನೆಮ್ಮದಿಯಿಂದಿದೆ. ಭಾರತ ಮತ್ತು ಭಾರತೀಯರ ನೆಲೆ, ಬೆಲೆಗಳು ಆಕಾಶದೆತ್ತರಲ್ಲಿ ಬೆಳಗುತ್ತಿವೆ. ಜಾಗತಿಕ ಸಮುದಾಯಕ್ಕೆ ಎದುರಾಗುವ ಸಮಸ್ಯೆಗಳಿಗೆ ಭಾರತದ ಬಳಿ ಪರಿಹಾರದ ಮಂತ್ರದಂಡವಿದೆ ಎನ್ನುವುದನ್ನು ಒಪ್ಪಿಕೊಂಡಿವೆ.
National Youth Day ಯುವ ಭಾರತದತ್ತ ಜಗತ್ತಿನ ಭರವಸೆಯ ನೋಟ: ಯುವಜನೋತ್ಸವದಲ್ಲಿ ಮೋದಿ ಮಾತು
ಜಗತ್ತಿನ ಹಲವು ಸಮಸ್ಯೆಗಳಿಗೆ ಭಾರತದ ಬಳಿ ಪರಿಹಾರ
ವಿವೇಕಾನಂದರು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತದ ಕನಸನ್ನು ಕಂಡವರು. ಹಾಗೆಯೇ ನಮ್ಮ ಧರ್ಮ, ತತ್ವಜ್ಞಾನ ಮತ್ತು ಅಧ್ಯಾತ್ಮಗಳನ್ನು ದೇಶದ ಆಧಾರಸ್ತಂಭಗಳೆಂದು ಸಾರಿದವರು. ಅವರು ಕಂಡ ಕನಸು ಈಗ ಒಂದೂಕಾಲು ಶತಮಾನದ ನಂತರ ನನಸಾಗುತ್ತಿದೆ. ಇದಕ್ಕೆ ಕಾರಣಕರ್ತರಾಗಿರುವವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಭಾರತವು ಇಡೀ ವಿಶ್ವವನ್ನು ಆಳುವಂತಾಗಬೇಕು. ಅದು ಈಗ ಶತಮಾನಗಳ ನಿದ್ರಾವಸ್ಥೆಯಿಂದ ಮೈ ಕೊಡವಿಕೊಂಡು ಎದ್ದಿದ್ದು, ಅದನ್ನು ತಡೆಯುವ ಯಾವ ಶಕ್ತಿಯೂ ಜಗತ್ತಿನಲ್ಲಿಲ್ಲ. ನಮ್ಮ ದೇಶವು ತಲೆ ಎತ್ತಿ ನಿಲ್ಲಬೇಕೆಂದರೆ ಜನ ಸಮುದಾಯಗಳ ಪಾಲ್ಗೊಳ್ಳುವಿಕೆ ಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೇಕು, ಕೈಗಾರಿಕೆಗಳು ಬೇರೂರಬೇಕು. ಬಡತನ ನಿರ್ಮೂಲನೆ ಆಗಿ, ಎಲ್ಲರಿಗೂ ಶಿಕ್ಷಣ ದೊರಕಬೇಕು: ಸ್ವಾಮಿ ವಿವೇಕಾನಂದ.