Kisan Drones: ಕೃಷಿಗೆ ನೆರವಾಗಲು ಬಂತು ಸ್ವದೇಶೀ ಡ್ರೋನ್‌:‌ ದೇಶವ್ಯಾಪಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ!

By Kannadaprabha News  |  First Published Feb 20, 2022, 7:53 AM IST

*ಔಷಧ-ಪೋಷಕಾಂಶ ಸಿಂಪಡಣೆ, ಬೆಳೆ ಆರೋಗ್ಯ ತಪಾಸಣೆ, ಮಾರುಕಟ್ಟೆಗೆ ಫಸಲು ಸಾಗಣೆ, ಭೂ-ದಾಖಲೆ ಡಿಜಿಟಲೀಕರಣಕ್ಕೆ ಸಹಕಾರಿ
*ದೇಶವ್ಯಾಪಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: 100 ಡ್ರೋನ್‌ ಲೋಕಾರ್ಪಣೆ: 2 ವರ್ಷಗಳಲ್ಲಿ 1 ಲಕ್ಷ ಡ್ರೋನ್‌ ಉತ್ಪಾದನೆ ಗುರಿ


ನವದೆಹಲಿ (ಫೆ. 20) : ಕೀಟನಾಶಕ, ಔಷಧ- ಪೋಷಕಾಂಶ ಸಿಂಪಡಣೆ, ಬೆಳೆ ಆರೋಗ್ಯ ತಪಾಸಣೆ, ಮಾರುಕಟ್ಟೆಗೆ ಫಸಲು ಸಾಗಣೆ, ಭೂ ದಾಖಲೆಗಳ ಡಿಜಿಟಲೀಕರಣ ಸೇರಿ ಕೃಷಿ ಕ್ಷೇತ್ರದ ಹಲವು ಕಾರ್ಯಗಳಿಗೆ ಡ್ರೋನ್‌ ಬಳಸುವ ಕ್ರಾಂತಿಕಾರಿ ‘ಕಿಸಾನ್‌ ಡ್ರೋನ್‌’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಫೆ.1ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಮಹತ್ವಾಕಾಂಕ್ಷಿ ಯೋಜನೆಯೊಂದು ಕೇವಲ 18 ದಿನಗಳಲ್ಲಿ ಜಾರಿಗೆ ಬಂದಂತಾಗಿದೆ.

ದೇಶದ ಅಲ್ಲಲ್ಲಿ ಪ್ರಗತಿಪರ ಕೃಷಿಕರು ಬೇಸಾಯದ ವಿವಿಧ ಕೆಲಸಗಳಿಗೆ ಡ್ರೋನ್‌ಗಳನ್ನು ಬಳಸುತ್ತಿದ್ದಾರೆಯಾದರೂ, ದೇಶವ್ಯಾಪಿ ಕೇಂದ್ರ ಸರ್ಕಾರದಿಂದ ಡ್ರೋನ್‌ ಯೋಜನೆಗೆ ಚಾಲನೆ ನೀಡುತ್ತಿರುವುದು ಇದೇ ಮೊದಲು. ವಿಶೇಷ ಎಂದರೆ, ಈ ಯೋಜನೆಗೆ ಬಳಕೆಯಾಗುತ್ತಿರುವುದು ಸ್ವದೇಶಿ ಡ್ರೋನ್‌ಗಳು. ಚೆನ್ನೈನ ಗರುಡಾ ಏರೋಸ್ಪೇಸ್‌ ಕಂಪನಿ ಯೋಜನೆಗೆ ಡ್ರೋನ್‌ಗಳನ್ನು ಪೂರೈಸಿದೆ.

Latest Videos

undefined

ದೇಶದ 100 ಸ್ಥಳಗಳಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ‘ಕಿಸಾನ್‌ ಡ್ರೋನ್‌’ ಯೋಜನೆಯನ್ನು ಮೋದಿ ಲೋಕಾರ್ಪಣೆಗೊಳಿಸಿದರು. 2 ವರ್ಷಗಳಲ್ಲಿ 1 ಲಕ್ಷ ಡ್ರೋನ್‌ಗಳು ಕೃಷಿ ಕೆಲಸಕ್ಕೆ ಉತ್ಪಾದನೆಯಾಗಲಿವೆ ಎಂದು ಘೋಷಿಸಿದರು.

ಇದನ್ನೂ ಓದಿ: Gobar-Dhan: ಇಂದೋರ್‌ನಲ್ಲಿ ಏಷ್ಯಾದ ಅತಿದೊಡ್ಡ ಜೈವಿಕ- ಸಿಎನ್‌ಜಿ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ!

ಕೃಷಿ ಕ್ಷೇತ್ರಕ್ಕೆ ಬಳಕೆಯಾಗುವ ಈ ಡ್ರೋನ್‌ಗಳು ಇಂಟರ್ನೆಟ್‌ ಆಧರಿತ ಸ್ಮಾರ್ಟ್‌ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ಮಾಡಲಿವೆ. ಬೆಳೆಗಳಿಗೆ ಕೀಟನಾಶಕ, ಪೋಷಕಾಂಶ ಸಿಂಪಡಣೆಯಿಂದ ಬೆಳೆಗಳ ಆರೋಗ್ಯದ ಮೇಲೆ ನಿಗಾ ಇಡುವ ಕಾರ್ಯವನ್ನು ಅತ್ಯಂತ ನಿಖರವಾಗಿ ಮಾಡಲಿವೆ. ಪ್ರತಿ ಡ್ರೋನ್‌ಗೆ 5ರಿಂದ 10 ಲಕ್ಷ ರು. ವೆಚ್ಚವಾಗುತ್ತದೆ. ಈ ಪೈಕಿ ಶೇ.75ರಷ್ಟನ್ನು ಕೇಂದ್ರ ಸರ್ಕಾರ ಕೃಷಿ ಉತ್ಪಾದಕ ಸಂಘಟನೆಗಳಿಗೆ ಸಬ್ಸಿಡಿ ರೂಪದಲ್ಲಿ ನೀಡಲಿದೆ. ಪ್ರತಿ ಹೆಕ್ಟೇರ್‌ಗೆ 6000 ರು.ನಂತೆ ಬಾಡಿಗೆ ಪಾವತಿಸಿಯೂ ಈ ಸಂಸ್ಥೆಗಳು ಡ್ರೋನ್‌ ಪಡೆಯಬಹುದು.

ತರಕಾರಿ, ಹಣ್ಣು, ಮೀನುಗಳನ್ನು ರೈತರ ಸ್ಥಳದಿಂದ ಮಾರುಕಟ್ಟೆಗೆ ನೇರವಾಗಿ ಸಾಗಿಸಲು ಅತ್ಯಧಿಕ ಸಾಮರ್ಥ್ಯದ ಡ್ರೋನ್‌ ಬಳಕೆ ಮಾಡಬಹುದಾಗಿದೆ. ಯಾವುದೇ ಹಾನಿ ಇಲ್ಲದೆ, ಅತ್ಯಂತ ಕಡಿಮೆ ಸಮಯದಲ್ಲಿ ಉತ್ಪನ್ನಗಳನ್ನು ಸಾಗಣೆ ಮಾಡುವುದರಿಂದ ರೈತರು ಹಾಗೂ ಮೀನುಗಾರರಿಗೆ ಬಹಳ ಲಾಭವಾಗಲಿದೆ. ಈ ಡ್ರೋನ್‌ ಮಾರುಕಟ್ಟೆಹೊಸ ಉದ್ಯೋಗ ಸೃಷ್ಟಿಸುವುದಲ್ಲದೆ, ಯುವಕರಿಗೆ ಹೊಸ ಅವಕಾಶಗಳನ್ನು ನಿರ್ಮಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ಡ್ರೋನ್‌ ಸ್ಟಾರ್ಟಪ್‌ ಸಂಸ್ಕೃತಿ: ಕಿಸಾನ್‌ ಡ್ರೋನ್‌ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಡ್ರೋನ್‌ ಸ್ಟಾರ್ಟಪ್‌ಗಳ ಹೊಸ ಸಂಸ್ಕೃತಿ ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಅದು ಈಗಿನ 100ರ ಬದಲಾಗಿ ಸಾವಿರಕ್ಕೆ ಏರಿಕೆಯಾಗಲಿದೆ. ಇದು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಿದೆ. ಡ್ರೋನ್‌ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವು ವಿಶ್ವಕ್ಕೆ ಹೊಸ ನಾಯಕನನ್ನು ಕಲ್ಪಿಸಿಕೊಡಲಿದೆ’ ಎಂದರು.

ಇದನ್ನೂ ಓದಿ: Panchayati Raj Day ಎಪ್ರಿಲ್ 24 ರಂದು ಕರ್ನಾಟಕದ ಗ್ರಾಮ ಪಂಚಾಯ್ತಿಗೆ ಪ್ರಧಾನಿ ಮೋದಿ ಭೇಟಿ!

‘ಈ ಹಿಂದೆ ನಾವು ಹಳ್ಳಿಗಳಲ್ಲಿ ಜನರಿಗೆ ಭೂಮಿಯ ದಾಖಲೆ ಒದಗಿಸಲು ಸ್ವಾಮಿತ್ವ ಯೋಜನೆಗಾಗಿ ಡ್ರೋನ್‌ ಬಳಸಿದ್ದೆವು. ನಂತರ ಔಷಧ ಮತ್ತು ಲಸಿಕೆ ಸಾಗಣೆಗಾಗಿಯೂ ಇದನ್ನು ಬಳಸಿದ್ದೆವು. ಕಿಸಾನ್‌ ಡ್ರೋನ್‌ಗಳು ಹೊಸ ಕ್ರಾಂತಿಯಲ್ಲಿ ಮೊದಲ ಹೆಜ್ಜೆಯಷ್ಟೇ. ರೈತರು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳನ್ನು ತಮ್ಮ ಹಣ್ಣು, ತರಕಾರಿ, ಹೂವು ಮೊದಲಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ರವಾನಿಸಲು ಬಳಸಿಕೊಳ್ಳಬಹುದು. ಈ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು’ ಎಂದು ಹೇಳಿದರು.

‘ಇದು 21ನೇ ಶತಮಾನದಲ್ಲಿ ಅತ್ಯಾಧುನಿಕ ಕೃಷಿ ಸವಲತ್ತು ಒದಗಿಸುವುದರಲ್ಲಿ ಹೊಸ ಅಧ್ಯಾಯ ಎಂದು ಬಣ್ಣಿಸಿದ ಮೋದಿ, ಇದು ಡ್ರೋನ್‌ ವಲಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವುದು ಮಾತ್ರವಲ್ಲದೇ ಅನಿಯಮಿತ ಸಾಧ್ಯತೆಗಳಿಗೆ ಬಾಗಿಲು ತೆರೆಯಲಿದೆ. ಗರುಡಾ ಏರೋಸ್ಪೇಸ್‌ನಂಥ ಸ್ಟಾರ್ಟಪ್‌ಗಳು ಆರಂಭವಾಗುವುದರಿಂದ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ’ ಎಂದರು.

ಕಿಸಾನ್‌ ಡ್ರೋನ್‌ ಬಳಕೆ ಹೇಗೆ?: ಕಿಸಾನ್‌ ಡ್ರೋನ್‌ಗಳನ್ನು ರೈತರಿಗೆ ನೆರವಾಗುವ ಕೃಷಿ ಉತ್ನನ್ನ ಸಂಘಗಳು ಖರೀದಿ ಮಾಡಬಹುದು. ಕೇಂದ್ರ ಸರ್ಕಾರವು ಈ ಸಂಘಗಳಿಗೆ ಡ್ರೋನ್‌ನ ಒಟ್ಟು ಬೆಲೆಯ ಶೇ.75ರಷ್ಟುಹಣವನ್ನು ಸಹಾಯಧನವಾಗಿ ನೀಡುತ್ತದೆ. ಖರೀದಿ ಮಾಡಿಸಲು ಇಚ್ಛಿಸದೆ ಬಾಡಿಗೆಗೆ ಕೂಡ ಡ್ರೋನ್‌ ಪಡೆಯಬಹುದು. 

ಇದಕ್ಕೆ ಪ್ರತಿ ಹೆಕ್ಟೇರ್‌ಗೆ 6000 ರು. ಬಾಡಿಗೆ ದರ ವಿಧಿಸಲಾಗುತ್ತದೆ. 2023ರ ಮಾ.1ರವರೆಗೆ ಈ ಸಹಾಯಧನ ಯೋಜನೆ ಜಾರಿಯಲ್ಲಿರುತ್ತದೆ. ಈ ರೀತಿ ಡ್ರೋನ್‌ ಪಡೆದುಕೊಂಡ ಸಂಘಗಳು ತಮ್ಮ ವ್ಯಾಪ್ತಿಯ ರೈತರ ಅಥವಾ ಸಂಘದ ಸದಸ್ಯ ರೈತರ ಬೆಳೆಗಳಿಗೆ ಔಷಧ ಸಿಂಪಡಣೆ ಹಾಗೂ ಪೋಷಕಾಂಶ ನೀಡಿಕೆಗೆ ನೀಡಬಹುದು.

2 ವರ್ಷದಲ್ಲಿ 1 ಲಕ್ಷ ಕಿಸಾನ್‌ ಡ್ರೋನ್‌: ಕಿಸಾನ್‌ ಡ್ರೋನ್‌ ನಿರ್ಮಿಸಿರುವುದು ಚೆನ್ನೈ ಮೂಲದ ಗರುಡಾ ಏರೋಸ್ಪೇಸ್‌ ಎಂಬ ಖಾಸಗಿ ಕಂಪನಿ. ಇದು ಈಗಾಗಲೇ 400ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು 100ಕ್ಕೂ ಹೆಚ್ಚು ಖಾಸಗಿ ಕಂಪನಿಗಳಿಗೆ ತನ್ನ ಡ್ರೋನ್‌ಗಳನ್ನು ಒದಗಿಸಿದೆ. ಕಂಪನಿ ಮುಂದಿನ 2 ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಕಿಸಾನ್‌ ಡ್ರೋನ್‌ಗಳನ್ನು ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

ಏನಿದು ಯೋಜನೆ?: ಕೃಷಿ ಕೆಲಸಗಳಿಗೆ ಇಂಟರ್ನೆಟ್‌ ಆಧರಿತ ಸ್ಮಾರ್ಟ್‌ ತಂತ್ರಜ್ಞಾನ ಹೊಂದಿದ ಡ್ರೋನ್‌ ಬಳಸುವ ಕಾರ್ಯಕ್ರಮ. ಇದರಿಂದ ರೈತರಿಗೆ ಸಮಯ ಉಳಿತಾಯವಾಗಲಿದೆ. ನಿಖರವಾಗಿ ಕೃಷಿ ಕೆಲಸ ನಡೆಯಲಿದೆ. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೃಷಿ ಕ್ಷೇತ್ರಕ್ಕೆ ವರದಾನವಾಗಲಿದೆ. ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಾಗಣೆಗೆ ಅನುಕೂಲವಾಗಲಿದೆ.

ಅನುಷ್ಠಾನ ಹೇಗೆ?: ಒಂದು ಕಿಸಾನ್‌ ಡ್ರೋನ್‌ಗೆ 5ರಿಂದ 10 ಲಕ್ಷ ರು. ಬೆಲೆ ಇದೆ. ಇದನ್ನು ಖರೀದಿಸಬಯಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಶೇ.75ರಷ್ಟುಸಬ್ಸಿಡಿ ನೀಡುತ್ತದೆ. ಹೆಕ್ಟೇರ್‌ಗೆ 6000 ರು.ನಂತೆ ಪಾವತಿಸಿ ಸಂಸ್ಥೆಗಳು ಇದನ್ನು ಬಾಡಿಗೆಗೂ ಪಡೆಯಬಹುದು. ಸದ್ಯ 100 ಡ್ರೋನ್‌ ಲಭ್ಯ ಇವೆ. 2 ವರ್ಷದಲ್ಲಿ ಈ ಸಂಖ್ಯೆ 1 ಲಕ್ಷಕ್ಕೇರಲಿದೆ.

ಕ್ರಾಂತಿಯ ಮೊದಲ ಹೆಜ್ಜೆ: ಕಿಸಾನ್‌ ಡ್ರೋನ್‌ಗಳು ಹೊಸ ಕ್ರಾಂತಿಯ ಮೊದಲ ಹೆಜ್ಜೆ. ಇದು ಹೊಸ ಉದ್ಯೋಗ ಸೃಷ್ಟಿಸುವುದರ ಜತೆಗೆ ಯುವಕರಿಗೆ ಹೊಸ ಅವಕಾಶಗಳನ್ನು ನಿರ್ಮಿಸುತ್ತದೆ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

click me!