*ಪ್ರಧಾನಿ ಮೋದಿ ಟ್ವೀಟರ್ ಖಾತೆ ಹ್ಯಾಕ್
*ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್ ಬಗ್ಗೆ ಪೋಸ್ಟ್
*ಕೆಲ ಸಮಯದ ನಂತರ ಖಾತೆ ರಿಸ್ಟೋರ್
ನವದೆಹಲಿ(ಡಿ. 12): ಭಾನುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ (PM Narendra Modi Twitter) ಹ್ಯಾಂಡಲ್ ಹ್ಯಾಕ್ವ(Hack) ಮಾಡಲಾಗಿದ್ದು ಕ್ರಿಪ್ಟೋಕರೆನ್ಸಿಯನ್ನು (Cryptocurrency) ಉತ್ತೇಜಿಸುವ ಟ್ವೀಟ್ ಪೋಸ್ಟ್ ಮಾಡಲಾಗಿತ್ತು. ಆದರೆ ಕೆಲ ಸಮಯದಲ್ಲಿ ಖಾತೆಯನ್ನು ರಿಸ್ಟೋರ್ (Restore) ಮಾಡಲಾಗಿದ್ದು ಟ್ವೀಟ್ ಡಿಲೀಟ್ ಮಾಡಲಾಗಿದೆ. ಖಾತೆ ರಿಸ್ಟೋರ್ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನಿ ಕಚೇರಿ, ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಈಗ ಅದನ್ನು ಮರುಸ್ಥಾಪಿಸಲಾಗಿದೆ. ಈ ಬಗ್ಗೆ ಟ್ವೀಟರ್‌ಗೆ ತಿಳಿಸಿದ್ದೇವೆ ಎಂದು ಹೇಳಿದೆ. ಖಾತೆ ಹ್ಯಾಕ್ ಮಾಡಿದಾಗ ಪೋಸ್ಟ್ ಹಂಚಿಕೊಂಡ ಯಾವುದೇ ಮಾಹಿತಿ ಪರಿಗಣಿಸಬೇಡಿ ಎಂದು ಅದು ತಿಳಿಸಿದೆ.
ಖಾತೆಯನ್ನು ಮರುಸ್ಥಾಪಿಸುವ ಮೊದಲು, "ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ (Bitcoin) ಅನ್ನು ಕಾನೂನುಬದ್ಧವಾಗಿ ಅಳವಡಿಸಿಕೊಂಡಿದೆ. ಸರ್ಕಾರವು ಅಧಿಕೃತವಾಗಿ 500 BTC ಯನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ" ಎಂದು ನಮೂದಿಸಿದ ಟ್ವೀಟ್ ಅನ್ನು PM ಮೋದಿ ಅವರ ಟೈಮ್‌ಲೈನ್‌ನಲ್ಲಿ URL ನೊಂದಿಗೆ ಹಂಚಿಕೊಳ್ಳಲಾಗಿದೆ. ರಾತ್ರಿ ಸುಮಾರು 2 ಗಂಟೆಗೆ ಈ ಟ್ವೀಟ್ ಮಾಡಲಾಗಿದ್ದು ಬಿಟ್‌ಕಾಯಿನ್ ಅನ್ನು ಭಾರತ ಅಧಿಕೃತಗೊಳಿಸಿರುವ ಬಗ್ಗೆ ತಿಳಿಸಿ "The Future Has Come Today!" ಎಂದು ಬರೆಯಲಾಗಿದೆ
ಖಾತೆಯನ್ನು ರಿಸ್ಟೋರ್ ಮಾಡಿದ ನಂತರ ಪ್ರಧಾನ ಮಂತ್ರಿ (PMO India) ಅಧಿಕೃತ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ. "ಪ್ರಧಾನಿ @narendramodi ಅವರ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲಾಗಿದೆ. ಈ ವಿಷಯವನ್ನು ಟ್ವಿಟರ್‌ಗೆ ತಿಳಿಸಲಾಗಿದ್ದು ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಯನ್ನು ಹ್ಯಾಕ್ ಮಾಡಿದಾಗ ಹಂಚಿಕೊಂಡ ಯಾವುದೇ ಟ್ವೀಟ್‌ಗಳನ್ನು ನಿರ್ಲಕ್ಷಿಸಬೇಕು" ಎಂದು PMO ಇಂಡಿಯಾ ತಿಳಿಸಿದೆ.
The Twitter handle of PM was very briefly compromised. The matter was escalated to Twitter and the account has been immediately secured.
In the brief period that the account was compromised, any Tweet shared must be ignored.
ಸೆಪ್ಟೆಂಬರ್ 2020 ರಲ್ಲೂ ಹ್ಯಾಕ್ !
ಸೆಪ್ಟೆಂಬರ್ 2020 ರಲ್ಲಿ, ಪಿಎಂ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆಗ ಕೂಡ ಕ್ರಿಪ್ಟೋಕರೆನ್ಸಿಯನ್ನು ಬಗ್ಗೆ ಟ್ವೀಟ್‌ಗಳನ್ನು ಮಾಡಲಾಗಿತ್ತು. ಟ್ವೀಟ್‌ಗಳ ಸರಣಿಯಲ್ಲಿ, ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ narendramodi_in ಖಾತೆಯಿಂದ "ಕೋವಿಡ್ -19 ಗಾಗಿ PM ರಾಷ್ಟ್ರೀಯ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡಲು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಈಗ ಭಾರತದಲ್ಲಿ ಈಗ ಕ್ರಿಪ್ಪೋ ವ್ಯವಹಾರ ಪ್ರಾರಂಭವಾಗಿದೆ. ಕ್ರಿಪ್ಟೋ ಕರೆನ್ಸಿ, ದಯವಿಟ್ಟು 0xae073DB1e5752faFF169B1ede7E8E94bF7f80Be6 ಗೆ ದೇಣಿಗೆ ನೀಡಿ." ಎಂದು ಟ್ವೀಟ್ ಮಾಡಲಾಗಿತ್ತು.